Advertisement

ಸಮಾಜರತ್ನಗಳನ್ನು ನೀಡಿದ ಶಾಲೆಗೆ 101 ವರ್ಷಗಳ ಇತಿಹಾಸ

10:22 AM Dec 08, 2019 | mahesh |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1918 ಶಾಲೆ ಆರಂಭ
ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಶಾಲೆ

ಮಹಾನಗರ: ಶತಮಾನ ದಾಟಿದ ಈ ಶಾಲೆಯು ಸಮಾಜಕ್ಕೆ ಜನಪ್ರತಿನಿಧಿಗಳು, ಅತಿ ಹೆಚ್ಚು ವೈದ್ಯರನ್ನು ನೀಡಿದ ಹಿರಿಮೆಯೊಂದಿಗೆ ಮುನ್ನಡೆಯುತ್ತಿದೆ. 101 ವರ್ಷಗಳ ಇತಿಹಾಸವಿರುವ ಶಾಲೆಯ ಅಭಿವೃದ್ಧಿಗೆ ಇದೇ ಹಳೆ ವಿದ್ಯಾರ್ಥಿಗಳು ಆಧಾರಸ್ತಂಭಗಳಾಗಿದ್ದಾರೆ.

ಗಾಂಧಿನಗರ ದ.ಕ.ಜಿ.ಪಂ. ಹಿಪ್ರಾ ಶಾಲೆಯು ಮಂಗಳೂರು ಉತ್ತರದಲ್ಲಿ ಕಾರ್ಯನಿರ್ವಹಿಸುತ್ತಿದೆ. 1918ರಲ್ಲಿ ಆರಂಭವಾದ ಶಾಲೆ ಕಳೆದ ವರ್ಷ ಶತಮಾನವನ್ನೂ ಆಚರಿಸಿಕೊಂಡಿದೆ. ಶಾಲೆ ಆರಂಭವಾದಾಗ ಸನಿಹದ ಲೇಡಿಹಿಲ್‌, ಉರ್ವ, ಅಶೋಕನಗರ, ಮಣ್ಣಗುಡ್ಡೆ ಮುಂತಾದೆಡೆಗಳಿಂದ ಮಕ್ಕಳು ಈ ಶಾಲೆಗೆ ಬರುತ್ತಿದ್ದರು. ಪ್ರಸ್ತುತ ಶಾಲಾ ಆಸುಪಾಸಿನಲ್ಲಿ ಸುಮಾರು 8 ಶಾಲೆಗಳಿದ್ದು, ಮಕ್ಕಳೆಲ್ಲರು ವಿವಿಧ ಶಾಲೆಗಳಿಗೆ ಹಂಚಿ ಹೋಗಿದ್ದಾರೆ. ಪ್ರಸ್ತುತ 190 ಮಕ್ಕಳಿದ್ದು, ಓರ್ವ ಮುಖ್ಯ ಶಿಕ್ಷಕಿ, ಆರು ಮಂದಿ ಶಿಕ್ಷಕರು, ಓರ್ವ ಅತಿಥಿ ಶಿಕ್ಷಕಿ ಮತ್ತೋರ್ವ ಗೌರವ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಮುಖ್ಯೋಪಾಧ್ಯಾಯರಾಗಿದ್ದವರ ಬಗ್ಗೆ ತಿಳಿದಿಲ್ಲ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ಹಳೆ ವಿದ್ಯಾರ್ಥಿಗಳೇ ಆಧಾರ
ಲಂಡನ್‌ನಲ್ಲಿ ಕಣ್ಣಿನ ತಜ್ಞರಾಗಿರುವ ಡಾ| ವಿಠಲ್‌ದಾಸ್‌ ಪೈ ಶಾಲೆಯ ಹಳೆ ವಿದ್ಯಾರ್ಥಿ. ಊರಿಗೆ ಆಗಮಿಸಿದಾಗೆಲ್ಲ ಮರೆಯದೆ ಶಾಲೆಗೆ ಬಂದು ಶಾಲೆಗೆ ಅಗತ್ಯವಿರುವ ಕೆಲಸ, ಸಾಮಗ್ರಿಗಳನ್ನು ಪೂರೈಸುವ ವಿಟuಲ್‌ದಾಸ್‌ ಪೈ ಶಾಲೆಯ ಹಳೆ ವಿದ್ಯಾರ್ಥಿ ಎಂಬುದೇ ಹೆಮ್ಮೆ ಎನ್ನುತ್ತಾರೆ ಶಿಕ್ಷಕರು. ಶಾಲೆಯ ಬಹುತೇಕ ಹಳೆ ವಿದ್ಯಾರ್ಥಿಗಳು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ಶಾಲೆಯ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

Advertisement

ವೈದ್ಯರಾಗಿದ್ದ ಡಾ| ಮಾಧವ ಭಂಡಾರಿ, ಪ್ರೊಫೆಸರ್‌ ಐ. ವಾಸುದೇವ ರಾವ್‌, ಕೆಎಂಸಿ ಡೀನ್‌ ಡಾ| ಎಂ. ವಿ. ಪ್ರಭು, ವೈದ್ಯ ಡಾ| ಪಿ. ಜಿ. ಶೆಣೈ, ಕಾರ್ಪೊರೇಟರ್‌ ಗಣೇಶ್‌ ಕುಲಾಲ್‌, ದಿನೇಶ್‌ ಪೈ, ಎಸ್‌. ಪಿ. ಹರಿದಾಸ್‌ ಅವರೆಲ್ಲ ಶಾಲೆಯ ಈ ಸಾಧಕ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

ಅದೇ ಕಟ್ಟಡ, ಅದೇ ಮರದ ಪರಿಕರ
ಈ ಶಾಲೆಯ ವೈಶಿಷ್ಟವೆಂದರೆ, ಶಾಲೆ ನಿರ್ಮಾಣವಾದಂದಿನಿಂದ ಕಟ್ಟಡ ಬದಲಾಯಿಸದೇ, ಒಂದೇ ಕಟ್ಟಡದಲ್ಲಿ ಕಾರ್ಯಾ ಚರಿಸು ತ್ತಿದೆ. ಅಲ್ಲದೆ, ನಿರ್ಮಾಣದ ವೇಳೆ ಬಳಸಿದ ಮರದ ಪರಿ ಕರ ಗಳೇ ಇನ್ನೂ ಶಾಲೆಯ ಆಧಾರಸ್ತಂಭಗಳಾಗಿವೆ. 1.74 ಸೆಂಟ್ಸ್‌ ಜಾಗ ಹೊಂದಿರುವ ಶಾಲೆಯ ಪಕ್ಕದಲ್ಲಿ ಅಂಗನವಾಡಿಯೂ ಕಾರ್ಯ ನಿರ್ವಹಿಸುತ್ತಿದೆ. ಆರಂಭದಿಂದ 2011ರವರೆಗೆ 7ನೇ ತರಗತಿಯವರೆಗೆ ಇದ್ದರೆ, 2012ರಲ್ಲಿ 8ನೇ ತರಗತಿ ಸೇರ್ಪಡೆಯಾಗುವ ಮೂಲಕ ಉನ್ನತೀಕರಿಸಿದ ಶಾಲೆಯಾಗಿ ಮೇಲ್ದರ್ಜೆಗೇರಿತು.

ವಿದ್ಯಾರ್ಥಿಗಳೇ ಸ್ವತ್ಛತಾ ರಾಯಭಾರಿಗಳು
ಶತಮಾನ ದಾಟಿದ ಗಾಂಧಿನಗರ ಶಾಲೆಯಲ್ಲಿ ಎಲ್ಲ ಮೂಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡ ಲಾಗಿದೆ. ಆಟದ ಮೈದಾನ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕೈತೋಟ, ಪ್ರಯೋಗಾಲಯ, ಕಂಪ್ಯೂ ಟರ್‌ ಕೊಠಡಿ, ಗ್ರಂಥಾ ಲಯ ವ್ಯವಸ್ಥೆ ಶಾಲೆಯಲ್ಲಿದೆ.
ಕೈತೋಟ ಮತ್ತು ಶಾಲಾ ಸ್ವತ್ಛತಾ ಕಾರ್ಯವನ್ನು ವಿದ್ಯಾರ್ಥಿ ಗಳೇ ನಿರ್ವಹಿಸುತ್ತಾರೆ. ಶಿಸ್ತು, ನೈತಿಕ ಶಿಕ್ಷಣ, ಪಠ್ಯೇತರ ಚಟು ವಟಿಕೆ ಗಳಿಗೆ ಒತ್ತು ನೀಡಲಾಗುತ್ತಿದೆ.

ಕಡಿಮೆಯಾದ ಸ್ಥಳೀಯ ಮಕ್ಕಳು
ಸ್ಥಳೀಯ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಆರಂಭವಾದ ಈ ಶಾಲೆಯಲ್ಲಿ ಪ್ರಸ್ತುತ ಸ್ಥಳೀಯ ಮಕ್ಕಳು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆಂಗ್ಲ ಮಾಧ್ಯಮ ಶಿಕ್ಷಣದೆಡೆಗಿನ ವ್ಯಾಮೋಹದಿಂದಾಗಿ ಗುಣಮಟ್ಟದ ಶಿಕ್ಷಣವಿದ್ದರೂ, ಶತಮಾನ ದಾಟಿದ ಸರಕಾರಿ ಕನ್ನಡ ಶಾಲೆಗೆ ಸ್ಥಳೀಯ ಮಕ್ಕಳು ಬರುತ್ತಿಲ್ಲ. ಪ್ರಸ್ತುತ ಶೇ. 15ರಷ್ಟು ಸ್ಥಳೀಯ ಮಕ್ಕಳು ಶಾಲೆಯಲ್ಲಿದ್ದರೆ, ಉಳಿದೆಲ್ಲರೂ ಬಾಗಲಕೋಟೆ ಮತ್ತು ಉತ್ತರ ಕರ್ನಾಟಕ ಭಾಗದ ಮಕ್ಕಳು. ಉತ್ತರ ಕರ್ನಾಟಕ ಭಾಗಗಳಿಂದ ಕೆಲಸ ಹುಡುಕಿಕೊಂಡು ವಲಸೆ ಬಂದ ವಲಸೆ ಕಾರ್ಮಿಕರ ಮಕ್ಕಳೇ ಈ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ. ಕರ್ನಾಟಕದವರಲ್ಲದ, ಹಿಂದಿ ಮಾತನಾಡುವ ಮಕ್ಕಳೂ ಇಲ್ಲಿದ್ದು, ಅವರಿಗೆ ಕನ್ನಡ ಕಲಿಸುವುದರಲ್ಲಿ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ.

ನಮ್ಮ ಶಾಲೆ ಯಲ್ಲಿ ಶಿಸ್ತು, ಸ್ವತ್ಛತೆಯ ಪಾಠವನ್ನು ವಿದ್ಯಾರ್ಥಿಗಳಿಗೆ ಎಳವೆಯಲ್ಲೇ ಕಲಿಸುವ ಪರಿಪಾಠ ನಡೆಯುತ್ತಿದೆ. ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳ ಪರಿಶ್ರಮ ಸಾಕಷ್ಟಿದೆ.
-ಯಶೋದಾ ಬಿ., ಮುಖ್ಯ ಶಿಕ್ಷಕಿ

ಎಲ್ಲರೊಂದಿಗೆ ಬೆರೆಯುವ ಗುಣ, ಕಷ್ಟ ಸುಖವನ್ನು ಸಮಾನಾಗಿ ಸ್ವೀಕರಿಸುವ ಮನೋಭಾವವನ್ನು ಗಾಂಧಿನಗರ ಶಾಲೆ ಕಲಿಸಿಕೊಟ್ಟಿದೆ. ಬಡವ, ಬಲ್ಲಿದ ಎನ್ನುವ ಭೇದ ಭಾವ ಇಲ್ಲದೆ, ಎಲ್ಲ ರೀತಿಯ ಮಕ್ಕಳೊಂದಿಗೆ ಬೆಳೆದ ಪರಿಣಾಮ ನನ್ನ ಬದುಕಿನಲ್ಲಿ ಸಾಮಾಜಿಕ ಬದ್ಧತೆ ಜಾಸ್ತಿಯಾಗಿದೆ.
-ಡಾ| ಎಂ. ವಿ. ಪ್ರಭು, ಕೆಎಂಸಿ ಡೀನ್‌, ಹಳೆ ವಿದ್ಯಾರ್ಥಿನಿ

  • ಧನ್ಯಾ ಬಾಳೆಕಜೆ
Advertisement

Udayavani is now on Telegram. Click here to join our channel and stay updated with the latest news.

Next