Advertisement

ಶಾಲೆಗಳಲ್ಲಿ ಮಕ್ಕಳ ಜಾಗೃತಿಗೆ 100ನೇ ಮಂಗ!

11:11 AM Feb 27, 2020 | mahesh |

ಕುಂದಾಪುರ: ಸ್ವಚ್ಛತೆಯ ಜಾಗೃತಿಗಾಗಿ ಅಲ್ಲಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿವೆ. ಇದು ದಕ್ಷಿಣ ಭಾರತದ ಕೆಲವೇ ಕಡೆ ನಡೆಯುತ್ತಿರುವ ಕಾರ್ಯಕ್ರಮ. ಹಾಗಂತ ಯಾರು ಬೇಕಾದರೂ ಎಲ್ಲಿ ಬೇಕಾದರೂ ನಡೆಸಬಹುದಾದ ಸರಳ ಚಟುವಟಿಕೆ. ನೂರು ಮಂಗಗಳು ಸೇರಿದಲ್ಲಿ ಮೊದಲ ಮಂಗ ಏನು ಮಾಡುತ್ತದೆಯೋ ಅನಂತರದ ಮಂಗವೂ ಅದನ್ನೇ ಮಾಡುತ್ತದೆ. ಒಂದನೇ ಮಂಗ ಬೇರೆ ಮಾಡಿದರೆ ಅದನ್ನು ಇತರ ಎಲ್ಲ ಮಂಗಗಳೂ ಅನುಸರಿಸುತ್ತವೆ. ಈ ತತ್ವವನ್ನು ಆಧರಿಸಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಸ್ವಚ್ಛತೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 100ನೇ ಮಂಗ ಎನ್ನುವ ಕಾರ್ಯಕ್ರಮ ಸರಣಿಯನ್ನು ಮಾಡಲಾಗುತ್ತಿದೆ.

Advertisement

ಎಫ್ಎಸ್‌ಎಲ್‌ ಇಂಡಿಯಾ
ಎಫ್ಎಸ್‌ಎಲ್‌ ಇಂಡಿಯಾ ಎನ್ನುವ ಸ್ವಯಂಸೇವಾ ಸಂಸ್ಥೆ ಈ ಕಾರ್ಯಕ್ರಮ ನಡೆಸುತ್ತಿದೆ. ಪಾಂಡಿಚೆರಿ, ಬೆಂಗಳೂರು, ಮೈಸೂರು, ಮತ್ತು ಕುಂದಾಪುರದ ಚಿತ್ತೂರು, ಕೊಡ್ಲಾಡಿ, ಮಾವಿನಕಟ್ಟೆ ಮೂಕಾಂಬಿಕಾ ಶಾಲೆ ಹಾಗೂ ಹಟ್ಟಿಯಂಗಡಿ ಸಿದ್ಧಿವಿನಾಯಕ ಶಾಲೆಗಳು ಸೇರಿ 15 ಕಡೆ ಈ ಕಾರ್ಯಕ್ರಮ 8, 9, 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿದೆ. ಒಟ್ಟು 20 ಕಡೆ ತರಗತಿಗಳನ್ನು ನಡೆಸಲಾಗುತ್ತದೆ.

ಏನಿದು ಮಂಗ?
ಟೋಪಿ ಮಾರುವ ವ್ಯಕ್ತಿ ಮರದಡಿ ಮಲಗಿದ್ದಾಗ ಮಂಗಗಳು ಟೋಪಿ ಕೊಂಡೊಯ್ದು ಅನಂತರ ಆ ವ್ಯಕ್ತಿ ಟೋಪಿಯನ್ನು ನೆಲಕ್ಕೆಸೆದಾಗ ಎಲ್ಲ ಮಂಗಗಳೂ ಅದನ್ನು ಎಸೆಯುವ ಮೂಲಕ ಆತ ಟೋಪಿಗಳನ್ನು ಮರಳಿ ಪಡೆದ ಕಥೆ ಪಠ್ಯದಲ್ಲೂ ಇತ್ತು. ಇದು ಕೂಡಾ ಅದೇ ಮಾದರಿಯ ಸ್ವಲ್ಪ ಭಿನ್ನವಾದ ಕಥೆ. 100ನೇ ಮಂಗದ ತರಬೇತಿ, ತರಗತಿಗಳಲ್ಲಿ, ಒಂದು ದ್ವೀಪದಲ್ಲಿ 100 ಕೋತಿಗಳು ಸ್ವಚ್ಛತೆ ಇಲ್ಲದೆ ಸಿಹಿ ಆಲೂಗಡ್ಡೆಯನ್ನು ತಿನ್ನುತ್ತವೆ. ಅನಂತರ 1 ಕೋತಿ ಸಿಹಿ ಆಲೂಗಡ್ಡೆಯನ್ನು ತೊಳೆಯುವ ಮೂಲಕ ತಿನ್ನಲು ಪ್ರಾರಂಭಿಸಿ ಅನಂತರ ಎಲ್ಲ 100 ಕೋತಿಗಳು ಒಂದೇ ರೀತಿ ಅನುಸರಿಸುವ ನೀತಿಯ ಕಥೆ ಇದು. ತೊಳೆಯುವುದು ಮತ್ತು ತಿನ್ನುವುದು ಎನ್ನುವ ಕೋತಿಗಳ ಬುದ್ಧಿ ಮತ್ತೂಂದು ದೂರದ ದ್ವೀಪವನ್ನೂ ಹರಡಿತು. ಏಕೆಂದರೆ ಇಲ್ಲಿಂದ ಹೋದ ಒಂದು ಮಂಗ ಅಲ್ಲಿ ತೊಳೆದು ತಿಂದು ಇತರ ಮಂಗಗಳೂ ಅನುಸರಿಸಿದವು.

ಹಾಗೆಯೇ ನಾವು ಹತ್ತರೊಡನೆ ಹನ್ನೊಂದಾಗುವ ಬದಲು ನಾಗರಿಕ ಪ್ರಜ್ಞೆಯನ್ನು ಕಾಪಾಡಬೇಕು. ಭಾರತದ ನಾಗರಿಕರಾಗಿ ಜವಾಬ್ದಾರಿಯಿಂದ ವರ್ತಿಸಬೇಕು. ನಮ್ಮ ನಡೆ ಇತರರಿಗೆ ಅನುಸರಣೀಯವಾಗಬೇಕು. ಮಾದರಿಯಾಗಿರಬೇಕು. ನಮ್ಮ ದೇಶದ ಕಾನೂನನ್ನು ಗೌರವಿಸುವಂತೆ ಇರಬೇಕು. ನಮ್ಮ ದೇಶದ ಮರ್ಯಾದೆ ಯನ್ನು ಎತ್ತರಕ್ಕೆ ಏರಿಸುವಂತೆ ಇರಬೇಕು ಎಂದು ಮಕ್ಕಳಿಗೆ ತಿಳಿಹೇಳುವುದು ಇಂತಹ ಆಟಗಳ ಉದ್ದೇಶ. ಎಫ್ಎಸ್‌ಎಲ್‌ ಅಧಿವೇಶನವು ಮಕ್ಕಳನ್ನು ಓದು ಹಾಗೂ ನಾಗರಿಕ ಪ್ರಜ್ಞೆಗೆ ಹತ್ತಿರವಾಗಿಸಲು, ಹೆಚ್ಚಿನ ಚಟುವಟಿಕೆಗಳನ್ನು ಮೋಜಿನ ಆಟಗಳಂತೆ ನಡೆಸಿದೆ. ಈ ಮೂಲಕ ಸುಲಭವಾಗಿ ಅರಿಯಲು ಸಹಕಾರಿಯಾಗಿದೆ. ಹತ್ತಾರು ಜಾಗೃತಿಗಳನ್ನು ಮೂಡಿಸುತ್ತಿದೆ.

ಸ್ವಚ್ಛತೆ
ಮಂಗಗಳ ಕಥೆಗೆ ನಿಲ್ಲಲಿಲ್ಲ. ಈ ಪ್ರಾತ್ಯಕ್ಷಿಕೆ ಅನಂತರ ತಂಡದವರು ಶಾಲೆಯ ಸುತ್ತಲಿನ ಕೆಲವು ಸಮಸ್ಯೆಗಳನ್ನು ಕಂಡುಹಿಡಿಯುತ್ತಾರೆ. ವಿದ್ಯಾರ್ಥಿಗಳು ಆ ಸಮಸ್ಯೆ ಪರಿಹರಿಸಬೇಕು. ಅವರು ಪರಿಹಾರವನ್ನು ಕಂಡುಕೊಂಡ ನಂತರ ಶಾಲೆಯ ಸುತ್ತಮುತ್ತಲಿನ ಸಮಸ್ಯೆಗಳಗೆ ಹೇಗೆ ಸ್ಪಂದಿಸುವುದು ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ರಾಕೇಶ್‌, ರೋಹನ್‌, ಅಶ್ವಿ‌ನಿ ಅವರು ಚೆನ್ನೈಯಲ್ಲಿ ಈ ಅಧಿವೇಶನಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಈ ಕಾರ್ಯಕ್ರಮದಿಂದಾಗಿ ಮಕ್ಕಳಲ್ಲಿ ವರ್ತನೆಯಲ್ಲಿ ಸ್ಥಳದಲ್ಲಿಯೇ ಬದಲಾವಣೆ ಕೂಡ ಗೋಚರಿಸುತ್ತದೆ. ಜಾಗೃತಿ ಮೂಡಿದ ಅರಿವು ನಮಗೇ ಆಗುತ್ತದೆ ಎನ್ನುತ್ತಾರೆ ಶಿಕ್ಷಕರೊಬ್ಬರು. ಎಲ್ಲೆಂದರಲ್ಲಿ ಕಸ ಎಸೆಯುವ ಕುರಿತು, ನೀರು ಪೋಲು ಮಾಡುವುದು, ಇಂಧನ ಉಳಿತಾಯ ಮಾಡುವುದು ಸೇರಿದಂತೆ ನಾಗರಿಕ ಪ್ರಜ್ಞೆ ಉಂಟಾಗಿದೆ.

Advertisement

ನಾಗರಿಕತೆಗಾಗಿ ಇದು ಮಕ್ಕಳಲ್ಲಿ ನಾಗರಿಕತೆ, ಸ್ವಯಂ ಜಾಗೃತಿ ಮೂಡಿಸಲು ಸಹಕಾರಿ. ನಮ್ಮ ಧ್ಯೇಯ ವಾಕ್ಯವು ಮಕ್ಕಳಲ್ಲಿ ನಾಗರಿಕ ಪ್ರಜ್ಞೆ ಮೂಡಿಸಿ ಭವಿಷ್ಯದ ನಾಗರಿಕರನ್ನು ಈಗಲೇ ಸಶಕ್ತ ಸಾಮಾಜಿಕವಾದ ಸಕ್ರಿಯ ನಾಗರಿಕರನ್ನಾಗಿ ಮಾಡುವುದು.
-ದಿನೇಶ್‌ ಸರಂಗ, ಎಫ್‌ಎಸ್‌ಎಲ್‌ ಇಂಡಿಯಾ.

Advertisement

Udayavani is now on Telegram. Click here to join our channel and stay updated with the latest news.

Next