Advertisement

1008 ಕಿ. ಮೀ. ರಾಜ್ಯ ಹೆದ್ದಾರಿ ಮರು ಡಾಂಬರೀಕರಣ: ಡಿಪಿಆರ್ ಸಿದ್ಧ ಪಡಿಸಲು ಸಿಎಂ ಸೂಚನೆ

07:51 PM Feb 02, 2022 | Team Udayavani |

ಬೆಂಗಳೂರು: ಕೆಶಿಪ್, ಎಸ್ ಹೆಚ್ ಡಿಪಿ ಹಾಗೂ ಕೆಆರ್ ಡಿ ಸಿ ಎಲ್ ವತಿಯಿಂದ ಅಭಿವೃದ್ಧಿ ಪಡಿಸಲಾಗಿದ್ದ ರಸ್ತೆಗಳ ಪೈಕಿ ಜೀವಿತಾವಧಿ ಮುಕ್ತಾಯಗೊಂಡ 1008 ಕಿ.ಮೀ. ರಾಜ್ಯ ಹೆದ್ದಾರಿಗಳ ಮರುಡಾಂಬರೀಕರಣಕ್ಕೆ ಡಿಪಿಆರ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. .

Advertisement

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸೂಚನೆ ನೀಡಲಾಗಿದ್ದು, ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಅಗತ್ಯಕ್ಕೆ ಅನುಗುಣವಾಗಿ, ಸಂಚಾರ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕು. ಬಿಡುಗಡೆ ಗೊಳಿಸಿದ ಅನುದಾನದ ಗರಿಷ್ಠ ಸದ್ಬಳಕೆಯಾಗಬೇಕು ಎಂದರು.

ರಾಜ್ಯವ್ಯಾಪಿ ವಿವಿಧ ಎಂಜಿನಿಯರಿಂಗ್ ಇಲಾಖೆಗಳ ಏಕ ರೂಪ ದರಪಟ್ಟಿಯನ್ನು ಲೋಕೋಪಯೋಗಿ ಇಲಾಖೆಯಡಿ ಜಾರಿಗೆ ತರಲಾಗುತ್ತಿದ್ದು, ಇದರಂತೆಯೇ ಸರ್ಕಾರಿ ಕಟ್ಟಡಗಳಲ್ಲಿ ಬಳಕೆಯಾಗುವ ವಸ್ತುಗಳಿಗೆ ಕೂಡ ಏಕರೂಪ ದರಪಟ್ಟಿಯನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ರಾಜ್ಯ ಹೆದ್ದಾರಿಗಳು ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಯೋಜನೆ(integration)ಯಾಗಬೇಕು. ಇದಕ್ಕೆ ಪೂರಕವಾಗಿ ರಸ್ತೆ ತಜ್ಞರಿಂದ ಮಾಸ್ಟರ್ ಪ್ಲಾನ್ ಸಿದ್ಧ ಪಡಿಸುವಂತೆ  ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಇಲಾಖೆಯ ಒಡೆತನದ ಭೂಮಿಯಲ್ಲಿ ಕರ್ನಾಟಕ ವಸತಿ ಸಂಕೀರ್ಣ ನಿರ್ವಹಿಸಲು 45 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ತಿಳಿಸಿದರು.

Advertisement

ಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next