Advertisement

ಒಂದು ಸಾವಿರ ಕೋಟಿ ರೂ. ವಂಚನೆ: ಭಾರತದಲ್ಲಿನ ನಕಲಿ ಚೀನಾ ಕಂಪನಿಗಳ ಮೇಲೆ ಆದಾಯ ತೆರಿಗೆ ದಾಳಿ

01:17 PM Aug 12, 2020 | Nagendra Trasi |

ನವದೆಹಲಿ:ಗಲ್ವಾನ್ ಗಡಿ ವಿಚಾರದಲ್ಲಿ ಸಂಘರ್ಷಕ್ಕೆ ಇಳಿದಿದ್ದ ಚೀನಾಕ್ಕೆ ಭಾರತ ಆರ್ಥಿಕ ಪೆಟ್ಟು ನೀಡುತ್ತಿರುವುದನ್ನು ಮುಂದುವರಿಸಿದ್ದರೆ, ಮತ್ತೊಂದೆಡೆ ಭಾರತದಲ್ಲಿ ನಕಲಿ(ಸಂಶಯಾಸ್ಪದ) ಕಂಪನಿಗಳನ್ನು ಹುಟ್ಟು ಹಾಕಿ ಒಂದು ಸಾವಿರ ಕೋಟಿ ರೂಪಾಯಿ ಹಣ ದುರುಪಯೋಗ ರಾಕೆಟ್ ನಲ್ಲಿ ಶಾಮೀಲಾಗಿದ್ದ ಚೀನಾ ವ್ಯಕ್ತಿಗಳು ಹಾಗೂ ಅವರ ಸ್ಥಳೀಯ ಸಹವರ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದಾಗಿ ಸಿಬಿಡಿಟಿ (ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನ್) ತಿಳಿಸಿದೆ.

Advertisement

ದೆಹಲಿ, ಗುರ್ಗಾಂವ್ ಮತ್ತು ಗಾಜಿಯಾಬಾದ್ ನಲ್ಲಿ ಚೀನಿಯರು ನಡೆಸುತ್ತಿದ್ದ ಸುಮಾರು 12 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇದರಲ್ಲಿ ಅವರ ಕೆಲವು ಭಾರತೀಯ ಸಹವರ್ತಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿರುವುದಾಗಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಸ್ ಪ್ರಕಟಣೆಯಲ್ಲಿ ವಿವರಿಸಿದೆ.

ಸಿಬಿಡಿಟಿ ಆದಾಯ ತೆರಿಗೆ ಇಲಾಖೆಯ ನೀತಿ-ನಿಯಮ ರೂಪಿಸುವ ಸಂಸ್ಥೆಯಾಗಿದೆ. ಚೀನಾ ಕಂಪನಿಯ ಅಂಗ ಸಂಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ ರಿಟೈಲ್ ಶೋರೂಂ ಭಾರತದಲ್ಲಿ ತೆರೆಯಲು ನಕಲಿ ಘಟಕಗಳಿಂದ ನೂರು ಕೋಟಿಗೂ ಅಧಿಕ ಹಣವನ್ನು ಮುಂಡವಾಗಿ ಪಡೆದುಕೊಂಡಿರುವುದಾಗಿ ತಿಳಿಸಿದೆ.

ಇದನ್ನೂ: ಚೀನಾದ ಮೇಲೆ ಡಿಜಿಟಲ್ ಏರ್ ಸ್ಟ್ರೈಕ್: ಈಗಾಗಲೇ ಡೌನ್ಲೋಡ್ ಆಗಿರುವ ಆ್ಯಪ್ ಗಳ ಕಥೆಯೇನು?

ದೇಶದಲ್ಲಿರುವ ಕೆಲವು ಚೀನಿಯರ ಬಗ್ಗೆ ಬಲವಾದ ಮಾಹಿತಿಯನ್ನು ಪಡೆದ ನಂತರ ದಾಳಿ ನಡೆಸಿ ಶೋಧ ಕಾರ್ಯ ನಡೆಸಿರುವುದಾಗಿ ಸಿಬಿಡಿಟಿ ಹೇಳಿದೆ. ಇಂತಹ ನಕಲಿ ಘಟಕಗಳ ಮೂಲಕ ಸರಣಿಯಾಗಿ ಹಣ ದುರುಪಯೋಗ ಮತ್ತು ಹವಾಲಾ ವಹಿವಾಟು ನಡೆಸುವಲ್ಲಿ ಅವರ ಭಾರತೀಯ ಸಹವರ್ತಿಗಳು ಕೂಡಾ ಶಾಮೀಲಾಗಿರುವುದಾಗಿ ಹೇಳಿದೆ.

Advertisement

ಆ ದೇಶದ ಇತರ ಕೆಲವು ಪ್ರಜೆಗಳು ಸೇರಿದಂತೆ ಭಾರತದ ನಕಲಿ ಪಾಸ್ ಪೋರ್ಟ್ ಹೊಂದಿರುವ ಚೀನಾದ ವ್ಯಕ್ತಿ ಈ ರಾಕೆಟ್ ನ ಕಿಂಗ್ ಪಿನ್ ಎಂದು ಆರೋಪಿಸಲಾಗಿದೆ. ಆತನ ಹೇಳಿಕೆ ಪ್ರಕಾರ, ಮಣಿಪುರದಲ್ಲಿ ಈತನಿಗೆ ಭಾರತದ ನಕಲಿ ಪಾಸ್ ಪೋರ್ಟ್ ತಯಾರು ಮಾಡಿ ಕೊಡಲಾಗಿದೆಯಂತೆ. ಈ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದು, ಶೋಧ ಕಾರ್ಯ ಮುಂದುವರಿಸಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ: ಚೀನಾ ಆ್ಯಪ್ ನಿಷೇಧದ ನಂತರ 15 ಮಿಲಿಯನ್ ಡೌನ್ಲೋಡ್ ಕಂಡ ಶೇರ್ ಚಾಟ್: ಚಿಂಗಾರಿಗೂ ಅದೃಷ್ಟ !

ಭಾರತದ ನಕಲಿ ಪಾಸ್ ಪೋರ್ಟ್ ಜಾಲದ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ಜತೆ ಮಾಹಿತಿ ಹಂಚಿಕೊಂಡಿದ್ದು, ಪಾಸ್ ಪೋರ್ಟ್ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿರುವುದಾಗಿ ವರದಿ ಹೇಳಿದೆ.

ಚೀನಾದಿಂದ ಲ್ಯಾಪ್ ಟಾಪ್, ಕ್ಯಾಮೆರಾ, ಜವಳಿ ಸೇರಿದಂತೆ ಅಂದಾಜು 20 ಉತ್ಪನ್ನಗಳ ಮೇಲಿನ ಆಮದು ಸುಂಕ ಹೆಚ್ಚಿಸುವ ಮತ್ತು ಕೆಲ ಉಕ್ಕಿನ ಉತ್ಪನ್ನಗಳನ್ನು ಆಮದು ನಿಯಂತ್ರಣ ಪಟ್ಟಿಗೆ ಸೇರಿಸುವ ಪ್ರಸ್ತಾಪವೊಂದನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸಿದ್ದಪಡಿಸಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ. ಏತನ್ಮಧ್ಯೆ ದೇಶದಲ್ಲಿರುವ ಚೀನಾದ ನಕಲಿ ಕಂಪನಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next