Advertisement

ಡಿಸಿಸಿ ಬ್ಯಾಂಕಿನಿಂದ ಸಾವಿರ ಕೋಟಿ ರೂ. ಸಾಲ

12:15 PM Sep 09, 2019 | Suhan S |

ಕೋಲಾರ: ಸಹಕಾರ ಸಂಘಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಡಿಸಿಸಿ ಬ್ಯಾಂಕ್‌ ಉಳಿಯಲು ಸಾಧ್ಯ. ಈಗಾಗಲೇ ಬೆಳೆ ಸಾಲವಾಗಿಯೇ 1000 ಕೋಟಿ ರೂ. ನೀಡಲಾಗಿದೆ. ಆದರೆ, ನಬಾರ್ಡ್‌ ನೀಡುವುದು ಕೇವಲ 71 ಕೋಟಿ ರೂ. ಮಾತ್ರ ಎಂದು ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ ನಿಗಮ, ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಹಾಗೂ ಸಹಕಾರ ಇಲಾಖೆ ಜಿಲ್ಲೆಯ ಕಾರ್ಯ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಇಒಗಳಿಗೆ ನಡೆದ ಒಂದು ದಿನದ ರಾಜ್ಯ ಮಟ್ಟದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಬಾರ್ಡ್‌ 71 ಕೋಟಿ ರೂ., ಅಪೆಕ್ಸ್‌ ಬ್ಯಾಂಕ್‌ 14 ಕೋಟಿ ರೂ. ಮಾತ್ರ ನೆರವು ನೀಡಿದೆ. ಉಳಿದಂತೆ ಎಲ್ಲವನ್ನೂ ಡಿಸಿಸಿ ಬ್ಯಾಂಕ್‌ನಿಂದಲೇ ಭರಿಸಲಾಗಿದೆ. ಡಿಸಿಸಿ ಬ್ಯಾಂಕ್‌ ಠೇವಣಿ ಅಧಿಕಾರ ವಹಿಸಿಕೊಂಡಾಗ 15 ಕೋಟಿ ರೂ. ಇದ್ದದ್ದು ಈಗ 280 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವಿವರಿಸಿದರು.

ಕ್ರಮ ಜರುಗಿಸಿ: ಬ್ಯಾಂಕಿನ ಠೇವಣಿ 1000 ಕೋಟಿ ರೂ. ಏರಿಕೆ ಮಾಡಿದಾಗ ದೇಶದಲ್ಲಿ ನಂ.1 ಆಗಲು ಸಾಧ್ಯ. ಹಾಗಾಗಿ ಎಲ್ಲರೂ ಬ್ಯಾಂಕಿನ ಠೇವಣಿ ಬಗ್ಗೆ ವಿಶೇಷ ಗಮನ ಹರಿಸುವಂತಾಗಬೇಕು. ಸಾಲ ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೇ ಮುಲಾಜಿಲ್ಲದೆ ಕ್ರಮ ಜರುಗಿಸಿ ಎಂದು ತಾಕೀತು ಮಾಡಿದರು.

ಸೆ.15ರೊಳಗೆ ಎಲ್ಲಾ ಸಂಘಗಳು ಅಡಿಟ್ ಮಾಡಿಸಿರಬೇಕು. ರೈತ ಬದುಕಿಗೆ ತಾಯಂದಿರ ಬದುಕಿಗೆ ಅನುವುಂಟಾಗುವಂತೆ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕೆಂದು ಸಲಹೆ ನೀಡಿದರು.

Advertisement

ನಿಬಂಧನೆಗಳ ಅರಿವು ಅಗತ್ಯ: ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಎಚ್.ವಿ.ನಾಗರಾಜ್‌, ತರಬೇತಿ ಎಂಬುವುದು ಸಹಕಾರ ಕ್ಷೇತ್ರದಲ್ಲಿ ಪ್ರಮುಖವಾಗಿದೆ. ಆಡಳಿತ ನಿರ್ವಾಹಣೆ, ಕಾಯ್ದೆಗಳ ಅರಿವು, ಸಭೆಗಳನ್ನು ಕರೆಯುವುದು, ಸೇರಿದಂತೆ ಎಲ್ಲದಕ್ಕೂ ನಿಯಮ, ನಿಬಂಧನೆಗಳ ಅರಿವು ಇದ್ದಲ್ಲಿ ಮಾತ್ರ ಸಂಘ ಸಂಸ್ಥೆಗಳು ಮುಂದುವರಿಯಲು ಸಾಧ್ಯ ಎಂದು ಹೇಳಿದರು.

ಪ್ರತಿಯೊಬ್ಬರು ಶ್ರಮಿಸಲಿ: ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ನೀಲಕಂಠೇಗೌಡ ಮಾತನಾಡಿ, ಮಹಾತ್ಮ ಗಾಂಧಿ ಅವರ ಸಹಕಾರ ಕ್ಷೇತ್ರದ ಕನಸು ನನಸು ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ. ಈ ತರಬೇತಿ ಕಾರ್ಯಾಗಾರಗಳು ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೆ, ತಾಲೂಕು ಮಟ್ಟದಲ್ಲೂ ಆಯೋಜಿಸುವಂತಾಗಬೇಕೆಂದು ತಿಳಿಸಿದರು.

ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ನಿರ್ದೇಶಕ ಯಲವಾರ ಸೊಣ್ಣೆಗೌಡ, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿದರು.

ಉಪನ್ಯಾಸ: ನಿವೃತ್ತ ಸಹಕಾರ ಸಂಘಗಳ ಜಂಟಿ ನಿಬಂಧಕ ಹೆಚ್.ಎಸ್‌. ಸಂತೋಷ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ನಿರ್ವಹಣೆ ಹಾಗೂ ಇತ್ತೀಚಿಗೆ ಸಹಕಾರ ಕಾಯ್ದೆ ತಿದ್ದುಪಡಿ ಕುರಿತು ಹಾಗೂ ನಿವೃತ್ತ ಸಹಕಾರ ಅಪರ ನಿಬಂಧಕ ಶಶಿಧರ್‌ ಎಲೆ ಗುಂಪುಗಳ ರಚನೆ ಹಾಗೂ ಸಾಲ ವಸೂಲಾತಿ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್‌, ಎಂ.ಎಲ್.ಅನಿಲ್ಕುಮಾರ್‌, ಕೆ.ಎಚ್.ಚನ್ನರಾಯಪ್ಪ, ಆರ್‌.ನಾರಾಯಣರೆಡ್ಡಿ, ಬಿ.ವಿ.ವೆಂಕಟರೆಡ್ಡಿ, ಗೋವಿಂದರಾಜು, ಯೂನಿಯನ್‌ ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಉಗಿಣಿ ಆರ್‌.ನಾರಾಯಣಗೌಡ, ಡಿ.ಆರ್‌.ರಾಮಚಂದ್ರೇಗೌಡ, ಕೆ.ಎಂ.ವೆಂಕಟೇಶಪ್ಪ, ಅರಹಳ್ಳಿ ಜಿ.ಅಶ್ವತ್ಥ್ನಾರಾಯಣ, ಡಿಸಿಸಿ ಬ್ಯಾಂಕ್‌ ಸಿಇಒ ಎಂ.ರವಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ಡಿ.ಜಿ.ಶಾಂತಕುಮಾರಿ, ಒಕ್ಕೂಟದ ಸಿಇಒ ಎನ್‌.ಲಕ್ಷ್ಮಿ, ಅಂಕತಟ್ಟಿ ಬಾಬು, ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಕೆ.ಪ್ರಭಾಕರ್‌, ಒಕ್ಕೂಟದ ವ್ಯವಸ್ಥಾಪಕ ರವಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next