ಮಂಗಳೂರು: ರಾಜ್ಯದಲ್ಲಿ ಅತೃಪ್ತ ಶಾಸಕರ ಖರೀದಿಯೇ ಬಹುದೊಡ್ಡ ಹಗರಣವಾಗಿದ್ದು, ಅದನ್ನು ಅದೇ ಅತೃಪ್ತ ಶಾಸಕರು ಮುಂದಿನ ಮೂರು ತಿಂಗಳಲ್ಲಿ ಬಹಿರಂಗ ಪಡಿಸಲಿದ್ದಾರೆ. ಶಾಸಕರ ಖರೀದಿಗಾಗಿ ಬಿಜೆಪಿಯು ಕನಿಷ್ಠ 1,000 ಕೋ.ರೂ. ಖರ್ಚು ಮಾಡಿರಬಹುದು ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಹಾಗೂ ಪಕ್ಷದಲ್ಲಿ ಕೆಲವೊಮ್ಮೆ ಅಭಿಪ್ರಾಯ ಭೇದಗಳು ಸಹಜ. ಆದರೆ ಅದನ್ನೇ ಬಳಸಿಕೊಂಡ ಬಿಜೆಪಿಯು ಶಾಸಕರ ಖರೀದಿ ಮಾಡಿದೆ. ಅದಕ್ಕಾಗಿ ಬಿಜೆಪಿ ಏನೇನು ಮಾಡಿದೆ ಎಂದು ನಾನು ಹೇಳಬೇಕಾಗಿಲ್ಲ. ಮುಂದಿನ ಕೆಲವೇ ತಿಂಗಳಲ್ಲಿ ಅದೇ ಶಾಸಕರೇ ಹೇಳುತ್ತಾರೆ; ಕಾದು ನೋಡಿ ಎಂದರು.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ನಾವು ನಮ್ಮ ಸೋಲನ್ನು ಒಪ್ಪಿಕೊಂಡಿದ್ದೇವೆ. ಅದೇ ರೀತಿ ಅತೃಪ್ತ ಶಾಸಕರಿಗೆ ಯಾವ ರೀತಿ ನೆರವಾಗಿದ್ದೇವೆ ಎಂಬುದನ್ನು ಬಿಜೆಪಿಯವರು ಒಪ್ಪಿಕೊಳ್ಳಲಿ. ಶಾಸಕರ ಖರೀದಿ ಕುರಿತು ನಾನು ಮಾತ್ರವಲ್ಲ, ಶಾಸಕ ಶ್ರೀನಿವಾಸ ಗೌಡರೇ ಲಂಚದ ಆಫರ್ ಇದ್ದದ್ದನ್ನು ಬಹಿರಂಗಪಡಿಸಿದ್ದಾರೆ ಎಂದರು.
ಮಾಹಿತಿ ಹಕ್ಕು ದುರ್ಬಲ
ಕೇಂದ್ರ ಸರಕಾರ ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸಲು ಹೊರಟಿದ್ದು, ದೇಶ, ರಾಜ್ಯಕ್ಕೆ ಮಾರಕವಾಗಲಿದೆ. ಅಂತಹ ಯತ್ನವನ್ನು ಕೇಂದ್ರ ಕೈಬಿಡಬೇಕು. ಯುಪಿಎ ಸರಕಾರ ಆರ್‌ಟಿಐ ಕಾಯಿದೆ ಜಾರಿಗೆ ತಂದಿದ್ದರಿಂದ ಅನೇಕ ಹಗರಣಗಳು ಹೊರಗೆ ಬರಲು ಸಾಧ್ಯವಾಯಿತು. 2 ರೂ. ಖರ್ಚು ಮಾಡಿ ಖಾಲಿ ಹಾಳೆಯಲ್ಲಿ ಬರೆದು ಹಾಕಿದ ಅರ್ಜಿಯಿಂದ 2,000 ಕೋಟಿ ರೂ.ನ ಹಗರಣಗಳು ಹೊರಗೆ ಬರುವಂತಾಗಿತ್ತು. ಆದರೆ ಇದೀಗ ಅದನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರ ತಿದ್ದುಪಡಿ ಮಾಡುತ್ತಿದೆ. ಹೀಗಾಗಿ ಇನ್ನು ಮುಂದೆ ಯಾವುದೇ ಮಾಹಿತಿಯನ್ನೂ ಇಲಾಖೆಗಳು ಮುಚ್ಚಿಹಾಕುವುದು ಸುಲಭ ಎಂದರು.
ರಾಜ್ಯದಲ್ಲಿ ನಗರಾಭಿವೃದ್ಧಿ, ವಸತಿ ಖಾತೆ ಸಚಿವನಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂಬ ಸಂತೋಷವಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಕ್ಷೇತ್ರವೊಂದಕ್ಕೆ 6 ಕೋಟಿ ರೂ. ಬಂದಿದ್ದು ಇದೇ ಮೊದಲು ಎಂದರು.