ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣದಲ್ಲಿ ಆರಂಭಿಸಿದ ಗ್ರಂಥಾಲಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ 1000ಪುಸ್ತಕಗಳನ್ನು ನೀಡಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಗೋಕುಲ ರಸ್ತೆಯಲ್ಲಿರುವಹೊಸ ಬಸ್ ನಿಲ್ದಾಣದಲ್ಲಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಆರಂಭಿಸಿರುವ ಗ್ರಂಥಾಲಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿಜಿಲ್ಲೆಯ ಸಾರ್ವಜನಿಕ ಗ್ರಂಥಾಲಯ ಇಲಾಖೆಸಾಹಿತ್ಯ, ಧಾರ್ಮಿಕ, ಆರೋಗ್ಯ ಹಾಗೂ ಸ್ಪರ್ಧಾತ್ಮಕಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಸುಮಾರು 1000 ಪುಸ್ತಕಗಳನ್ನು ನೀಡಿದೆ.
ಜಿಲ್ಲಾ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಎಂ.ಬಿ. ಕರಿಗಾರ ಅವರು ಹೊಸ ಬಸ್ ನಿಲ್ದಾಣದಲ್ಲಿಪುಸ್ತಕಗಳನ್ನು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿ, ಗ್ರಂಥಾಲಯಕ್ಕೆ ಆಗಮಿಸುವ ಓದುಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವನಿಟ್ಟಿನಲ್ಲಿ ಮತ್ತಷ್ಟು ಪುಸ್ತಕಗಳು, ಜಿಲ್ಲೆಗಳು, ತಾಲೂಕುಗಳ ಮಾಹಿತಿ, ಹಿರಿಯ ಸಾಧಕರ ಮಾಹಿತಿ ಸಹಿತ ಭಾವಚಿತ್ರಗಳು, ಬುಕ್ ಶೆಲ್ ಗಳು, ಕುಳಿತುಕೊಳ್ಳಲು ಕುರ್ಚಿಗಳು, ಓದುವ ಟೇಬಲ್ ಗಳು ಮತ್ತಿತರೆ ಪರಿಕರಗಳನ್ನು ಒದಗಿಸಿ ಅಗತ್ಯ ಸಲಹೆ, ಸಹಕಾರ ನೀಡುವುದಾಗಿ ತಿಳಿಸಿದರು.
ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಹೊಸ ಬಸ್ ನಿಲ್ದಾಣಕ್ಕೆ ಪ್ರತಿ ದಿನ1365 ಬಸ್‌ಗಳು ಬಂದು ಹೋಗುತ್ತವೆ. ನಿತ್ಯ 25ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಇದರಿಂದ ವಿವಿಧ ಕ್ಷೇತ್ರಗಳ ಸಾಹಿತ್ಯಾಸಕ್ತರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ವಿಭಾಗಿಯ ತಾಂತ್ರಿಕ ಇಂಜಿನಿಯರ್ ಪ್ರವೀಣ ಈಡೂರ, ಸಹಾಯಕ ಕಾಮಗಾರಿ ಇಂಜಿನಿಯರ್ ಎಸ್.ವಿ. ಅಂಗಡಿ, ಆಡಳಿತಾಧಿಕಾರಿ ನಾಗಮಣಿ, ಡಿಪೊ ವ್ಯವಸ್ಥಾಪಕ ಬಸಪ್ಪ ಪೂಜಾರಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.