Advertisement

1923ರ ಮಾರಿ ಬೊಳ್ಳಕ್ಕೆ 100 ವರ್ಷ ಪೂರ್ಣ!

12:41 AM Jul 27, 2023 | Team Udayavani |

ಬಂಟ್ವಾಳ: ಇಡೀ ಬಂಟ್ವಾಳವನ್ನೇ ಮುಳುಗಿಸಿದ್ದ ಮಾರಿ ಬೊಳ್ಳ (ಭೀಕರ ಪ್ರವಾಹ)ಕ್ಕೆ 100 ವರ್ಷ ತುಂಬುತ್ತಿದೆ. ಆ ಪ್ರವಾಹದ ಭೀಕರತೆಯನ್ನು ಸ್ಥಳೀಯರು ಮರೆಯಬಾರದು ಎಂಬ ಕಾರಣಕ್ಕೆ ಬಂಟ್ವಾಳ-ಪಾಣೆಮಂಗಳೂರು ಭಾಗದ ಕೆಲವು ಪುರಾತನ ಕಟ್ಟಡಗಳಲ್ಲಿ ಪ್ರವಾಹ ಆವರಿಸಿದ್ದ ಜಾಗಕ್ಕೆ ಹಾಕಿರುವ ಗುರುತು ಇನ್ನೂ ಮಾಸಿಲ್ಲ !

Advertisement

1923ರ ಆಗಸ್ಟ್‌ 7ರಂದು ಭೀಕರ ಪ್ರವಾಹ ಬಂಟ್ವಾಳ, ಪಾಣೆಮಂಗಳೂರು ಪಟ್ಟಣ ಸೇರಿದಂತೆ ಸಾಕಷ್ಟು ಊರುಗಳನ್ನು ಮುಳುಗಿಸಿತ್ತು. ಮುಂದಿನ ಆಗಸ್ಟ್‌ 7ಕ್ಕೆ ಆ ಘಟನೆಗೆ ನೂರು ವರ್ಷ ತುಂಬುವುದರಿಂದ ಆ ದಿನವನ್ನು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದೇ ಸಮಯದಲ್ಲಿ (1923ರಲ್ಲಿ) ಸದ್ಗುರು ನಿತ್ಯಾನಂದ ಸ್ವಾಮಿಗಳು ಬಂಟ್ವಾಳಕ್ಕೆ ಆಗಮಿಸಿದ್ದು, ಆ ಘಟನೆಯ ಶತಮಾನದ ನೆನಪು ಕೂಡ ನಡೆಯಲಿದೆ.

1974ರಲ್ಲಿ ಮತ್ತೂಮ್ಮೆ ಭೀಕರ ಪ್ರವಾಹ ಬಂದಿದ್ದರೂ 1923ರ ಪ್ರವಾಹಕ್ಕಿಂತ ತೀರಾ ಕೆಳಮಟ್ಟದಲ್ಲಿತ್ತು. ಅದರ ಗುರುತುಗಳನ್ನೂ ಕೆಲವು ಕಟ್ಟಡಗಳಲ್ಲಿ ಕಾಣಬಹುದು.

ಕಟ್ಟಡಗಳಲ್ಲಿ 23ರ ನೆನಪು!

ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ ಜಾಗವೊಂದರ ಕಟ್ಟಡದ ಮೇಲ್ಛಾವಣಿಯ ಪಕ್ಕ 7.8.1923 ಎಂದು ಬರೆದಿದ್ದು, ಅಲ್ಲಿಯವರೆಗೂ ನೀರು ಬಂದಿತ್ತು ಎನ್ನಲಾಗುತ್ತಿದೆ. ಈಗ ಆ ರೀತಿಯ ಪ್ರವಾಹ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸುವುದೂ ಅಸಾಧ್ಯ. ಪಾಣೆಮಂಗಳೂರು ಪೇಟೆಯ ಮೂರುಮಾರ್ಗದ ಬಳಿ ಹಳೆಯ ಕಾಲದ ಹೊಟೇಲೊಂದರ ಪಕ್ಕದ ಕಟ್ಟಡದಲ್ಲಿ ಕಲ್ಲಿನಲ್ಲಿ “ತಾ. 7.8.1923 ಕುಜವಾರ ಇ ಕಲ್ಲಿನ ತನಕ ನೆರೆ ಬಂದಿದೆ’ ಎಂದು ಬರೆಯಲಾಗಿದ್ದು, ಪ್ರಸ್ತುತ ಅದಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ.

Advertisement

ಅಂದು ಮುಳುಗಡೆಯಾಗಿದ್ದ ಬಹುತೇಕ ಕಟ್ಟಡಗಳಿದ್ದ ಜಾಗದಲ್ಲಿ ಪ್ರಸ್ತುತ ಹೊಸ ಕಟ್ಟಡಗಳು ನಿರ್ಮಾಣವಾಗಿವೆ. ಅಂದು ಅನುಭವಿಸಿದ ಯಾತನೆಯ ಅನುಭವವನ್ನು ಹೇಳಿಕೊಳ್ಳುವವರು ಯಾರೂ ಉಳಿದಿಲ್ಲ.

ಬಂಟ್ವಾಳದಲ್ಲಿ ಅಂದು ಜಲಮಾರ್ಗವೇ ಪ್ರಮುಖ ಸಾರಿಗೆಯಾಗಿತ್ತು. ಹೀಗಾಗಿ ನೇತ್ರಾವತಿ ಕಿನಾರೆಯಲ್ಲಿದ್ದ ಪಾಣೆಮಂಗಳೂರು ಬಂಟ್ವಾಳಕ್ಕಿಂತಲೂ ದೊಡ್ಡ
ವಾಣಿಜ್ಯ ಪಟ್ಟಣವಾಗಿತ್ತು. ಆದರೆ ಭೀಕರ ಪ್ರವಾಹದಲ್ಲಿ ಪೇಟೆಯಲ್ಲಿದ್ದ ಎಲ್ಲ ಸರಕು ಸರಂಜಾಮು ಕೊಚ್ಚಿ ಹೋಗಿತ್ತು; ಹಲವಾರು ಕುಟುಂಬಗಳನ್ನು ದೋಣಿಯ ಮೂಲಕ ರಕ್ಷಣೆ ಮಾಡಲಾಗಿತ್ತು ಎಂದು ಹಿರಿಯರು ಹೇಳುತ್ತಿದ್ದರು ಎಂದು ಪಾಣೆಮಂಗಳೂರಿನ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next