Advertisement

ರಮೇಶ್‌ ಹೇಳಿದ 100 ಸ್ಟೋರಿ

11:00 AM Jan 18, 2020 | mahesh |

“ಇಷ್ಟು ದಿನ ನನಗೆ ಸನ್ನಿವೇಶ, ಸಂದರ್ಭಗಳೇ ನನಗೆ ವಿಲನ್‌ ಆಗಿದ್ದವು. ಆದರೆ, ಮೊದಲ ಬಾರಿಗೆ ಚಿತ್ರದಲ್ಲಿ ಒಬ್ಬ ಖಡಕ್‌ ವಿಲನ್‌ ಇದ್ದಾನೆ ಮತ್ತು ಆತನ ಜೊತೆ ಹೊಡೆದಾಡುತ್ತೇನೆ …’

Advertisement

– ಹೀಗೆ ಹೇಳಿ ನಕ್ಕರು ರಮೇಶ್‌ ಅರವಿಂದ್‌. ಅವರು ಹೇಳಿದ್ದು ತಮ್ಮ “100′ ಚಿತ್ರದ ಬಗ್ಗೆ. ನೀವು ಈ ಚಿತ್ರದ ಬಗ್ಗೆ ಈಗಾಗಲೇ ಕೇಳಿರಬಹುದು. ಚಿತ್ರೀಕರಣ ಮುಗಿಸಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಕೇವಲ ನಾಯಕರಾಗಿಯಷ್ಟೇ ನಟಿಸಿಲ್ಲ, ಬದಲಾಗಿ ನಿರ್ದೇಶನದ ಜವಾಬ್ದಾರಿ ಕೂಡಾ ಅವರದ್ದೇ. ರಮೇಶ್‌ ಅರವಿಂದ್‌ ಅವರಿಗೆ ನಿರ್ದೇಶನ ಹೊಸದಲ್ಲ. ಆದರೆ, “100′ ಚಿತ್ರದ ಕಥೆ ಹಾಗೂ ನಿರೂಪಣೆ ರಮೇಶ್‌ ಅವರಿಗೆ ಸಂಪೂರ್ಣ ಹೊಸದು. ಅದೇ ಕಾರಣದಿಂದ ಅವರು ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.

“ಇಲ್ಲಿವರೆಗೆ ನಾನು 100ಕ್ಕೂ ಹೆಚ್ಚು ಚಿತ್ರ ಮಾಡಿದ್ದೇನೆ. ಆದರೆ, ಯಾವುದೇ ಸಿನಿಮಾದಲ್ಲೂ ನಾನು ಒಬ್ಬ ಖಡಕ್‌ ವಿಲನ್‌ ಎದುರು ನಿಂತು ಫೈಟ್‌ ಮಾಡಿಲ್ಲ. ಏಕೆಂದರೆ ನನ್ನ ಸಿನಿಮಾಗಳಲ್ಲಿ ಸನ್ನಿವೇಶ, ಸಂದರ್ಭಗಳೇ ವಿಲನ್‌ ಆಗಿರುತ್ತಿದ್ದವು. ಆದರೆ, “100′ ಅದಕ್ಕೆ ವಿರುದ್ಧ. ಇಲ್ಲೊಬ್ಬ ವಿಲನ್‌ ಇದ್ದಾನೆ. ಅವನ ಜೊತೆ ನಾನು ದೈಹಿಕವಾಗಿ ಹೊಡೆದಾಡಿದ್ದೇನೆ. ಫೈಟ್‌ ಮಾಸ್ಟರ್‌ ಇಟ್ಟು ಸಾಹಸ ಸಂಯೋಜಿಸಲಾಗಿದೆ. ಈ ತರಹದ ಅನುಭವ ನನಗೆ ಹೊಸದು ಎಂದರೆ ತಪ್ಪಲ್ಲ. ಆ ಫೈಟ್ಸ್‌ ನನಗೆ ಮಜಾ ಕೊಟ್ಟಿದ್ದು ಸುಳ್ಳಲ್ಲ’ ಎನ್ನುವುದು. ಚಿತ್ರರಂಗದಲ್ಲಿ ರಮೇಶ್‌ ಅರವಿಂದ್‌ ಅವರನ್ನು ತ್ಯಾಗರಾಜ ಎಂದು ಕರೆಯುವುದು ನಿಮಗೆ ಗೊತ್ತೇ ಇದೆ.

ಅದಕ್ಕೆ ಕಾರಣ ಅವರ ಸಿನಿಮಾಗಳ ಕಥೆಗಳು. ಆದರೆ, “100′ ಚಿತ್ರ ಆ ಇಮೇಜ್‌ನಿಂದ ತುಂಬಾ ಭಿನ್ನವಾಗಿದೆಯಂತೆ. “100′ ಚಿತ್ರದ ಮೂಲಕ ರಮೇಶ್‌ ಅವರಿಗೆ ಆ್ಯಕ್ಷನ್‌ ಇಮೇಜ್‌ ಬರಲಿದೆಯಂತೆ. ಮುಂದೆ ಆ್ಯಕ್ಷನ್‌ ಸಿನಿಮಾ ಸಿಕ್ಕರೂ ನಿಭಾಹಿಸಬಹುದು ಎಂಬ ವಿಶ್ವಾಸವನ್ನು “100′ ಚಿತ್ರ ನೀಡಿದೆ ಎನ್ನುವುದು ರಮೇಶ್‌ ಅರವಿಂದ್‌ ಅವರ ಮಾತು.

ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಅವರ “100′ ಚಿತ್ರದಲ್ಲಿ ಸೈಬರ್‌ ಕ್ರೈಮ್‌ ಕುರಿತಾದ ವಿಷಯವನ್ನು ಹೇಳಲಾಗಿದೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರು ವಿಷ್ಣು ಎಂಬ ಸೈಬರ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ತೊಂದರೆಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಪಾತ್ರ ಅವರದು.

Advertisement

ಹೊಸ ಜಾನರ್‌ನ ಸಿನಿಮಾವನ್ನು ನಿರ್ದೇಶಿಸುತ್ತಿರುವುದರಿಂದ ರಮೇಶ್‌ ಅರವಿಂದ್‌ ಕೂಡಾ ಖುಷಿಯಾಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮಾತನಾಡುವ “ಹುಡುಗಿಯರನ್ನು ಹುಡುಗರು ಫಾಲೋ ಮಾಡೋದು, ತೊಂದರೆ ಕೊಡೋದು ಎಂಬ ಒಂದು ಕಾಲವಿತ್ತು. ಈಗ ಫಾಲೋ ಮಾಡೋದು, ತೊಂದರೆ ಕೊಡೋದು ಎಲ್ಲವೂ ಸೋಶಿಯಲ್‌ ಮೀಡಿಯಾ ಮೂಲಕ ಆಗುತ್ತಿದೆ. ಹೆಣ್ಣು ಮಕ್ಕಳು ಯಾರನ್ನೋ ಫ್ರೆಂಡ್‌ ಆಗಿ ಒಪ್ಪಿಕೊಳ್ಳುತ್ತಾರೆ. ಆ ನಂತರ ಫ್ರೆಂಡ್‌ಶಿಪ್‌ನ ಕಟ್‌ ಮಾಡೋಕೂ ಆಗಲ್ಲ, ಅನ್‌ಫ್ರೆಂಡ್‌ ಮಾಡೋಕೂ ಆಗಲ್ಲ. ಈ ತರಹ ವಿಪರೀತ ತೊಂದರೆಯಲ್ಲಿ ಕೆಲವು ಹೆಣ್ಮಕ್ಕಳು ಸಿಲುಕಿದ್ದಾರೆ. ಇದನ್ನು “ಸೈಬರ್‌ ಸ್ಟಾಕಿಂಗ್‌’ ಎನ್ನುತ್ತಾರೆ. ಕಂಪ್ಯೂಟರ್‌, ಮೊಬೈಲ್‌ ಮೂಲಕ ಸತತವಾಗಿ ಹುಡುಗಿಯರ ಮೇಲೆ ಕಣ್ಣಿಟ್ಟು ಅವರಿಗೆ ತೊಂದರೆ ಕೊಡುವ ಒಂದಷ್ಟು ಮಂದಿ ಇದ್ದಾರೆ. ಆ ತರಹದ ಕಥಾ ವಸ್ತುವನ್ನಿಟ್ಟುಕೊಂಡು ಹೆಣೆದಿರುವ ಕಥೆ 100′ ಎನ್ನುತ್ತಾರೆ ರಮೇಶ್‌ ಅರವಿಂದ್‌. ಸೈಬರ್‌ ಕ್ರೈಮ್‌ ಸುತ್ತ ನಡೆಯುವ ಕಥೆ ಇದಾಗಿರುವುದರಿಂದ ಚಿತ್ರದ ಬಹುತೇಕ ಚಿತ್ರೀಕರಣ ಒಳಾಂಗಣದಲ್ಲೇ ನಡೆದಿದೆ. ಸುಂದರವಾದ ಮನೆ, ಕಚೇರಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಿಸಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next