ಕೋಲಾರ: ಪಠ್ಯಪುಸ್ತಕ ಶೇ.100 ಪೂರೈಕೆಯಾಗಿದ್ದು, ಶಾಲೆಗಳ ಬಾಗಿಲಿಗೆ ತಲುಪಿಸಿ, ಒಂದೆರಡು ದಿನದೊಳಗೆ ಮಕ್ಕಳಿಗೆ ಸಿಗುವಂತೆ ಮಾಡಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ತಿಳಿಸಿದರು.
ನಗರದ ಬಿಇಒ ಕಚೇರಿ ಆವರಣದ ಪುಸ್ತಕ ಉಗ್ರಾಣದ ಮುಂಭಾಗ ಪಠ್ಯ ಪುಸ್ತಕ ಸಾಗಾಣೆ ಮಾಹನಗಳಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಪುಸ್ತಕ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರ ಶೇ.100 ಪಠ್ಯಪುಸ್ತಕ ಪೂರೈಸಿದ್ದು, ಎಲ್ಲಾ ಮಕ್ಕಳಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ನೇರವಾಗಿ ಇಲಾಖೆಯೇ ಶಾಲೆಗೆ ಪುಸ್ತಕ ತಲುಪಿಸುವ ಕೆಲಸ ಮಾಡಿರುವುದರಿಂದ ಶಿಕ್ಷಕರು ಪುಸ್ತಕಕ್ಕಾಗಿ ಅಲೆದಾಡುವುದು ತಪ್ಪಿದಂತಾಗಿದೆ ಎಂದು ತಿಳಿಸಿದರು.
1 ರಿಂದ 10ನೇ ತರಗತಿವರೆಗಿನ ಎಲ್ಲಾ ಪಠ್ಯಪುಸ್ತಕಗಳು ಲಭ್ಯವಿದ್ದು, ಹಿಂದೆ ಶಿಕ್ಷಕರು ಬಂದು ತಮ್ಮ ಶಾಲೆಗೆ ಅಗತ್ಯ ಪುಸ್ತಕ ಗಳನ್ನು ಬಂಡಲ್ ಮಾಡಿದ ನಂತರ ವಾಹನಗಳಲ್ಲಿ ಸಾಗಿಸುವ ಕೆಲಸ ಮಾತ್ರ ಇಲಾಖೆ ಮಾಡುತ್ತಿತ್ತು ಎಂದು ಹೇಳಿದರು. ಮಳೆ ಬೀಳುತ್ತಿರುವುದರಿಂದ ಶಾಲಾ ಕಟ್ಟಡಗಳ ಚಾವಣಿ ಮೇಲೆ ನೀರು ಸರಾಗವಾಗಿ ಹೊರ ಹೋಗುವಂತೆ ಗಮನಹರಿಸಿ, ಕಟ್ಟಡಗಳು ಶಿಥಿಲಗೊಂಡಿದ್ದರೆ ಸಣ್ಣಪುಟ್ಟ ರಿಪೇರಿಗಳನ್ನು ಎಸ್ ಡಿಎಂಸಿ ಹಣದಲ್ಲಿ ಮಾಡಿಸಿಕೊಳ್ಳಿ ಎಂದು ಸೂಚಿಸಿದರು.
ಈ ವೇಳೆ ಕಚೇರಿ ವ್ಯವ ಸ್ಥಾಪಕ ಮುನಿ ಸ್ವಾಮಿಗೌಡ, ಅಧೀಕ್ಷಕ ನಾರಾಯಣ ಸ್ವಾಮಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಪುಸ್ತಕ ವಿತರಣಾ ನೋಡಲ್ ಅಧಿಕಾರಿ ವೆಂಕಟಾ ಚಲಪತಿ ಮತ್ತಿತರರು ಉಪಸ್ಥಿತರಿದ್ದರು.