Advertisement

ವರ್ಷಾಂತ್ಯದೊಳಗೆ 100 ಜನೌಷಧಿ ಕೇಂದ್ರ

12:57 AM Jun 30, 2019 | Team Udayavani |

ಬೆಂಗಳೂರು: ದೇಶಾದ್ಯಂತ ಈ ವರ್ಷ 300 ಜನೌಷಧಿ ಕೇಂದ್ರಗಳನ್ನು ತೆರೆಯುವ ಜತೆಗೆ ಬೆಂಗಳೂರಿನಲ್ಲೂ ವರ್ಷಾಂತ್ಯದೊಳಗೆ 100 ಜನೌಷಧಿ ಕೇಂದ್ರ ತೆರೆಯುವ ಗುರಿ ಇದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Advertisement

ವಕೀಲರ ಸಂಘ ವತಿಯಿಂದ ನಗರ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಬಡ ಜನರಿಗೆ ಕಡಿಮೆ ದರದಲ್ಲಿ ಔಷಧ ಲಭ್ಯವಾಗುವಂತೆ ಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸಚಿವಾಲಯದಿಂದ ಪತ್ರ: ಕೆಲ ವೈದ್ಯರು ಹಾಗೂ ವೈದ್ಯಕೀಯ ಪ್ರತಿನಿಧಿಗಳು ಬಡ ರೋಗಿಗಳಿಗೆ ನಿರ್ದಿಷ್ಟ ಕಂಪನಿಯ ಔಷಧ ಖರೀದಿಸುವಂತೆ ಶಿಫಾರಸು ಮಾಡುತ್ತಿದ್ದು, ಅವರ ನಡುವೆ ಒಂದು ರೀತಿಯ ಸಂಬಂಧವಿರುವುದರಿಂದ ಸಮಸ್ಯೆಯಾಗುತ್ತಿದೆ.

ಹೀಗಾಗಿ ಸಚಿವಾಲಯದಿಂದ ವೈದ್ಯರಿಗೆ ಪತ್ರ ಬರೆದು ಜನೌಷಧಿ ಕೇಂದ್ರಗಳಲ್ಲೇ ಔಷಧ ಖರೀದಿಸುವಂತೆ ರೋಗಿಗಳಿಗೆ ಮನವರಿಕೆ ಮಾಡಬೇಕು ಎಂದು ಕೋರಲಾಗುವುದು ಎಂದರು. ದೇಶದಲ್ಲಿ 1.25 ಕೋಟಿ ಕುಟುಂಬಗಳು ತಮ್ಮ ಆದಾಯದಲ್ಲಿ ಶೇ.15ರಿಂದ ಶೇ.30ರಷ್ಟನ್ನು ಔಷಧಕ್ಕಾಗಿ ಖರ್ಚು ಮಾಡುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ಗೊತ್ತಾಗಿದೆ.

ಇದರಿಂದ ಬಹುಪಾಲು ಕುಟುಂಬಗಳು ಬಡತನ ರೇಖೆಗಿಂತ ಕೆಳಕ್ಕೆ ಕುಸಿಯುತ್ತಿವೆ. ಔಷಧ ಉತ್ಪಾದನಾ ವೆಚ್ಚ ಕಡಿಮೆಯಿದ್ದರೂ ಮಾರುಕಟ್ಟೆಯಲ್ಲಿ ಪೂರೈಕೆದಾರರು ದರ ಏರಿಕೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಆದರೆ ಕಡಿಮೆ ದರದಲ್ಲಿ ಔಷಧ ದೊರೆಯುವ ಜನೌಷಧಿ ಮಳಿಗೆಗಳ ಮೇಲೆ ಜನರು ಹೆಚ್ಚು ನಂಬಿಕೆ ಇರಿಸುವಂತೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

Advertisement

51 ಔಷಧ ಸೇರ್ಪಡೆ: ಜನೌಷಧಿ ಮಳಿಗೆಗಳಲ್ಲಿ ಸದ್ಯ 852 ಔಷಧಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ವಿಧಿವಶರಾದ ನಂತರ ಕ್ಯಾನ್ಸರ್‌ಗೆ ಸಂಬಂಧಪಟ್ಟ 51 ಔಷಧಗಳನ್ನು ಜನೌಷಧಿ ಮಳಿಗೆಗಳಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಕೀಲರ ಸಂಘಕ್ಕೆ ಸಂಸದರ ನಿಧಿಯಿಂದ 25 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ ಡಿ.ವಿ.ಸದಾನಂದಗೌಡ, ನ್ಯಾಯಾಲಯದಲ್ಲಿ ಖಾಲಿ ಹುದ್ದೆ ಭರ್ತಿಗೆ ಸಂಬಂಧಪಟ್ಟಂತೆ ಕಾನೂನು ಸಚಿವರೊಂದಿಗೆ ಚರ್ಚಿಸಲು ತೆರಳಬೇಕು ಎಂದು ಹೇಳಿದರು.

ಹೈಕೋರ್ಟ್‌ ಹಿರಿಯ ನ್ಯಾ. ಎಲ್‌.ನಾರಾಯಣಸ್ವಾಮಿ, ಕಡಿಮೆ ದರದಲ್ಲಿ ಬಡ ಜನರಿಗೆ ಔಷಧ ಸಿಗುವುದು ಬದುಕುವ ಹಕ್ಕಿನ ಒಂದು ಭಾಗ. ಸಣ್ಣ ರೋಗಕ್ಕೂ ಜನ ಜೀವ ಕಳೆದುಕೊಳ್ಳುವುದನ್ನು ಜನೌಷಧಿ ಕೇಂದ್ರದಿಂದ ತಪ್ಪಿಸಬಹುದು ಎಂದು ಹೇಳಿದರು. ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ನಾವಡಗಿ, ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next