Advertisement

ನೈಸರ್ಗಿಕವಾಗಿ ಮಾವು ಮಾಗಿಸಲು 100 ಘಟಕ

11:58 AM May 06, 2017 | |

ಬೆಂಗಳೂರು: ಕಾರ್ಬೈಡ್‌ ಮುಕ್ತವಾಗಿ ಮಾವಿನ ಕಾಯಿಗಳನ್ನು ಮಾಗಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ 100 ಇಥಿಲಿನ್‌ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

Advertisement

ಸಸ್ಯತೋಟ ಲಾಲ್‌ಬಾಗ್‌ನಲ್ಲಿ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನೇತೃತ್ವದಲ್ಲಿ ಶುಕ್ರವಾರದಿಂದ ಆರಂಭವಾದ ಮಾವು ಮತ್ತು ಹಲಸು ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆರೋಗ್ಯದ ದೃಷ್ಟಿಯಿಂದ ಕಾರ್ಬೈಡ್‌ ಮುಕ್ತ ಮಾವಿಗೆ ಅತ್ಯಂತ ಹೆಚ್ಚು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಮಾವು ಅಭಿವೃದ್ಧಿ ನಿಗಮ ಮತ್ತು ಎಪಿಎಂಸಿ ಸಹಯೋಗದಲ್ಲಿ ಇಥಿಲಿನ್‌ ಕೇಂದ್ರಗಳ ಸ್ಥಾಪನೆಗೆ ಪ್ರಾಮುಖ್ಯತೆ ನೀಡಲಾಗಿದೆ. ಇದೊಂದು ನೈಸರ್ಗಿಕವಾಗಿ ಹಣ್ಣು ಮಾಡುವ ವಿಧಾನವಾಗಿದೆ ಎಂದು ತಿಳಿಸಿದರು.

ಶ್ರೀನಿವಾಸಪುರ ಮತ್ತು ಮಾಡಿಕೆರೆಯಲ್ಲಿ ಮಾವು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಧಾರವಾಡ, ರಾಮನಗರಗಳಲ್ಲಿಯೂ ಮಾವು ಬೆಳೆ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಬಂದಿದ್ದು, ಅದಕ್ಕಾಗಿ ತಲಾ 10 ಎಕರೆ ಭೂಮಿಯನ್ನು ಗುರುತು ಮಾಡಲಾಗಿದೆ. ಶೀಘ್ರವೇ ನಿಯಮಗಳ ಪ್ರಕಾರವಾಗಿ ಈ ಭೂಮಿಯನ್ನು ನಿಗಮಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಅಧ್ಯಕ್ಷ ಎಲ್‌.ಗೋಪಾಲಕೃಷ್ಣ ಮಾತನಾಡಿ, ಕಳೆದ ಬಾರಿ ಸುಮಾರು 590 ಕೋಟಿ ವಿದೇಶಿ ವಹಿವಾಟು ನಡೆಸಲಾಗಿತ್ತು. ಈ ಬಾರಿ ಅಂದಾಜು 10 ಸಾವಿರ ಟನ್‌ ಮಾವನ್ನು ರಫ್ತು ಮಾಡುವ ಗುರಿ ಇದ್ದು, ಈಗಾಗಲೇ ವಿವಿಧ ದೇಶಗಳಿಂದ ಬೇಡಿಕೆ ಬಂದಿದೆ. ರಾಜ್ಯದ ಆಯ್ದ ಮಾವು ಬೆಳೆಗಾರರಿಗೆ ತರಬೇತಿ ನೀಡಲಾಗಿದ್ದು, ಅತ್ಯುತ್ತಮ ಗುಣಮಟ್ಟದ ಮಾವು ಬೆಳೆಯಲು ಅಗತ್ಯ ನೆರವು ಕೊಡಲಾಗಿದೆ ಎಂದರು.

ಮಾಡಿಕೆರೆಯಲ್ಲಿ ಮಾವು ಅಭಿವೃದ್ಧಿ ನಿಗಮದಿಂದ ಸ್ಥಾಪಿಸಲಾಗುತ್ತಿರುವ ಮಾವು ಚಿಕಿತ್ಸಾ ಕೇಂದ್ರ (ಪ್ಯಾಕ್‌ ಹೌಸ್‌)ದ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರವೇ ಅದನ್ನು ಆರಂಭಿಸಲಾಗುವುದು. ಇದರಿಂದ ರೈತರಿಗೂ ಕೂಡ ಅಮೆರಿಕಾ, ಆಸ್ಟ್ರೇಲಿಯಾ, ಯುರೋಪ್‌ ರಾಷ್ಟ್ರಗಳು ಸೇರಿದಂತೆ ವಿವಿಧ ರಾಷ್ಟ್ರಗಳು ಬಯಸುವ ಮಾವಿಗೆ ಬಿಸಿ ನೀರಿನ ಚಿಕಿತ್ಸೆ ಕೊಟ್ಟು ರಫ್ತು ಮಾಡಲು ಅನುಕೂಲ ಲಭ್ಯವಾಗಲಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸ್‌, ತೋಟಗಾರಿಕೆ ಆಯುಕ್ತ ಪ್ರಭಾಷ್‌ ಚಂದ್ರ ರೇ, ತೋಟಗಾರಿಕೆ ಅಪರ ನಿರ್ದೇಶಕ ಕೆ.ಎಂ.ಪರಶಿವಮೂರ್ತಿ, ಮಾವು ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ, ಉಪನಿರ್ದೇಶಕರಾದ ಜೆ.ಗುಣವಂತ, ಎಂ.ಗಾಯಿತ್ರಿ ಹಾಗೂ ನಿಗಮದ ನಿರ್ದೇಶಕರುಗಳು ಉಪಸ್ಥಿತರಿದ್ದರು. 

ಮಾವು, ಹಲಸು ಸವಿದ ಸಿಎಂ 
ಶುಕ್ರವಾರ ಮಧ್ಯಾಹ್ನ 12ಗಂಟೆ ವರೆಗೆ ರಾಹುಕಾಲ ಇದೆ ಎಂದು 12.05ಕ್ಕೆ ಮಾವು-ಹಲಸು ಮೇಳದ ಉದ್ಘಾಟನೆ ಕಾರ್ಯವನ್ನು ನಿಗಧಿ ಮಾಡಲಾಗಿತ್ತು. 12.30ರ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಸರವಾಗಿ ಬಂದು, ಮೇಳ ಉದ್ಘಾಟಿಸಿದರು. ನಂತರ ಚಂದ್ರ ಹಲಸು ಮತ್ತು ಅವರಿಗೆ ಇಷ್ಟವಾದ ಆಲ್ಫಾನ್ಸ್‌ ಹಣ್ಣಿನ ರುಚಿ ಸವಿದು ಬೇರೆ ಕಾರ್ಯಕ್ರಮದ ನಿಮಿತ್ತ ನಿರ್ಗಮಿಸಿದರು.

102 ಮಳಿಗೆ ವಿತರಣೆ 
ಮಾವು ಮೇಳದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸುಮಾರು 102 ರೈತರಿಗೆ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. 87 ಮಳಿಗೆಗಳು ಮಾವು ಬೆಳೆಗಾರರಿಗೆ ಹಾಗೂ 15 ಹಲಸು ಬೆಳೆಗಾರರಿಗೆ ವಿತರಿಸಲಾಗಿದೆ. ಅವುಗಳಲ್ಲಿ ಮೊದಲ ದಿನ 11 ಮಳಿಗೆಗಳು ಖಾಲಿ ಇದ್ದು, ಮುಂದಿನ ದಿನಗಳಲ್ಲಿ ಭರ್ತಿಯಾಗಲಿವೆ.
 
ಮಾವು ಮತ್ತು ಹಲಸು ಮೇಳದ ಮೊದಲ ದಿನ ಸುಮಾರು 3 ಟನ್‌ ಮಾವು ಮಾರಾಟವಾಗಿದ್ದು, ಅಂದಾಜು 2 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆ. ಶನಿವಾರ ಮತ್ತು ಭಾನುವಾರ ರಜಾ ದಿನಗಳಾಗಿದ್ದು, ಅಂದಾಜು 15ರಿಂದ 20 ಟನ್‌ ಮಾರಾಟದ ನಿರೀಕ್ಷೆ ಇದೆ. ಮಾವಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ರಾಮನಗರ ಮತ್ತು ಮಂಡ್ಯದಲ್ಲಿಯೂ ಮೇಳ ಆಯೋಜಿಸಲಾಗಿದ್ದು ಮೇ 6ಕ್ಕೆ ಚಾಲನೆ ನೀಡಲಾಗುತ್ತಿದೆ. 
– ಕದಿರೇಗೌಡ, ವ್ಯವಸ್ಥಾಪಕ ನಿರ್ದೇಶಕ, ಮಾವು ಅಭಿವೃದ್ದಿ ನಿಗಮ.

Advertisement

Udayavani is now on Telegram. Click here to join our channel and stay updated with the latest news.

Next