Advertisement

ಜಿಎಸ್‌ಟಿಗೆ 100 ದಿನ ಯಾರಿಗೆ ಲಾಭ-ನಷ್ಟ?

10:38 AM Oct 11, 2017 | |

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾಗಿ ಶತದಿನ ಪೂರೈಸಿದೆ. ಈ ನೂರು ದಿನಗಳಲ್ಲಿ ಬೆರಳೆಣಿಕೆ ಉದ್ಯಮದಲ್ಲಿ ವಹಿವಾಟು ಚೇತರಿಕೆಯಾಗಿದ್ದು, ಬಹಳಷ್ಟು ವಲಯದ ವಹಿವಾಟು ಕುಸಿದಿರುವುದು ಮೇಲ್ನೋಟಕ್ಕೆ ಕಂಡುಂಬಂದಿದೆ. ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಉತ್ಪಾದಕ, ವಿತರಕ, ಮಾರಾಟ ವಲಯಗಳ ವ್ಯವಹಾರದಲ್ಲಿ ಸಾಕಷ್ಟು ಏರಿಳಿತವಾಗಿವೆ. ಜಿಎಸ್‌ಟಿ ತೆರಿಗೆಗಿಂತಲೂ ಅದರ ಬಗೆಗಿನ ಸ್ಪಷ್ಟತೆ ಇಲ್ಲದಿರುವುದು, ತಾಂತ್ರಿಕ ಅಡಚಣೆಗಳು, ಮಾಹಿತಿ ಕೊರತೆಯೇ ಉತ್ಪಾದಕ, ವಿತರಕ, ಮಾರಾಟ ವಲಯದವರ ಕಂಗೆಡಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ 200 ರೂ. ಮೇಲ್ಪಟ್ಟ ಖರೀದಿಗೆ ರಸೀದಿ ಪಡೆಯುವ ಅವಕಾಶವನ್ನು ಬಹುತೇಕ ಗ್ರಾಹಕರು ಬಳಸಿಕೊಂಡಂತಿಲ್ಲ. ವ್ಯಾಪಾರ- ವಹಿವಾಟು ಪ್ರಮಾಣ ಇಳಿಮುಖವಾಗಿದ್ದರೂ ತಾತ್ಕಾಲಿಕವೆನಿಸಿದ್ದು, ಸದ್ಯದಲ್ಲೇ ಚೇತರಿಕೆ ಕಾಣುವ ನಿರೀಕ್ಷೆಯಲ್ಲಿದ್ದಾರೆ. ಪ್ರಮುಖ ವಲಯಗಳ ಮೇಲೆ
ಜಿಎಸ್‌ಟಿ ಉಂಟಾಗಿರುವ ಪರಿಣಾಮ ಕುರಿತಂತೆ ಆಯಾ ಕ್ಷೇತ್ರದ ಪ್ರಮುಖರ ಪ್ರತಿಕ್ರಿಯೆ ಸಹಿತ ವಿವರ ಇಲ್ಲಿದೆ.

Advertisement

50% ಆಹಾರ ಪದಾರ್ಥ, ಬೇಳೆ
ಬ್ರಾಂಡೆಡ್‌ ಆಹಾರ ಪದಾರ್ಥ, ಬೇಳೆಕಾಳುಗಳಿಗೆ ಜಿಎಸ್‌ಟಿಯಡಿ ತೆರಿಗೆ ವಿಧಿಸಿದ್ದರೂ ಬ್ರಾಂಡ್‌ರಹಿತ ಆಹಾರ ಪದಾರ್ಥಗಳಿಗೆ ತೆರಿಗೆ ವಿನಾಯ್ತಿ ಇದೆ. ಕೇಂದ್ರ ವಿಧಿಸಿರುವ ಕೆಲ ಷರತ್ತುಗಳಿಂದ ಬ್ರಾಂಡ್‌ರಹಿತ ಪದಾರ್ಥಗಳು ತೆರಿಗೆ ವ್ಯಾಪ್ತಿಗೆ ಒಳಪಡುವಂತಿರುವ ಕಾರಣ ಶೇ.99ರಷ್ಟು ಪದಾರ್ಥಗಳು ಬ್ರಾಂಡ್‌ರಹಿತವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ, ಜಿಎಸ್‌ಟಿ ಜಾರಿ ಬಳಿಕ ಆಹಾರ ಪದಾರ್ಥ, ಬೇಳೆಕಾಳು ಮಾರಾಟ ಪ್ರಮಾಣ ಶೇ.50ರಷ್ಟು ಕುಸಿದಿದೆ. ಮಾರುಕಟ್ಟೆಗೆ ಪೂರೈಕೆ ಪ್ರಮಾಣ ಹೆಚ್ಚಿರುವುದರಿಂದ ಬಹುತೇಕ ವಸ್ತುಗಳ ಬೆಲೆ ಇಳಿಕೆಯಾಗಿದ್ದರೂ ವಹಿವಾಟು ವೃದ್ಧಿಸುತ್ತಿಲ್ಲ. ಶೇ.99ರಷ್ಟು ಉತ್ಪನ್ನಗಳು ಬ್ರಾಂಡ್‌ರಹಿತವಾಗಿದ್ದರೂ ಖರೀದಿ ಏರಿಕೆಯಾಗುತ್ತಿಲ್ಲ. ಬ್ರಾಂಡೆಡ್‌ ಆಹಾರ ಪದಾರ್ಥಗಳಿಗೂ
ಬೇಡಿಕೆ ಸೃಷ್ಟಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

30% ಹೋಟೆಲ್‌ ರೆಸ್ಟೋರೆಂಟ್‌
ಜಿಎಸ್‌ಟಿ ಜಾರಿ ಬಳಿಕ ಹೋಟೆಲ್‌, ರೆಸ್ಟೋರೆಂಟ್‌ಗಳ ತಿಂಡಿ, ತಿನಿಸಿನ ಬೆಲೆ ಇಳಿಕೆಯಾಗುವ ನಿರೀಕ್ಷೆ ಇತ್ತು. ಬಹುತೇಕ ಕಡೆ ಹೋಟೆಲ್‌ ತಿಂಡಿ- ತಿನಿಸಿನ ಬೆಲೆ ಯಥಾಸ್ಥಿತಿಯಲ್ಲಿದ್ದರೆ, ಕೆಲವೆಡೆ ಆಯ್ದ ಪದಾರ್ಥಗಳ ಬೆಲೆ ಇಳಿಕೆಯಾಗಿದೆ. ಹವಾನಿಯಂತ್ರಿತ ವ್ಯವಸ್ಥೆಯಿರುವ ಹೋಟೆಲ್‌ಗ‌ಳಲ್ಲಿ ಶೇ.18ರಷ್ಟು ತೆರಿಗೆಯಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿರುವುದು ಕಂಡುಬಂದಿದೆ. ರಾಜ್ಯಾದ್ಯಂತ
ಹೋಟೆಲ್‌, ರೆಸ್ಟೋರೆಂಟ್‌ ವಹಿವಾಟು ಶೇ.25ರಿಂದ ಶೇ.30ರಷ್ಟು ಇಳಿಕೆಯಾಗಿದೆ. ಹವಾನಿಯಂತ್ರಿತ ಹೋಟೆಲ್‌ ಗೆ ಶೇ.18, ಹವಾನಿಯಂತ್ರಣ ವ್ಯವಸ್ಥೆರಹಿತ ಹೋಟೆಲ್‌ಗೆ ಶೇ.12ರಷ್ಟು ತೆರಿಗೆಯಿಂದಾಗಿ ಗ್ರಾಹಕರ ಸಂಖ್ಯೆ ಕುಸಿದಿದೆ. ತಾರಾ ಹೋಟೆಲ್‌ ಹೊರತುಪಡಿಸಿ ಉಳಿದ ಎಲ್ಲ ಹೋಟೆಲ್‌ ಗೆ ಶೇ.5ರಷ್ಟು ತೆರಿಗೆ ವಿಧಿಸಬೇಕೆಂಬ ಮನವಿಗೆ ಸ್ಪಂದನೆ ಸಿಕ್ಕಿಲ್ಲ ಎನ್ನುತ್ತಾರೆ ಕರ್ನಾಟಕ ಹೋಟೆಲ್‌ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿಶಾಸ್ತ್ರಿ

10% ಔಷಧ ವಹಿವಾಟು
ಜಿಎಸ್‌ಟಿ ಅನುಷ್ಠಾನದ ಬಳಿಕ ಬಹುತೇಕ ಔಷಧಗಳ ಬೆಲೆ ಇಳಿಕೆಯಾದಂತಿಲ್ಲ. ಒಟ್ಟಾರೆ ಔಷಧ ವಹಿವಾಟು ಬೆಂಗಳೂರಿನಲ್ಲಿ ಶೇ.10ರಷ್ಟು ಇಳಿಕೆಯಾಗಿದೆ. ಶೇ.20ರಷ್ಟು ವಹಿವಾಟುದಾರರು ಇನ್ನೂ ಜಿಎಸ್‌ಟಿ ವ್ಯಾಪ್ತಿಗೆ ಇನ್ನಷ್ಟೇ ಸೇರ್ಪಡೆಯಾಗಬೇಕಿದೆ. ಈ ಹಿಂದೆ ಆಯ್ದ ಔಷಧಗಳಿಗೆ ಶೇ.5.5ರಷ್ಟಿದ್ದ ತೆರಿಗೆ ಇದೀಗ ಶೇ.12ಕ್ಕೆ ಏರಿಕೆಯಾಗಿದ್ದು, ರೋಗಿಗಳಿಗೆ ಹೊರೆಯಾಗಿ ಪರಿಣಮಿಸಿದೆ. ಔಷಧ ಮಾರಾಟ ವಹಿವಾಟು ಬಹುತೇಕ ಯಥಾಸ್ಥಿತಿಯಲ್ಲಿದ್ದು, ಶೇ.10ರಷ್ಟು ಮಾತ್ರ ಇಳಿಕೆಯಾಗಿದೆ. ಆಯ್ದ ಔಷಧಗಳಿಗೆ ವಿಧಿಸಲಾದ
ತೆರಿಗೆ ಪ್ರಮಾಣದ ಬಗ್ಗೆ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲದ ಕಾರಣ ಗೊಂದಲ ಹೆಚ್ಚಾಗಿದೆ. ಶೇ.80ರಷ್ಟು
ಔಷಧಾಲಯಗಳು ಜಿಎಸ್‌ಟಿ ಅಳವಡಿಸಿಕೊಂಡಿದ್ದು, ಉಳಿದವರು ಸದ್ಯದಲ್ಲೇ ಅಳವಡಿಸಿಕೊಳ್ಳಲಿದ್ದಾರೆ ಎಂದು ಬೃಹತ್‌ ಬೆಂಗಳೂರು ಕೆಮಿಸ್ಟ್‌ ಮತ್ತು ಡ್ರಗಿಸ್ಟ್‌ ಸಂಘದ ಅಧ್ಯಕ್ಷ ಎಂ.ಕೆ.ಮಾಯಣ್ಣ ತಿಳಿಸಿದ್ದಾರೆ. 

30% ಸರಕು- ಸೇವೆ ಸಾಗಣೆ
ಲಾರಿ ಸೇರಿ ಸರಕು ಸಾಗಣೆ ವಾಹನಗಳಿಗೆ ಜಿಎಸ್‌ಟಿಯಡಿ ತೆರಿಗೆ ವಿಧಿಸದಿದ್ದರೂ ವ್ಯಾಪಾರ- ವಹಿವಾಟು ಕುಸಿದಿರುವುದರ ಅಡ್ಡ ಪರಿಣಾಮ ಉದ್ಯಮಕ್ಕೆ ಹೊಡೆತ ನೀಡಿದೆ. ಲಾರಿ, ಇತರೆ ಸಾಗಣೆ ವಾಹನಗಳಿಗೆ ಬಾಡಿಗೆ ಇಲ್ಲವೇ ಟ್ರಿಪ್‌ ಪ್ರಮಾಣ ಶೇ.30ರಷ್ಟು ಕುಸಿದಿರುವುದರಿಂದ ಲಾರಿ ಮಾಲೀ ಕರು, ಅವಲಂಬಿತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಲಾರಿಗಳಿಗೆ ಬಾಡಿಗೆ ಪ್ರಮಾಣ ತಗ್ಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚೆನ್ನಾ ರೆಡ್ಡಿ, ಜಿಎಸ್‌ಟಿ ಬಳಿಕ ಉದ್ಯಮ, ವ್ಯಾಪಾರದಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿ ವಹಿವಾಟು ಇಳಿಕೆ ಯಾಗಿದೆ. ಇದರಿಂದ ಲಾರಿಗಳು ಬಾಡಿಗೆಯಿಲ್ಲದ ನಿಲ್ಲುವಂತಾಗಿದೆ. ಸದ್ಯ ರಾಜ್ಯಾದ್ಯಂತ 10,000ಕ್ಕೂ ಹೆಚ್ಚಾ ಲಾರಿಗಳು ಬಾಡಿಗೆ ಇಲ್ಲದೆ ನಿಂತಿವೆ. ಒಂದು ಲಾರಿಗೆ ತಿಂಗಳಿಗೆ 12ರಿಂದ 15 ಟ್ರಿಪ್‌ ಸಿಗುತ್ತಿದ್ದುದು, ಜಿಎಸ್‌ಟಿ ಬಳಿಕ 7-8 ದಿನದ ಟ್ರಿಪ್‌ ಗೆ ಕುಸಿದಿದೆ. ಇದರಿಂದ ವಾಹನ ಸಾಲ ಮೊತ್ತ ಮರುಪಾವತಿ, ರಸ್ತೆ ತೆರಿಗೆ ಪಾವತಿಗೆ ಪರದಾಡುವಂತಾಗಿದೆ ಎಂದರು.

Advertisement

06% ಮಾಲ್‌ ವಹಿವಾಟು
ಜಿಎಸ್‌ಟಿ ವಾಣಿಜ್ಯ ಮಾಲ್‌ಗ‌ಳ ವಹಿವಾಟಿನ ಮೇಲೆಯೂ ಪರಿಣಾಮ ಬೀರಿದೆ. ನಗರದ ಬಹುಪಾಲು ಪ್ರತಿಷ್ಠಿತ ಮಾಲ್‌ಗಳಲ್ಲಿ ಕಳೆದ 100 ದಿನಗಳಲ್ಲಿ ವಹಿವಾಟು ಶೇ.6ರಷ್ಟು ಇಳಿಕೆಯಾಗಿದೆ. ಬ್ರಾಂಡೆಡ್‌ ಉಡುಪುಗಳು, ವಸ್ತುಗಳನ್ನೇ ನೆಚ್ಚಿಕೊಂಡಿರುವವರು, ಬಳಸುವವರ ಖರೀದಿ ಪ್ರಮಾಣದಲ್ಲಿ ಹೆಚ್ಚಿನ ಇಳಿಕೆಯಾಗದಿರುವುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಗರುಡಾ ಮಾಲ್‌ನ ಪ್ರಧಾನ ವ್ಯವಸ್ಥಾಪಕ ನಂದೀಶ್‌, ಬಹಳಷ್ಟು ಮಾಲ್‌ಗಳಲ್ಲಿ ಸರಾಸರಿ ಶೇ.6ರಷ್ಟು ವಹಿವಾಟು ಕುಸಿದಿದೆ. ಇದಕ್ಕೆ ಜಿಎಸ್‌ ಟಿಯೊಂದೇ ಕಾರಣ ಎನ್ನಲು ಸಾಧ್ಯವಿಲ್ಲ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದು ಸೇರಿದಂತೆ ಇತರೆ ಕಾರಣಗಳು ಇರಬಹುದು. ಬ್ರಾಂಡೆಡ್‌ ವಸ್ತುಗಳನ್ನು ಬಳಸುವವರ ಖರೀದಿ ಬಹುತೇಕ ಸರಾಸರಿ ಪ್ರಮಾಣದಲ್ಲೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

50% ಗಾರ್ಮೆಂಟ್‌ ಉದ್ಯಮ
ಗಾರ್ಮೆಂಟ್‌, ಜವಳಿ ಉದ್ಯಮದ ವಹಿವಾಟು ಶೇ.50ರಷ್ಟು ಕುಸಿದಿದ್ದು, ಉತ್ಪಾದಕರು, ವಿತರಕರು, ವ್ಯಾಪಾರಿಗಳು
ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜಿಎಸ್‌ಟಿಯಡಿ ತೆರಿಗೆ ಪಾವತಿ ಹಾಗೂ ಮಾಸಿಕ ವಹಿವಾಟು ವಿವರ ಸಲ್ಲಿಸುವಲ್ಲಿನ ಗೊಂದಲ ನಿವಾರಿಸದ ಕಾರಣ ವ್ಯಾಪಾರಿಗಳು ಪರದಡುವಂತಾಗಿದೆ. ನೇಯ್ಗೆ, ರೇಷ್ಮೆ ಉತ್ಪನ್ನ ವಹಿವಾಟು ಶೇ.30ರಷ್ಟು ಕುಸಿದಿದೆ ಎಂದು ವ್ಯಾಪಾರಿಗಳು  ಹೇಳಿದ್ದಾರೆ. ಜಿಎಸ್‌ಟಿಗೆ ಸ್ವಾಗತಿಸಿರುವ ಕರ್ನಾಟಕ ಹೊಸೈರಿ ಮತ್ತು ಗಾರ್ಮೆಂಟ್‌ ಸಂಘದ ಅಧ್ಯಕ್ಷ ದಿಲೀಪ್‌ ಜೈನ್‌, ಜಿಎಸ್‌ಟಿ ವ್ಯವಸ್ಥೆಯಡಿ ಸುಗಮವಾಗಿ ವ್ಯವಹರಿಸುವ ವ್ಯವಸ್ಥೆ ಕಲ್ಪಿಸಬೇಕಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಶೇ.50ಕ್ಕಿಂತಲೂ ಹೆಚ್ಚು ವಹಿವಾಟು ಕುಸಿದಿದೆ. ಇತ್ತೀಚೆಗೆ ನವರಾತ್ರಿ ಸಂದರ್ಭದಲ್ಲಿ ಶೇ.70ರಷ್ಟು ವಹಿವಾಟು ನಡೆದಿರುವುದು ತುಸು ಸಮಾಧಾನ ತಂದಿದೆ ಎಂದು ಹೇಳಿದರು.

ಯಥಾಸ್ಥಿತಿ: ಹೊಸ ವಾಹನ ನೋಂದಣಿ
ಜಿಎಸ್‌ಟಿಯು ಹೊಸ ವಾಹನಗಳ ಖರೀದಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ. ಈ ಹಿಂದೆ ಹಾಗೂ ಜಿಎಸ್‌ಟಿ ಜಾರಿ ಬಳಿಕವೂ ರಾಜ್ಯಾದ್ಯಂತ ಹೊಸ ವಾಹನ ಖರೀದಿ, ನೋಂದಣಿ ಬಹುತೇಕ ಯಥಾಸ್ಥಿತಿಯಲ್ಲೇ ಇದೆ. ಆಯ್ದ ಶ್ರೇಣಿಯ ವಾಹನಗಳಿಗೆ ಜಿಎಸ್‌ಟಿ ತೆರಿಗೆಯಿದ್ದರೂ ಖರೀದಿ ಪ್ರಮಾಣ ತಗ್ಗಿಲ್ಲ. ಈ ಕುರಿತು ವಿವರ ನೀಡಿದ ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರ ಕುಮಾರ್‌, ಜಿಎಸ್‌ಟಿ ಜಾರಿ ನಂತರವೂ ರಾಜ್ಯಾದ್ಯಂತ ಹೊಸ ವಾಹನ ನೋಂದಣಿ ಪ್ರಮಾಣ ಯಥಾಸ್ಥಿತಿಯಲ್ಲೇ ಇದೆ.  ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಹೊಸ ವಾಹನ ನೋಂದಣಿ ಹೆಚ್ಚು. ಅದರಂತೆ ನಿತ್ಯ 1,500 ದ್ವಿಚಕ್ರ ವಾಹನ, 500 ಕಾರು ಹಾಗೂ 200 ಸಾಗಣೆ ವಾಹನಗಳು ನೋಂದಣಿಯಾಗುತ್ತಿವೆ ಎಂದು ತಿಳಿಸಿದರು.

15% ರಿಯಲ್‌ ಎಸ್ಟೇಟ್‌
ರಾಜ್ಯಾದ್ಯಂತ ರಿಯಲ್‌ ಎಸ್ಟೇಟ್‌ ವ್ಯವಹಾರ ಪ್ರಮಾಣವೂ ಜಿಎಸ್‌ಟಿ ಬಳಿಕ ತಗ್ಗಿದೆ. ಆದರೆ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಚೇತರಿಕೆ ಕಂಡುಬಂದಿರುವುದು ಗಮನ ಸೆಳೆದಿದೆ. “ರೆರಾ’ ಕಾಯ್ದೆ ಜಾರಿಯಿಂದಾಗಿ ಚೇತರಿಕೆ ಕಂಡಿದ್ದು, ಫ್ಲ್ಯಾಟ್‌ಗಳ ಖರೀದಿ ನೋಂದಣಿ ಹೆಚ್ಚಾಗುತ್ತಿದೆ ಎಂಬುದು ಉದ್ಯಮ ವಲಯದ ಅಭಿಪ್ರಾಯ. ಕ್ರೆಡಾಯ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್‌, ಕಳೆದ 100 ದಿನಗಳಲ್ಲಿ ರಾಜ್ಯಾದ್ಯಂತ ರಿಯಲ್‌ ಎಸ್ಟೇಟ್‌ ಉದ್ಯಮದ ವಹಿವಾಟು ಶೇ.15ರಷ್ಟು ಕುಸಿದಿದೆ. ಆದರೆ ಬೆಂಗಳೂರಿನಲ್ಲಿ ಶೇ.14ರಷ್ಟು ಏರಿಕೆಯಾಗಿರುವುದು ಆಸ್ತಿ ನೋಂದಣಿಯಿಂದ ಸ್ಪಷ್ಟವಾಗಿದೆ. ಇದಕ್ಕೆ ಜಿಎಸ್‌ಟಿಗಿಂತಲೂ “ರೆರಾ’ ಕಾಯ್ದೆ ಜಾರಿಯಿಂದಾಗಿ ಚೇತರಿಕೆ ಕಂಡಂತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಸುವ ನಿರೀಕ್ಷೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next