ಮೈಸೂರು: ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ನಗರದ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗೆ ನೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ನೂರು ಕೋಟಿ ರೂ. ಗಳ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ದೊರೆತಿದೆ ಎಂದರು.
ಜಿಲ್ಲಾಧಿಕಾರಿ ಪ್ರವಾಸೋದ್ಯಮ ಇಲಾಖೆಗೆ ಭೂಮಿ ನೀಡಿದ ನಂತರ ವಾಹನ ನಿಷೇಧ ಮಾಡುವುದು, ಬ್ಯಾಟರಿ ಚಾಲಿತ ವಾಹನ ನೀಡುವುದು ಸೇರಿದಂತೆ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗಿರುವ ಕಟ್ಟಡಗಳನ್ನು ಹೊರತು ಪಡಿಸಿ ಹೊಸ ಕಟ್ಟಡ ನಿರ್ಮಾಣವಾಗದಂತೆ ಬೆಟ್ಟದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಲಾಗುವುದು. ಈ ಯೋಜನೆ ಪ್ರವಾಸೋದ್ಯಮ ಇಲಾಖೆಯ ಒಂದು ಕೊಡುಗೆ ಎಂದು ತಿಳಿಸಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಕೊಡಗು ಉತ್ಸವ ಆಯೋಜನೆ ಮಾಡಲಾಗಿದೆ. ಜ. 11 ರಿಂದ ಮೂರು ದಿನಗಳ ಕಾಲ ಕೊಡಗು ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ ಎಂದರು.
ಕೊಡಗು ಅಭಿವೃದ್ಧಿಗೆ ಪ್ರಾಧಿಕಾರ: ಕೊಡಗಿನ ಸಕಲ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ಮೇರೆಗೆ ಮಾಡಲಾಗಿದೆ. ಪ್ರಾಧಿಕಾರ ರಚನೆಯಾಗಿ 15 ದಿನಗಳಾಗಿವೆ. ಎಚ್.ಡಿ. ಕುಮಾರಸ್ವಾಮಿ ಅವರೇ ಪ್ರಾಧಿಕಾರ ಅಧ್ಯಕ್ಷರಾಗಿದ್ದಾರೆ. ಪ್ರಾಧಿಕಾರದಲ್ಲಿ ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸಹ ಇದ್ದಾರೆ. ಈಗಾಗಲೇ ಎಲ್ಲಾ ರೀತಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಡಿಸ್ನಿಲ್ಯಾಂಡ್‌ನಿಂದ ಕೆಆರ್‌ಎಸ್‌ಗೆ ಅಪಾಯವಿಲ್ಲ: ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ ಮಹೇಶ್, ಇದು ರಾಜ್ಯದ ವ್ಯಾಪ್ತಿಗೆ ಬರುವ ವಿಚಾರ. ವಿಷಯಕ್ಕೆ ಸಂಬಂಧಿಸಿದಂತೆ ಸಲಹಾ ಸಮಿತಿ ರಚನೆ ಮಾಡಲಾಗಿದೆ.
ಕೆಆರ್‌ಎಸ್‌ಗೆ ತೊಂದರೆ ಆಗದ ರೀತಿ ಜನರಿಗೆ ಅನುಕೂಲವಾಗುವಂತೆ ಚಿಂತನೆ ನಡೆಸಲಾಗುತ್ತಿದೆ. ಡಿಸ್ನಿಲ್ಯಾಂಡ್ ನಿರ್ಮಾಣದಿಂದ ಕೆಆರ್‌ಎಸ್‌ಗೆ ಯಾವುದೆ ತೊಂದರೆ ಆಗುವುದಿಲ್ಲ. ಈಗಾಗಲೆ ಸಚಿವರು ಸಂಸದರೂ ಸೇರಿದಂತೆ ಸಲಹಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.