ಕೆ.ಆರ್.ನಗರ: ಪಟ್ಟಣವನ್ನು ಅಭಿವೃದ್ಧಿಪಡಿಸಲು ಪುರಸಭೆಗೆ ಸರ್ಕಾರದಿಂದ 100 ಕೋಟಿ ಅನುದಾನ ಮಂಜೂರು ಮಾಡಿಸಿದರೂ ಜನತೆಗೆ ತೃಪ್ತಿಕರವಾದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ 16ನೇ ವಾರ್ಡಿನ 1.25 ಕೋಟಿ ರೂ.ಗಳ ವೆಚ್ಚದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ಸರ್ಕಾರದಿಂದ 10 ಕೋಟಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಿಂದ 8 ಕೋಟಿ ರೂ. ಮಂಜೂರು ಮಾಡಿಸಲಾಗಿದೆ ಎಂದರು.
ಪಟ್ಟಣದ ಜನತೆಗೆ ಶುದ್ಧೀಕರಿಸಿದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಹಳೇ ಎಡತೊರೆಯ ಪಂಪ್ ಹೌಸ್‌ನ ನೀರು ಶುದ್ಧೀಕರಣ ಘಟಕಕ್ಕೂ ಅಗತ್ಯ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದ ಶಾಸಕರು ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕೆ.ಆರ್.ನಗರ ತಾಲೂಕಿನ ತಿಪ್ಪೂರು ಗ್ರಾಮದ ಉಪ್ಪಾರರ ಸಮುದಾಯ ಭವನದ ಉದ್ಘಾಟನೆಯ ಸಮಾರಂಭ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿರುವ ಡಿ.ರವಿಶಂಕರ್ ಅವ ರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್, ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಉಮೇಶ್, ಜಾವೀದ್ ಪಾಷಾ, ಮಾಜಿ ಅಧ್ಯಕ್ಷ ವೈ.ಆರ್. ಪ್ರಕಾಶ್, ಮಾಜಿ ಸದಸ್ಯರಾದ ಎನ್.ಶಿವ ಕುಮಾರ್, ರಾಜಶ್ರೀಕಾಂತ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್, ಮುಖಂಡರಾದ ವೀರಭದ್ರಚಾರ್, ವಿಶ್ವನಾಥ್, ಹರ್ಷಿತ್, ಪರಮೇಶ್, ಭಾಸ್ಕರನಾಯಕ, ಬಸವರಾಜು, ಮಹದೇವನಾಯಕ, ಮೂರ್ತಿ, ಚೇತನ್, ಚೌಡನಾಯಕ, ಶಿವಣ್ಣ, ಎಚ್.ಪಿ.ಹರೀಶ್, ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ಗುತ್ತಿಗೆದಾರ ಚಂದ್ರೇಗೌಡ ಇದ್ದರು.