Advertisement

ತಾಂಡಾ ಅಭಿವೃದ್ಧಿಗೆ 100 ಕೋಟಿ: ಸಿಎಂ

10:15 AM Feb 15, 2020 | Sriram |

ದಾವಣಗೆರೆ: ರಾಜ್ಯ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ತಾಂಡಾಗಳ ಅಭಿವೃದ್ಧಿಗೆ 100 ಕೋಟಿ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Advertisement

ಶುಕ್ರವಾರ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶ್ರೀ ಸಂತ ಸೇವಾಲಾಲ್‌ ಮಹಾರಾಜರ 281ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಾ.5ರಂದು ಮಂಡಿಸಲಿರುವ ಬಜೆಟ್‌ನಲ್ಲಿ ತಾಂಡಾಗಳ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಲಾಗುವುದು.

ಮುಂದಿನ 3 ವರ್ಷದಲ್ಲಿ ಬಂಜಾರ ಸಮಾಜ ಬಾಂಧವರು ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕು ನಡೆಸುವ ರೀತಿ ಎಲ್ಲಾ ಸೌಲಭ್ಯ ಒದಗಿಸಲಾಗುವುದು ಎಂದರು.

ಮುಂದಿನ ಎರಡು ವರ್ಷದಲ್ಲಿ ರಾಜ್ಯದ ಎಲ್ಲಾ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಲು ತೀರ್ಮಾನಿಸಿದ್ದು, ಅದಕ್ಕಾಗಿ ಎಷ್ಟೇ ಹಣ ಖರ್ಚಾದರೂ ಚಿಂತಿಸುವುದಿಲ್ಲ. ಲಂಬಾಣಿ ಸಮಾಜದ ಭಾಷೆ, ಸಂಸ್ಕೃತಿ ಅತೀ ವಿಶೇಷವಾಗಿದೆ. ಭಾಷೆ, ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಲಂಬಾಣಿ ಭಾಷಾ ಅಕಾಡೆಮಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಎಲ್ಲಾ ತಾಂಡಾಗಳಲ್ಲಿ ಉದ್ಯೋಗ ಸೃಜನೆಗೆ ಕ್ರಮ ವಹಿಸಲಾಗುವುದು. ವಿಶೇಷ ಪ್ಯಾಕೇಜ್‌ ನೀಡಲಾಗುವುದು. ಲಂಬಾಣಿ ಕಲಾ ಮತ್ತು ಕೌಶಲ್ಯದ ಸಿದ್ಧ ಉಡುಪು ಘಟಕವನ್ನು ಕೊಪ್ಪಳದ ಬಹದ್ದೂರ್‌ ಬಂಡ, ಹುಮನಾಬಾದ್‌ ಸಮೀಪದ ಲಾಲ್‌ಗ‌ರಿಯಲ್ಲಿ ಬೃಹತ್‌ ಪ್ರಮಾಣದಲ್ಲಿ ಪ್ರಾರಂಭಿಸಲು ಕ್ರಮ ವಹಿಸಲಾಗುವುದು. ವಿದೇಶಿ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು. ಹುಮನಾಬಾದ್‌ ಲಾಲ್‌ಗ‌ರಿಯಲ್ಲಿ 30, ಬಾಗಲಕೋಟೆಯಲ್ಲಿ ಗುದ್ದನಕೇರಿಯಲ್ಲಿ 6 ಎಕರೆ ಜಾಗವನ್ನು ತಾಂಡಾ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಈಗಾಗಲೇ ನೀಡಿದೆ ಎಂದರು.

Advertisement

ಬಂಜಾರ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಅಭಿವೃದ್ಧಿಗೆ ಅಧ್ಯಾತ್ಮ ಗುರು ಸಂತ ಸೇವಾಲಾಲರು ಕಾರಣ. ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ನಮ್ಮ ರಾಜ್ಯದಲ್ಲಿರುವ ಹೆಮ್ಮೆಯ ಸಂಗತಿ. ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಸೂರಗೊಂಡನಕೊಪ್ಪವನ್ನು ರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಸಂಪರ್ಕ ರಸ್ತೆ, ಉದ್ಯಾನವನ, ಕಾರಂಜಿ, ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಬಂಜಾರ ಜನಾಂಗ ವಿಶಿಷ್ಟ ಭಾಷೆ, ಸಂಪ್ರದಾಯ, ಸಂಸ್ಕೃತಿ ಹೊಂದಿದ್ದಾರೆ. ಸೇವಾಲಾಲರನ್ನು ಆರಾಧ್ಯ ದೈವ ಎಂದು ಆರಾಧಿ ಸುತ್ತಾರೆ. ಶ್ರಮದ ದುಡಿಮೆ, ಶ್ರದ್ಧೆಯ ಕಾಯಕಕ್ಕೆ ಬಂಜಾರ ಸಮುದಾಯ ಹೆಸರಾಗಿದೆ. ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೆ. ತಾಂಡಗಳಿಗೆ ಸಂಪರ್ಕ ರಸ್ತೆ ಒದಗಿಸಿ, ಪ್ರತಿ ತಾಂಡಾದಲ್ಲಿ ಸಮುದಾಯ ಭವನ ನಿರ್ಮಿಸಲು ಕ್ರಮ ತೆಗೆದುಕೊಂಡಿದ್ದೆ. ಸರ್ಕಾರ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವ ಬಗ್ಗೆ ಕ್ರಮ ವಹಿಸಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವಾಣ್‌, ಸಂಸದ ಬಿ.ಎಸ್‌. ರಾಘವೇಂದ್ರ, ಶಾಸಕರಾದ ಕೆ. ಮಾಡಾಳ ವಿರುಪಾಕ್ಷಪ್ಪ, ಪಿ.ಟಿ. ಪರಮೇಶ್ವರ ನಾಯ್ಕ, ದೇವಾನಂದ ಚವ್ಹಾಣ, ಅಶೋಕ ನಾಯ್ಕ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮಾಜಿ ಅಧ್ಯಕ್ಷೆ ಉಮಾ ರಮೇಶ್‌ ಇದ್ದರು. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next