ಕನಕ- ಷರೀಫ- ಸರ್ವಜ್ಞರ ವೇದಿಕೆ (ಹಾವೇರಿ): ಗಡಿ ನಾಡಿನ ಅಭಿವೃದ್ಧಿಗೆ ಈಗಾಗಲೇ ರಾಜ್ಯ ಸರಕಾರ 25 ಕೋಟಿ ರೂ.ಗಳನ್ನು ನೀಡಿದ್ದು, ಇನ್ನೂ 100 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಭಾನುವಾರ ಸಂಜೆ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗಡಿನಾಡಿನ ಶಿಕ್ಷಣ, ಆರೋಗ್ಯ ಹಾಗೂ ಇತರ ಮೂಲಭೂತ ಸೌಲಭ್ಯಗಳಿಗಾಗಿ ಗಡಿನಾಡ ಪ್ರಾ ಧಿಕಾರಕ್ಕೆ ಅನುದಾನ ಒದಗಿಸುತ್ತೇನೆ. 2008ರಲ್ಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಸಿಕ್ಕರೂ ಅದಕ್ಕೆ ಸಂಬಂ ಧಿಸಿದ ಸಂಶೋಧನೆ ಸೇರಿ ಇತರ ಕೆಲಸಗಳು ಆಗುತ್ತಿಲ್ಲ ಎಂಬ ಮಾತುಗಳು ಇವೆ. ಕೇಂದ್ರ ಸರ್ಕಾರ 13.30 ಕೋಟಿ ರೂ. ಇದಕ್ಕೆ ಸಂಬಂಧಿ ಸಿ ಅನುದಾನ ನೀಡಿದೆ.
ಕನ್ನಡದ ಶಾಸ್ತ್ರೀಯ ಭಾಷೆಯ ಸ್ಥಾನ ಮಾನದ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಲು ಬೇಕಾಗುವ ಹಣಕಾಸಿನ ನೆರವನ್ನೂ ರಾಜ್ಯ ಸರ್ಕಾರವೂ ನೀಡಲಿದೆ. ಈಗಾಗಲೇ ಮೈಸೂರು ವಿಶ್ವವಿದ್ಯಾಲಯದ ಕಟ್ಟಡವೊಂದನ್ನು ಪಡೆದು ಅದರ ನವೀಕರಣ ಕಾರ್ಯ ಮಾಡಲಾಗುತ್ತಿದೆ. ಶಾಸ್ತ್ರೀಯ ಭಾಷೆಯ ಕುರಿತ ಸಂಶೋಧನೆ, ಗ್ರಂಥಗಳ ಚರ್ಚೆಗೆ ಉನ್ನತ ಮಟ್ಟದ ಸಾಹಿತಿಗಳನ್ನು ಒಳಗೊಂಡ ಸಮಿತಿ ಕೂಡ ರಚಿಸಲಾಗುತ್ತದೆ ಎಂದರು.
ನೆಲ-ಜಲ ರಕ್ಷಣೆಗೂ ಸಿದ್ಧ: ಹೊರ ರಾಜ್ಯಗಳಲ್ಲಿ ಕನ್ನಡದ ಏಕೀಕರಣಕ್ಕೆ ಕೆಲಸ ಮಾಡಿದ ಸಾಹಿತಿಗಳು, ಹೋರಾಟಗಾರರು, ಸಾಂಸ್ಕೃತಿಕ ವ್ಯಕ್ತಿಗಳಿಗೆ ಪಿಂಚಣಿ ಕೂಡ ನೀಡಲು ತೀರ್ಮಾನಿಸಿದ್ದೇವೆ. ಪಶ್ಚಿಮ ಘಟ್ಟದ ನದಿ ಸಂಪತ್ತಿನ ಸಂಪೂರ್ಣ ಬಳಕೆ ಮೂಲಕ ತಾಯಿ ಭುವನೇಶ್ವರಿ ಸಂಪೂರ್ಣ ಹಸಿರು ಉಡುಗೆ ತೊಡಲಿದ್ದಾಳೆ. ಕಾನೂನು ಸಮಸ್ಯೆ ನಿವಾರಿಸಿಕೊಂಡು ಮಹದಾಯಿ ಯೋಜನೆ, ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಆಗಲಿದೆ. ಆಲಮಟ್ಟಿಯ ಎತ್ತರ 524 ಮೀಟರ್‌ಗೆ ಎತ್ತರಿಸಲು ಶೀಘ್ರ ಕೇಂದ್ರ ನ್ಯಾಯ ಮಂಡಳಿಯ ಅನುಮತಿ ಸಿಗುವ ವಿಶ್ವಾಸವಿದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕದ ಲಕ್ಷಾಂತರ ಎಕರೆ ಹಸಿರಾಗಲಿದೆ. ಮೇಕೆದಾಟು ಯೋಜನೆ ಕೂಡ ಜಾರಿಯಾಗಲಿದೆ ಎಂದರು.
Related Articles
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಇತ್ತೀಚೆಗೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸುತ್ತಿಲ್ಲ. ಹೀಗಾಗಬಾರದು. ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೆ ಅಭಿಮಾನ ಇರಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗುತ್ತಿದೆ. ಉನ್ನತ ಶಿಕ್ಷಣದಲ್ಲೂ ಸ್ಥಳೀಯ ಭಾಷೆ ಕಡ್ಡಾಯಗೊಳಿಸಲಾಗಿದೆ ಎಂದರು.
ಅಭಿನಂದಿಸಿದ ಸಿಎಂ: ಹಾವೇರಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಜಿಲ್ಲೆಯ ಜನಪ್ರತಿನಿಧಿ ಗಳು, ಜಿಲ್ಲಾ ಧಿಕಾರಿ, ಜಿಪಂ ಸಿಇಒ ಸೇರಿ ಅನೇಕರನ್ನು ಮುಖ್ಯಮಂತ್ರಿಗಳು ಶಾಲು ಹೊದಿಸಿ, ನೆನಪಿನ ಕಾಣಿಕೆಗಳನ್ನು ಕೊಟ್ಟು ಅಭಿನಂದಿಸಿದರು. ಅಷ್ಟೇಯಲ್ಲ, ಹಾವೇರಿ ಜಿಲ್ಲೆಯ ಜನರನ್ನು ತಮ್ಮ ಭಾಷಣದುದ್ದಕ್ಕೂ ಕೊಂಡಾಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್, ಶಿಕ್ಷಣ ಸಚಿವ ಆರ್.ನಾಗೇಶ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೆಕಾರ ಸೇರಿ ಜಿಲ್ಲೆಯ ಹಿರಿಯ ರಾಜಕಾರಣಿಗಳು, ಸಾಹಿತಿಗಳು, ಸಾಹಿತ್ಯ ಪರಿಷತ್ತಿನ ಪದಾ ಧಿಕಾರಿಗಳು ಉಪಸ್ಥಿತರಿದ್ದರು.
ಹಾವೇರಿಗೆ ಬಂಪರ್ ಕೊಡುಗೆ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ನಡೆಸಿದ ಹಾವೇರಿ ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಮೂರು ಕೋಟಿ ರೂ. ವಿಶೇಷ ಕೊಡುಗೆ ಘೋಷಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಕಟ್ಟಡಕ್ಕಾಗಿ ಮೂರು ಕೋಟಿ ರೂ. ನೀಡುತ್ತೇನೆ. ಉತ್ತರ ಕರ್ನಾಟಕ ಭಾಷೆ ವಿಭಿನ್ನವಾಗಿದೆ. ಈ ಹಣವನ್ನು ಬಳಸಿಕೊಂಡು ಕರ್ನಾಟಕ ಜಾನಪದ ವಿವಿ ಸಹಕಾರದೊಂದಿಗೆ ಉತ್ತರ ಕರ್ನಾಟಕದ ಜಾನಪದ ಭಾಷೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಕಸಾಪ ಮುಂದೆ ಬರಬೇಕೆಂದು ಸಲಹೆ ಸಿಎಂ ಬೊಮ್ಮಾಯಿ ನೀಡಿದರು.
ಹರಿಪ್ರಸಾದ್-ಜೋಶಿ ಮಧ್ಯೆ
ಮುಸ್ಲಿಂ ಜುಗಲ್‌ಬಂದಿ
ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಮುಸ್ಲಿಂ ಸಾಹಿತಿಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಇದು ಒಂದು ಸಮುದಾಯದ ಓಲೈಕೆ ಎಂಬಂತಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಮ್ಮೇಳನದ ವೇದಿಕೆಯಲ್ಲೇ ನೇರವಾಗಿ ಕಸಾಪ ಅಧ್ಯಕ್ಷರನ್ನು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟಣೆ ನೀಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ, ನಾನು ಭಾವೈಕ್ಯತೆಯ ನಾಡಿನಿಂದ ಬಂದವನು. ಎಲ್ಲಾ ಗೋಷ್ಠಿಗಳಲ್ಲಿ ಜಾತಿ ಭೇದ ಮರೆತು ಎಲ್ಲರಿಗೂ ಅವಕಾಶ ಮಾಡಿ ಕೊಟ್ಟಿದ್ದೇವೆ. ಇದು ಯಾವುದೇ ಜಾತಿ, ಧರ್ಮದ ಸಮಾವೇಶವಲ್ಲ. ಬದಲಿಗೆ ಇದು ಕನ್ನಡಿಗರ ಸಮಾವೇಶ ಎಂದು ಟಾಂಗ್ ಕೊಟ್ಟರು. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಜಕೀಯವನ್ನು ಯಾರೂ ಮಾತನಾಡಬಾರದು. ನಮಗಂತೂ ಅಂತಹ ದುಃಸ್ಥಿತಿ ಬಂದಿಲ್ಲ ಎಂದು ಕುಟುಕಿದರು.
ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಹರಿಪ್ರಸಾದ್ ನನ್ನ ಗೆಳೆಯರಾಗಿದ್ದಾರೆ. ಸ್ಥಾನಮಾನ ಬರುತ್ತವೆ ಹೋಗುತ್ತವೆ. ಆದರೆ, ಗೆಳೆತನ ಶಾಶ್ವತವಾಗಿರುವಂತಹದ್ದು ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದರು.
ಸಾಹಿತ್ಯವು ಸಮಾಜ ಒಡೆಯುವ ಕೆಲಸ ಮಾಡಬಾರದು. ಬದಲಿಗೆ ಮಾನವೀಯ ಸಂಬಂಧ ಬಲಗೊಳಿಸಬೇಕು. ಸಾಹಿತ್ಯ ಕ್ಷೇತ್ರ ಒಂದು ಅದ್ಭುತ ಕ್ಷೇತ್ರ. ಸೃಷ್ಟಿಯಲ್ಲಿ ಎಲ್ಲವನ್ನೂ ನೋಡಿದ್ದೇವೆ. ನಾಡು ಕಟ್ಟಲು ಪ್ರೇರಣೆ ಆಗುವಂತೆ ಸಾಹಿತ್ಯ ಬರಬೇಕು. ಸಾಹಿತ್ಯ ನಾಡನ್ನು, ಮನುಕುಲ ಒಂದಾಗಿಸಲು ಇದೆ. ಮನುಷ್ಯ ಸಂಬಂಧ ಕಡಿದು ಹಾಕಲು ಸಾಹಿತ್ಯ ಇಲ್ಲ.
– ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಸ್ಪೀಕರ್
ಮೂರು ದಿನಗಳ ಕಾಲ ನಡೆದ ಹಾವೇರಿ ಸಾಹಿತ್ಯ ಸಮ್ಮೇಳನ ಕಳೆದ 85 ಸಮ್ಮೇಳನಗಳಲ್ಲಿ ಮಿಗಿಲಾಗಿ ಇಲ್ಲಿ ನಡೆದಿದೆ. ನಿತ್ಯ ಒಂದೂವರೆ ಲಕ್ಷಕ್ಕೂ ಅಧಿ ಕ ಜನ ಸೇರಿ ಸಮ್ಮೇಳನಕ್ಕೆ ಶೋಭೆ ತಂದಿದ್ದಾರೆ. ಕನ್ನಡ ತೇರು ಎಳೆಯಲು ನೀಡಿದ ಸಹಕಾರಕ್ಕೆ ಕೃತಜ್ಞತೆಗಳು.
– ಶಿವರಾಮ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವ
ಸಾಹಿತಿಗಳ ಮಧ್ಯೆ ಅಭಿಪ್ರಾಯ ಭೇದವಿರುವುದು ಸಹಜ. ಅದನ್ನು ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳೊಣ. ಕೇವಲ ಟೀಕೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಹಾವು ತನ್ನ ಪೊರೆ ಕಳಚಿ ಹೊಸ ಪೊರೆ ಪಡೆದುಕೊಳ್ಳುವಂತೆ ನಮ್ಮಲ್ಲಿರುವ ಕಲ್ಮಷ, ಮಾಲಿನ್ಯ ತೊಳೆದು ಹಾಕಿ ನಮ್ಮನ್ನು ನಾವು ಬದಲಾಯಿಸಿಕೊಳ್ಳೋಣ.
– ಪ್ರೊ|ದೊಡ್ಡರಂಗೇಗೌಡ, ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರು
-ವಿರೇಶ್ ಮಡ್ಲೂರು