Advertisement

ವರ್ಷದಲ್ಲಿ 100 ಪ್ರಶಸ್ತಿ: ಕೆಎಸ್ಸಾರ್ಟಿಸಿ ಲಿಮ್ಕಾ ದಾಖಲೆ

03:45 AM Jan 13, 2017 | Team Udayavani |

ಬೆಂಗಳೂರು: ನೂರಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಈಗ ಮತ್ತೂಂದು ಮೈಲಿಗಲ್ಲು ಸ್ಥಾಪಿಸಿದೆ. ಅಲ್ಪಾವಧಿಯಲ್ಲಿ ಅತ್ಯಧಿಕ ಪ್ರಶಸ್ತಿಗಳಿಗೆ ಭಾಜನವಾಗುವ ಮೂಲಕ ಲಿಮ್ಕಾ ದಾಖಲೆ ಪುಟಕ್ಕೆ
ಸೇರ್ಪಡೆಗೊಂಡಿದೆ.

Advertisement

2015ರ ಜುಲೈನಿಂದ 2016ರ ಜೂನ್‌ವರೆಗಿನ ಒಂದು ವರ್ಷದ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ 107 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಲಿಮ್ಕಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಇದು ದಾಖಲಾಗಿದೆ. ಈ ಗೌರವಕ್ಕೆ ಪಾತ್ರವಾದ ದೇಶದ ಮೊದಲ ರಸ್ತೆ
ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.

2016ರ ಜುಲೈನಿಂದ ಈವರೆಗೆ ನಿಗಮಕ್ಕೆ 59 ಪ್ರಶಸ್ತಿಗಳು ಸಂದಿವೆ. ಅಂದರೆ ಒಟ್ಟಾರೆ 165 ಪ್ರಶಸ್ತಿಗಳು ಬಂದಿವೆ. ನಾವು ಅಳವಡಿಸಿಕೊಂಡ ಪ್ರಯಾಣಿಕ ಸ್ನೇಹಿ ತಂತ್ರಜ್ಞಾನಗಳು, ಅತ್ಯುತ್ತಮ ಸೇವೆ, ಆರಾಮದಾಯಕ ಪ್ರಯಾಣ ಮತ್ತಿತರ ಕ್ರಮಗಳನ್ನು ಪರಿಗಣಿಸಿ ಪ್ರಶಸ್ತಿಗಳು ಬಂದಿವೆ. ಈ ಸಾಧನೆಗೆ ನಿಗಮದ ಆಡಳಿತ ವರ್ಗ, ಚಾಲಕರು-ನಿರ್ವಾಹಕರು ಸೇರಿದಂತೆ ನಿಗಮದ
ಎಲ್ಲರ ಪರಿಶ್ರಮ ಕಾರಣ ಎಂದು ಹೇಳಿದರು. 

115 ಕೋಟಿ ರೂ. ಲಾಭ: 2015-16ರ ಹಣ ಕಾಸು ವರ್ಷದ ಅಂತ್ಯಕ್ಕೆ ನಿಗಮವು 114.95 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಪ್ರಸಕ್ತ ವರ್ಷವೂ ಲಾಭದಲ್ಲೇ ಸಾಗುತ್ತಿದೆ. ಆದರೆ, ನೋಟು ರದ್ದತಿ, ಸಿಬ್ಬಂದಿ ವೇತನ ಪರಿಷ್ಕರಣೆ, ಡೀಸೆಲ್‌ ದರ ಏರಿಕೆ, ಬಂದ್‌
-ಮುಷ್ಕರಗಳಿಂದ ಲಾಭದ ಪ್ರಮಾಣ ತುಸು ಕಡಿಮೆ ಆಗಲಿದೆ. ಹಾಗಾಗಿ, ಪ್ರಯಾಣ ದರ ಇಳಿಕೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

314.73 ಕೋಟಿ ಸಾಲದ ಪೈಕಿ 161.22 ಕೋಟಿ ರೂ. ಮರುಪಾವತಿ ಮಾಡಲಾಗಿದ್ದು, 153.51 ಕೋಟಿ ಮಾತ್ರ  ಬಾಕಿ ಇದೆ. ಅಂತರ ನಿಗಮಗಳ ವರ್ಗಾವಣೆಗೆ ಸಚಿವ ಸಂಪುಟದ ಒಪ್ಪಿಗೆ ಮಾತ್ರ ಬಾಕಿ ಇದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ. ಮೊದಲ ಹಂತದಲ್ಲಿ 2 ಸಾವಿರ ನೌಕರರ ವರ್ಗಾವಣೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಗಮದ ಉಪಾಧ್ಯಕ್ಷ ಬಸವರಾಜ ಬುಳ್ಳ, ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್‌ ಕುಮಾರ್‌ ಕಟಾರಿಯಾ, ನಿರ್ದೇಶಕರಾದ ಬಿಎನ್‌ಎಸ್‌ ರೆಡ್ಡಿ, ಎ.ಜಿ. ಭಟ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಬಸ್‌, ನಿಲ್ದಾಣಗಳಲ್ಲಿ ಉಚಿತ ವೈಫೈ ಶೀಘ್ರ
ಕೆಎಸ್‌ಆರ್‌ಟಿಸಿಯ ಎಲ್ಲ ಬಸ್‌ಗಳು ಹಾಗೂ ನಿಲ್ದಾಣಗಳಲ್ಲಿ ಶೀಘ್ರ ಉಚಿತ ವೈ-ಫೈ ಸೇವೆ ಆರಂಭಗೊಳ್ಳಲಿದೆ. ಕೆಎಸ್‌ಆರ್‌ಟಿಸಿಯ 156 ನಿಲ್ದಾಣ, 8317 ಬಸ್‌ಗಳು, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ 166 ನಿಲ್ದಾಣ, 4,785 ಬಸ್‌ ಗಳು ಹಾಗೂ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ 136 ನಿಲ್ದಾಣಗಳು ಮತ್ತು 4,346 ಬಸ್‌ಗಳಲ್ಲಿ ವೈ-ಫೈ ಸೇವೆ ಕಲ್ಪಿಸುವ ಗುರಿ ಇದ್ದು, ಇದರಿಂದ ಕನಿಷ್ಠ 30
ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲ ಆಗಲಿದೆ. 

ಫೆಬ್ರವರಿಗೆ “ಇ-ಟೋಲ್‌’
ದೂರದ ಊರಿಗೆ ತೆರಳುವ ಬಸ್‌ಗಳು ಇನ್ಮುಂದೆ ಟೋಲ್‌ ಪ್ಲಾಜಾ ಮುಂದೆ ಸರದಿಯಲ್ಲಿ ನಿಲ್ಲುವ ಗೋಳು ತಪ್ಪಲಿದೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿ ಫೆಬ್ರವರಿಯಲ್ಲಿ “ಇ-ಟೋಲ್‌’ ವ್ಯವಸ್ಥೆ ಜಾರಿಗೊಳಿಸಲಿದೆ. ಇದರಡಿ ಬಸ್‌ಗಳಿಗೆ ಎಲೆಕ್ಟ್ರಾನಿಕ್‌ ಟ್ಯಾಗ್‌ಗಳನ್ನು
ಅಳವಡಿಸಲಾಗುತ್ತದೆ. ಆಗ ಈ ಬಸ್‌ಗಳು ನೇರವಾಗಿ “ಪಾಸ್‌ ಟ್ಯಾಗ್‌ ಮಾರ್ಗ’ಗಳಲ್ಲಿ ನೇರವಾಗಿ ತೆರಳುತ್ತವೆ. ಇದರಿಂದ
ಸ್ವಯಂಚಾಲಿತವಾಗಿ ಟೋಲ್‌ ಆಯಾ ಕಂಪನಿಗೆ ಜಮೆ ಆಗುತ್ತದೆ.  ಹಾಗಾಗಿ, ಕ್ಯೂನಲ್ಲಿ ನಿಲ್ಲುವ ಪ್ರಮೇಯ ಬರುವುದಿಲ್ಲ.
ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆ ಮಾಡುವ ವ್ಯಾಪ್ತಿಯಲ್ಲೇ ಸುಮಾರು 60 ಟೋಲ್‌ ಪ್ಲಾಜಾಗಳು ಬರುತ್ತವೆ. ನಿತ್ಯ ಇಲ್ಲಿ ನಿಗಮವು 17 ಲಕ್ಷ ರೂ. ಟೋಲ್‌ ಪಾವತಿಸುತ್ತಿದೆ. ಪ್ರತಿ ಟೋಲ್‌ನಲ್ಲಿ ಪ್ರತಿ ಬಸ್‌ನ ಕನಿಷ್ಠ 5ರಿಂದ 10 ನಿಮಿಷ ವ್ಯಯವಾಗುತ್ತದೆ. ಬೆಂಗಳೂರು-ಮುಂಬೈ ಮಾರ್ಗವೊಂದರಲ್ಲೇ 21 ಟೋಲ್‌ ಪ್ಲಾಜಾಗಳಿವೆ. ಇದರಿಂದ ಬಸ್‌ ಕಾರ್ಯಾಚರಣೆಯಲ್ಲಿ ಒಂದು ತಾಸು ತಡವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next