ವಿಧಾನಪರಿಷತ್ತು: “ಪ್ರಯೋಗಾಲಯದಿಂದ ರೈತರ ನೆಲಗಳಿಗೆ’ ಎಂಬ ಪರಿಕಲ್ಪನೆಯಡಿ ರೈತರ ಹೊಲಗಳಿಗೆ ಹೋಗಿ ಮಣ್ಣಿನ ಫಲವತ್ತತೆ ಮತ್ತು ಕೀಟಬಾಧೆ ಬಗ್ಗೆ ಪರೀಕ್ಷೆ ನಡೆಸಲು ಜಾರಿಗೆ ತಂದಿರುವ “ಕೃಷಿ ಸಂಜೀವಿನಿ’ ಯೋಜನೆಯಡಿ ಈ ತಿಂಗಳ ಅಂತ್ಯಕ್ಕೆ 100 ವಾಹನಗಳು ಸೇವೆಗೆ ಲಭ್ಯವಾಗಲಿವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಸದ್ಯ 44 ಕೃಷಿ ಸಂಜೀವಿನಿ ವಾಹನಗಳು ಕಾರ್ಯಾಚರಿಸುತ್ತಿವೆ. ಹೆಚ್ಚುವರಿ 164 ವಾಹನಗಳು ಲಭ್ಯವಾಗಿವೆ. ಈ ಪೈಕಿ 100 ವಾಹನಗಳು ಈ ತಿಂಗಳ ಅಂತ್ಯಕ್ಕೆ ಮತ್ತು ಉಳಿದ 64 ವಾಹನಗಳು ಏಪ್ರಿಲ್ ವೇಳೆಗೆ ಸೇವೆಗೆ ಲಭ್ಯವಾಗಲಿವೆ ಎಂದು ತಿಳಿಸಿದರು.
ಅಲ್ಲದೇ ಕೀಟನಾಶಕ ಗುಣಮಟ್ಟ ಪರೀಕ್ಷಿಸಲು ರಾಜ್ಯದ ಬೆಂಗಳೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 6 ರಾಜ್ಯ ಪೀಡೆನಾಶಕ ಪರೀಕ್ಷಣಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಕೇಂದ್ರೀಯ ಕೀಟನಾಶಕ ಮಂಡಳಿಯ ಪ್ರಾದೇಶಿಕ ಕೇಂದ್ರವನ್ನು ಕರ್ನಾಟಕದಲ್ಲಿ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುಗುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ವಾರ್ಷಿಕವಾಗಿ 6,800 ಮಾದರಿಗಳ ಸಂಗ್ರಹಣೆ ಗುರಿಯನ್ನು ಕೀಟನಾಶಕ ಪರಿವೀಕ್ಷಕರಿಗೆ ನೀಡಲಾಗಿರುತ್ತದೆ. ವಿಶ್ಲೇಷಣೆಯಲ್ಲಿ ಕಳಪೆ ಗುಣಮಟ್ಟವೆಂದು ವರದಿಯಾದ ಮಾದರಿಗಳ ಕೀಟನಾಶಕ ತಯಾರಕರ ಮತ್ತು ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. 2020-21ನೇ ಸಾಲಿನಲ್ಲಿ 5,390 ಪೀಡೆನಾಶಕ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, 66 ಪೀಡೆನಾಶಕ ಕಳಪೆ ಎಂದು ವರದಿ ಯಾಗಿರುತ್ತದೆ. 2022ರ ಜನೆವರಿ ಅಂತ್ಯಕ್ಕೆ 4,401 ಪೀಡೆನಾಶಕ ಮಾದರಿಗಳ ಪೈಕಿ 59 ಕಳಪೆ ಎಂದು ವರದಿಯಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.