Advertisement

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

01:28 AM Apr 28, 2024 | Team Udayavani |

ಬೆಳ್ತಂಗಡಿ: ಬಹುತೇಕರು ವಿಕ್ರಮಾದಿತ್ಯ ಮತ್ತು ಬೇತಾಳನ ಕಥೆ ಕೇಳಿರುತ್ತೀರಿ, ಕಥೆ ಸ್ವರೂಪವಿಷ್ಟೆ, ಒಂದು ಕೆಲಸ ಪೂರ್ಣಗೊಳ್ಳುವವರೆಗೆ ಬೆನ್ನುಬಿಡದ ಬೇತಾಳನಂತೆ ಎಂದು ಮೂದಲಿಸುವುದುಂಟು. ಇದೀಗ ಲೋಕಸಭಾ ಚುನಾವಣೆಯಲ್ಲಿ ಅಡವಿ ಜನರ ಬೆನ್ನುಬಿದ್ದು ಜಾಗೃತಿ ಮೂಡಿಸುವ ಜತೆಗೆ ಶೇ.100 ಮತದಾನದ ಗುರಿ ಸಾಧನೆ ಮಾಡಿದ ಚುನಾವಣ ಆಯೋಗದಡಿ ಜಿಲ್ಲಾ ಹಾಗೂ ತಾಲೂಕು ಸ್ವೀಪ್‌ ಸಮಿತಿಯ ಯಶಸ್ಸಿನ ಕಥೆಯಿದು.

Advertisement

ಬೆಳ್ತಂಗಡಿ ವಿ.ಸಭಾ ಕ್ಷೇತ್ರದಲ್ಲಿ ಬರುವ ಊರೇ ಬಾಂಜಾರು ಮಲೆ. ವಿದ್ಯುತ್‌ ಸಂಪರ್ಕವಿದ್ದರೂ ವ್ಯತ್ಯಯ ನಿರಂತರ, ರಸ್ತೆಯಿಲ್ಲ, ನೆಟ್‌ವರ್ಕ್‌ ಅಂತು ಸಾಧ್ಯವೇ ಇಲ್ಲದ ಸ್ಥಿತಿ. 184 ಎಕ್ರೆ ಸ್ಥಳದಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಾ ಬಂದಿರುವ 28 ಕುಟುಂಬದ 48 ಮನೆಗಳಲ್ಲಿ 221 ಮಹಿಳೆಯರು, 250 ಪುರುಷರು ಸೇರಿ 471 ಮಂದಿ ಮತದಾರರಿದ್ದಾರೆ. ಯಾವುದೇ ಮೂಲಸೌಕರ್ಯವಿಲ್ಲದಿದ್ದರೂ ಇಲ್ಲಿ ಪ್ರತಿ ಚುನಾವಣೆಗೆ ಶೇ. 99ಕ್ಕಿಂತ ಅಧಿಕ ಮತದಾನವಾಗುತ್ತದೆ.

ಈ ಬಾರಿ ಶೇ.100 ಗುರಿ ಸಾಧನೆ ಮಾಡುವ ತವಕದಲ್ಲಿದ್ದ ದ.ಕ. ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸಿಇಒ ಡಾ| ಆನಂದ್‌ ಕೆ. ಅವರು ಜಿಲ್ಲೆಯಲ್ಲಿ ಬಾಂಜಾರು ಮಲೆ ಹಾಗೂ ಎಳನೀರು ಹಾಗೂ ಸುಳ್ಯದ ಕಲ್ಲಮೊಗ್ರು ಮತಗಟ್ಟೆಗಳನ್ನು ಅನನ್ಯ ಮತಗಟ್ಟೆಯಾಗಿ ಗುರುತಿಸುವ ಬಗ್ಗೆ ಸಮೀಕ್ಷೆ ನಡೆಸಲು ತಿಳಿಸಿದ್ದರು. ಅದರಂತೆ ಮಾರ್ಚ್‌ 12ಕ್ಕೆ ಸೀÌಪ್‌ ಸಮಿತಿ ವರದಿ ಸಿದ್ದಗೊಳಿಸಿತ್ತು. ವರದಿ ಪರಿಶೀಲಿಸಿ ಮಾ.15ರಂದು ದ.ಕ. ಸ್ವೀಪ್‌ ಸಮಿತಿ ಅಧ್ಯಕ್ಷರ ತಂಡ ಬಾಂಜಾರು ಮಲೆ ಮತಗಟ್ಟೆಗೆ ಮೊದಲ ಭೇಟಿ ನೀಡಿತು. ಆ ಬಳಿಕ ಬೆನ್ನು ಬಿಡದ ಬೇತಾಳನಂತೆ ಜಾಗೃತಿ ಕಾರ್ಯದಲ್ಲಿ ತೊಡಗಿತ್ತು.

ಒಬ್ಬಿಬ್ಬರಿಂದ ಶೇ.100 ತಪ್ಪಿತ್ತು
ಹೇಳಿಕೇಳಿ ಬಹುತೇಕರು ವಿದ್ಯಾ ಭ್ಯಾಸ ಉಳ್ಳವರು, ಸ್ಥಿತಿವಂತರು ಆದರೆ ಒಬ್ಬಿಬ್ಬರಿಂದ ಶೇ.100 ಮತದಾನ ಸಾಧ್ಯವಾಗಿರಲಿಲ್ಲ. ಅದರಲ್ಲೂ ಊರಿಂದ ಹೊರಗಿದ್ದ ಒಂದಿಬ್ಬರನ್ನು ಸ್ವೀಪ್‌ ಸಮಿತಿ ಮನವೊಲಿಸಿ, ಪೊಲೀಸ್‌ ಸಹಕಾರದಿಂದ ಈ ಬಾರಿ ಮತ ಚಲಾಯಿಸುವಂತೆ ಮಾಡಿತ್ತು. 28 ಕುಟುಂಬ ಒಂದೆಡೆ ಸೇರಿ ಊಟ, ಉಪಾಹಾರ ಸಿದ್ಧಪಡಿಸಿತ್ತು. ಮತಗಟ್ಟೆ ಸಿಂಗಾರಗೊಂಡಿತ್ತು.ಲತಾ ಅವರು ಮಂಡ್ಯದಿಂದ ಮತ ಚಲಾಯಿಸಲು ಬಂದಿದ್ದರು. ಇದೆಲ್ಲದರ ಪರಿಣಾಮ ಶೇ.100 ಮತದಾನ ಮಾಡಿಯೇ ಬಿಟ್ಟು ಮತದಾನ ಹಬ್ಬವನ್ನು ಸಾಕ್ಷಾತ್‌ ಹಬ್ಬದಂತೆ ಆಚರಿಸಿದರು.

ಸ್ವೀಪ್‌ ಸಮಿತಿಯ ಶ್ರಮ
ಮೊದಲ ಭೇಟಿ:
ಜಿಲ್ಲಾ ಸ್ವೀಪ್‌ ಸಮಿತಿ ಮಾ.15ಕ್ಕೆ ಮೊದಲ ಭೇಟಿ ಮಾಡಿ ಮತದಾರರೊಂದಿಗೆ ಮಾತುಕತೆ ನಡೆಸಿತು. ಎ. 11ರಂದು 2ನೇ ಬಾರಿ ಭೇಟಿ ಮಾಡಿ ಮತದಾರ ರೊಂದಿಗೆ ಸಂವಾದ ನಡೆಸಿ ಅವರ ಬೇಡಿಕೆಗಳನ್ನು ಆಲಿಸಲಾಯಿತು. ಮೂರನೇ ಭೇಟಿ ವೇಳೆ ವಿದ್ಯುತ್‌ ಸಮಸ್ಯೆಯ ಬಗ್ಗೆ ಪರಿಶೀಲನೆ ಮತ್ತು ಸ್ಪಂದನೆ.

Advertisement

ಡಾ| ಆನಂದ್‌ ಕೆ. ಮತ್ತು ತಾ.ಪಂ. ಇಒ ವೈಜಣ್ಣ ಸೇರಿದಂತೆ, ದ.ಕ. ಜಿಲ್ಲಾ ಸ್ವೀಪ್‌ ಸಮಿತಿ ಜಿಲ್ಲಾ ಮಾಸ್ಟರ್‌ ಟ್ರೇನರ್‌ ಯೋಗೇಶ ಎಚ್‌.ಆರ್‌., ಬೆಳ್ತಂಗಡಿ ತಾ.ಪಂ. ಇಒ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷ ವೈಜಣ್ಣ ಸೇರಿ 10 ಮಂದಿ ಅಧಿಕಾರಿಗಳ ತಂಡದಿಂದ ಎ.17ಕ್ಕೆ ನಾಲ್ಕನೇ ಬಾರಿ ಭೇಟಿ, ಮತದಾರರೊಂದಿಗೆ ಅಂತಿಮ ಸುತ್ತಿನ ಸಂವಾದ. ಎ. 26ರಂದು ಐದನೇ ಭೇಟಿ ವೇಳೆ ಮತದಾನಕ್ಕೆ ಬರಲು ಒಪ್ಪದವರನ್ನು ಡಿಎಲ್‌ಎಂಟಿ ಯೋಗೇಶ್‌, ಪಿಡಿಒ ಸುಮಾ, ಬಿಎಲ್‌ಒ ಮಧುಮಾಲಾ. ತಾ.ಪಂ. ಮ್ಯಾನೇಜರ್‌ ಪ್ರಶಾಂತ್‌ ಸಿಬಂದಿ ತಂಡ ಒಪ್ಪಿಸಿ ಕರೆತರುವ ಕಾರ್ಯವಾಗಿದೆ.

ಅನನ್ಯ ಮತಗಟ್ಟೆಯೆಂದು ಗುರುತಿಸಲಾದ ಬಾಂಜಾರು ಮಲೆ ಶೇ. 100 ಗುರಿ ಸಾಧನೆ ಮಾಡಿದರೆ ಎಳನೀರು ಶೇ. 90.91 ಮತದಾನವಾಗಿದೆ. ತೀರಾ ಗ್ರಾಮೀಣ ಪ್ರದೇಶವಾದ್ದರಿಂದ ಬಿಎಲ್‌ಒ ಸೇರಿ ಸಿಬಂದಿ ಮನೆಮನೆ ತೆರಳಿ ಜಾಗೃತಿ ಮೂಡಿಸಿದ ಪ್ರಯತ್ನಕ್ಕೆ ಫಲ ದೊರೆತಿದೆ. ಇದು ಜಿಲ್ಲೆಗೆ ಹೆಮ್ಮೆ ತಂದಿದೆ.
-ಮುಲ್ಲೈ ಮುಗಿಲನ್‌, ದ.ಕ. ಜಿಲ್ಲಾಧಿಕಾರಿ

ಸ್ವೀಪ್‌ ಸಮಿತಿಯ ನಮ್ಮ ತಂಡ ಬಾಂಜಾರು ಮಲೆಯ ಮನೆ ಮನೆಯನ್ನು ಭೇಟಿ ಮಾಡಿ ಅವರಿಗೆ ಶೇ.100ರಷ್ಟು ಮತದಾನ ಮಾಡುವುದಕ್ಕಾಗಿ ಪ್ರೇರಣೆ ನೀಡಿತ್ತು. ಅಲ್ಲಿಯ ಮತದಾರರು ನಮ್ಮ ಸಮಿತಿಯ ಪ್ರೇರಣೆಯಿಂದ ಯಶಸ್ವಿಯಾಗಿ 111 ಮತಗಳನ್ನು ಚಲಾಯಿಸುವ ಮೂಲಕ ಈ ಗುರಿ ಸಾಧನೆ ಸಾಧ್ಯವಾಗಿದೆ. ನಮ್ಮ ತಂಡದ ಎಲ್ಲ ಸದಸ್ಯರಿಗೂ, ಬಾಂಜಾರಿನ ಎಲ್ಲ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ.
-ಡಾ| ಆನಂದ್‌ ಕೆ., ಸಿ ಇಒ ಮತ್ತು ಅಧ್ಯಕ್ಷರು ಜಿಲ್ಲಾ ಸ್ವೀಪ್‌ ಸಮಿತಿ ದ.ಕ.

Advertisement

Udayavani is now on Telegram. Click here to join our channel and stay updated with the latest news.

Next