Advertisement

BJPವಿಪಕ್ಷ ನಾಯಕ ಸ್ಥಾನಕ್ಕೆ 100-200 ಕೋಟಿ ರೂ.ಟೆಂಡರ್ : ತಂಗಡಗಿ ಲೇವಡಿ

04:16 PM Sep 17, 2023 | Team Udayavani |

ಕೊಪ್ಪಳ: ಬಿಜೆಪಿಯಲ್ಲಿ ಸಿಎಂ ಸೀಟ್ ಸೇರಿ ಎಲ್ಲ ಸೀಟ್‌ಗಳು ಮಾರಾಟಕ್ಕಿವೆ. ಸದ್ಯ ವಿಪಕ್ಷ ಸ್ಥಾನಕ್ಕೆ ಇನ್ನು ಟೆಂಡರ್ ಕರೆದಿಲ್ಲ. ಯಾರೂ ಬಿಡ್ ಮಾಡಿದಂತೆ ಕಾಣುತ್ತಿಲ್ಲ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಅವರು ವ್ಯಂಗ್ಯವಾಗಿ ಲೇವಡಿ ಮಾಡಿದ್ದಾರೆ.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅವರ ಪಕ್ಷದವರೇ ಹೇಳಿದಂತೆ ಸಿಎಂ ಸ್ಥಾನ 2500 ಕೋಟಿ ರೂ., ಮಂತ್ರಿ ಸ್ಥಾನಕ್ಕೆ 80 ಕೋಟಿ, ಎಂಪಿ ಟಿಕೆಟ್‌ಗೆ 10 ಕೋಟಿ, ಎಂಎಲ್‌ಎ ಟಿಕೆಟ್‌ಗೆ 5 ಕೋಟಿ ರೂ.ಗೆ ಮಾರಾಟಕ್ಕಿವೆ ಎನ್ನುವ ಮಾತಿವೆ. ಸದಸ್ಯ ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನ ಖಾಲಿಯಿದೆ. ಅದಕ್ಕೆ ಇನ್ನೂ ಟೆಂಡರ್ ಕರೆದಿಲ್ಲ. ಅದಕ್ಕೆ ದುಡ್ಡು ನಿಗದಿಯಾದ ಬಳಿಕ ಗೊತ್ತಾಗುತ್ತದೆ ಎಂದರು.

ಚೈತ್ರಾ ಕುಂದಾಪುರ ಪ್ರಕರಣದ ಬಳಿಕ ಬಿಜೆಪಿಯಲ್ಲಿ ಸೀಟ್ ಸೇಲ್ ಎಲ್ಲವೂ ನಿಜವಾಗುತ್ತಿದೆ. ಇನ್ನು ಬಿಜೆಪಿ ವಿಪಕ್ಷ ನಾಯಕನ ಹೆಸರು ಪ್ರಕಟಿಸಿಲ್ಲ. ಅದನ್ನು ಪತ್ರಿಕೆ, ಟಿವಿಯಲ್ಲಿ ಟೆಂಡರ್ ಕರೆಯುತ್ತಾರೋ ? ಗ್ಲೋಬಲ್ ಟೆಂಡರ್ ಕರೆಯುತ್ತಾರೋ ? ಅದಕ್ಕೆ 100-200 ಕೋಟಿ ರೂ. ಆಗುತ್ತೋ ಗೊತ್ತಿಲ್ಲ. ನಮ್ಮಲ್ಲಿ ವಾಸ್ತವ ಸತ್ಯ ತಿಳಿದು ಟಿಕೆಟ್ ಕೊಡುತ್ತಾರೆ ಎಂದರು.

ಸಚಿವ ರಾಜಣ್ಣ ಅವರ 3 ಡಿಸಿಎಂ ವಿಚಾರ, ನಾನು ಆ ಬಗ್ಗೆ ನಿರ್ಧಾರ ಮಾಡಲ್ಲ. ಪಕ್ಷ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ. ಉತ್ತರ ಕನ್ನಡ ಭಾಗದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಯಾವುದೇ ಪರಿಣಾಮ ಬೀರುವುದಿಲ್ಲ. ಜೆಡಿಎಸ್ ಜ್ಯಾತ್ಯತೀತ ಎಂದು ಹೆಸರಿಟ್ಟು ಕೋಮುವಾದಿಗಳ ಜೊತೆ ಕೈ ಜೋಡಿಸುತ್ತಾರೆಂದರೆ ರಾಜ್ಯದ ಜನತೆ ಅವರಿಗೆ ತಕ್ಕ ಉತ್ತರ ಕೊಡಲಿದ್ದಾರೆ. ಅವರ ಒಳಗೆ ಮೈತ್ರಿಯಾದರೂ ಖುಷಿ. ಆಗದಿದ್ದರೂ ಖುಷಿಪಡುವೆವು ಎಂದರು.

ರಾಜ್ಯದಲ್ಲಿ 167 ತಾಲೂಕುಗಳು ಬರವೆಂದು ಘೋಷಣೆ ಮಾಡಿದೆ. ಸರ್ವೆ ನಡೆಸಿ ಪರಿಹಾರದ ಕುರಿತು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಸಿಎಂ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದು ನಿಯಮ ಸರಳೀಕರಣ ಮಾಡುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಕೇಂದ್ರದ ನಿಯಮಗಳು ಕಠಿಣ ಇವೆ. ರೈತರಿಗೆ, ಕಾರ್ಮಿಕರಿಗೆ ಅನುಕೂಲವಾಗಲು ಮನವಿ ಮಾಡಿದ್ದಾರೆ. ಸಿಎಂ 2 ನೇ ಪತ್ರಕ್ಕೂ ಕೇಂದ್ರ ಉತ್ತರ ಕೊಟ್ಟಿಲ್ಲ. ಕೇಂದ್ರವು ಬರದ ವಿಚಾರದಲ್ಲಿ ರಾಜಕಾರಣ ಮಾಡದೇ ನಿಯಮ ಸರಳೀಕರಣ ಮಾಡಲಿ ಎಂದರು.

Advertisement

ಕೇಂದ್ರದ ಎನ್‌ಡಿಆರ್‌ಎಫ್ ನಿಯಮ ಸರಳೀಕರಣ ಮಾಡಲಿ ಬಹು ವರ್ಷಗಳಿಂದ ಮಾಡಿದ್ದು, ರಾಜ್ಯದ 25 ಬಿಜೆಪಿ ಸಂಸದರು ಮೋದಿ ಅವರ ಕಣ್ತೆರೆಸುವ ಕೆಲಸ ಮಾಡಲಿ. ಇವರಾದರೂ ಸ್ವಲ್ಪ ಕಣ್ತೆರೆದು ನೋಡಲಿ. ಕರ್ನಾಟಕದಿಂದಲೇ ಬದಲಾವಣೆಯಾಗಲಿ. ಎಂಪಿಗಳು ಜಾರಿಕೊಳ್ಳುವುದಕ್ಕಿಂತ ಒತ್ತಾಯ ಮಾಡಲಿ. ಮುಂಗಾರಿನಲ್ಲಿ ತೊಗರೆ, ಜೋಳ, ಸೂರ್ಯಕಾಂತಿ ಒಣಗಿದೆ. ಸಜ್ಜೆ ಸ್ವಲ್ಪ ಉಳಿದಿದೆ. ರಾಜ್ಯದಲ್ಲಿ ಬರ ಪರಿಹಾರಕ್ಕೆ ಪ್ರತ್ಯೇಕ ಪ್ಯಾಕೇಜ್ ಕುರಿತು ಸಿಎಂ ಅವರು ನಿರ್ಧಾರ ಮಾಡಲಿದ್ದಾರೆ. ಈ ಕುರಿತು ಸಚಿವ ಸಂಪುಟ ನಡೆಯಲಿದೆ ಎಂದರು.

ರಾಜ್ಯದಲ್ಲಿ ಬರ ಇರುವುದರಿಂದ ಡಿಸೆಂಬರ್ ವರೆಗೂ ಯಾವುದೇ ಉತ್ಸವ ಮಾಡಲ್ಲವೆಂದು ಸಿಎಂ ಪ್ರಕಟಿಸಿದ್ದಾರೆ. ಅಷ್ಟರೊಳಗೆ ಮಳೆ ಬೆಳೆ ಚೆನ್ನಾಗಿ ಬಂದರೆ ಮುಂದಿನ ದಿನದಲ್ಲಿ ಎಲ್ಲ ಉತ್ಸವಗಳನ್ನ ಮಾಡುವೆವು. ದಸರಾ ಉತ್ಸವ ಕ್ಯಾಲೆಂಡರ್ ಆಫ್ ಇವೆಂಟ್ ಪ್ರತಿ ವರ್ಷ ಮಾಡಲಾಗುತ್ತದೆ. ಅದು ಸಹಜ ಪ್ರಕ್ರಿಯೆ ಇನ್ನುಳಿದ ಉತ್ಸವಗಳು ಬೇರೆ ಬೇರೆ ಸಮಯದಲ್ಲಿ ಬರುತ್ತವೆ ಎಂದರು.

500 ಕ್ಕೂ ಹೆಚ್ಚು ಬಸ್‌ಗಳ ಖರೀದಿ
ಶಕ್ತಿ ಯೋಜನೆ ಜಾರಿಯಾದ ಬಳಿಕ ಹೆಚ್ಚು ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಈಚೆಗೆ ನಡೆದ ಸಚಿವ ಸಂಪುಟದಲ್ಲಿ 500ಕ್ಕೂ ಹೆಚ್ಚು ಬಸ್‌ಗಳ ಖರೀದಿ ವಿಷಯ ಚರ್ಚೆಯಾಗಿದೆ ಎಂದರು.

ಹೆಚ್ಚು ಮಹಿಳೆಯರು ಬಸ್‌ನಲ್ಲಿ ಸಂಚರಿಸುವುದರಿಂದ ಬಡ ವಿದ್ಯಾರ್ಥಿಗಳಿಗೆ ಓಡಾಟಕ್ಕೆ ತೊಂದರೆ ಆಗುತ್ತಿರುವುದು ನಿಜ. ಇದೆಲ್ಲವನ್ನು ಅರಿತು ಬಸ್ ಖರೀದಿ ಮಾಡಲಾಗುತ್ತಿದೆ. ಹಾಸ್ಟೆಲ್ ಸೀಟ್‌ಗಳ ಹೆಚ್ಚಳ ವಿಚಾರ, ಸೀಟ್ ಹೆಚ್ಚಿಸಿದರೆ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಬೇಕಾಗುತ್ತದೆ. ಎಲ್ಲವೂ ಒಂದೇ ದಿನ ಮಾಡಲು ಆಗುವುದಿಲ್ಲ. ಈ ಕುರಿತಂತೆ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಕೆಕೆಆರ್‌ಡಿಬಿಯಲ್ಲಿ ಮಾಡುವ ಯೋಜನೆ ಕುರಿತು ಚರ್ಚೆ ನಡೆದಿದೆ ಎಂದರು.

ಚಕ್ರವರ್ತಿ ಸೂಲಿಬೆಲೆ, ಚೈತ್ರಾ ಕುಂದಾಪುರ ಅಣ್ಣ-ತಂಗಿ ಇದ್ದಂತೆ. ಅವರ ಭಾಷಣದಿಂದ ಯಾರೂ ಪರಿವರ್ತನೆಯಾಗಲ್ಲ. ರೊಕ್ಕ ಎತ್ತುವ ಭಾಷಣ ಅವರದ್ದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next