Advertisement

10 ವರ್ಷದ ಹಿಂದಿನ ಜುವೆಲರಿ ಸುಲಿಗೆ ಪ್ರಕರಣ: ಆರೋಪಿಗಳಿಗೆ ಏಳು ವರ್ಷ ಜೈಲು

11:58 PM Feb 17, 2023 | Team Udayavani |

ಉಡುಪಿ: ಹತ್ತು ವರ್ಷಗಳ ಹಿಂದೆ ಕಾರ್ಕಳದಲ್ಲಿ ನಡೆದಿದ್ದ ಜುವೆಲರಿ ಸುಲಿಗೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರ್ಕಳ ಸಂಚಾರಿ ನ್ಯಾಯಾಲಯವು ಏಳು ವರ್ಷಗಳ ಕಠಿನ ಸಜೆ ನೀಡಿ ಫೆ. 14ರಂದು ಆದೇಶಿಸಿದೆ.

Advertisement

ಶಿಕ್ಷೆಗೆ ಗುರಿಯಾದ ಆರೋಪಿಗಳನ್ನು ಕಾರ್ಕಳ ವರಂಗ ಬಂಡಿಮಠ ನಿವಾಸಿ ಮಧುಕರ ಆಚಾರ್ಯ (36) ಹಾಗೂ ಕುಂದಾಪುರ ಕುಂಭಾಸಿಯ ಪ್ರಶಾಂತ್‌ ಆಚಾರ್ಯ (36) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿದ್ದು, ಉಳಿದ ನಾಲ್ವರ ಪೈಕಿ ಶಾಹಿದ್‌ ಅಲಿ ಮತ್ತು ಚಂದ್ರ ಆಚಾರ್ಯರನ್ನು ಸಾಕ್ಷಾಧಾರದ ಕೊರತೆಯಿಂದ ದೋಷಮುಕ್ತಗೊಳಿಸಲಾಗಿದೆ.

ಉಳಿದ ಇಬ್ಬರು ಮೋಹನ್‌ ಮೊಗವೀರ ಮತ್ತು ಸಂದೀಪ್‌ ಮೊಗವೀರ ವಿಚಾರಣೆ ಅವಧಿಯಲ್ಲಿ ಸಾವನ್ನಪ್ಪಿದ್ದರು.

2013ರ ಸೆ.17ರಂದು ರಾತ್ರಿ ವೇಳೆ ರಾಮಚಂದ್ರ ಮಾನೆ ಅವರ ಜುವೆಲರಿಗೆ ನುಗ್ಗಿದ ಆರೋಪಿಗಳ ಪೈಕಿ ಇಬ್ಬರು ಮಾಲಕರ ಕಣ್ಣಿಗೆ ಖಾರದ ಪುಡಿ ಎರಚಿ 42.67ಲ.ರೂ.ವೌಲ್ಯದ 1,500 ಗ್ರಾಂ ಚಿನ್ನಾಭರಣಗಳನ್ನು ದೋಚಿ ಕಾರಿನಲ್ಲಿ ಪರಾರಿಯಾಗಿದ್ದರು. ಇವರಲ್ಲಿ ಮಧುಕರ ಆಚಾರ್ಯನನ್ನು ಹಿರಿಯಡ್ಕದಲ್ಲಿ ಅದೇ ದಿನ ಬಂಧಿಸಲಾಗಿತ್ತು.

ಪ್ರಕರಣದಲ್ಲಿ ಉಳಿದ ಐದು ಮಂದಿ ಕಾರಿನಿಂದ ಇಳಿದು ಪರಾರಿ ಯಾಗಿದ್ದರು. ಮುಂದೆ ಅವರನ್ನು ಬಂಧಿಸಿ ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿ ಕೊಳ್ಳಲಾಗಿತ್ತು.

Advertisement

ಆಗಿನ ಕಾರ್ಕಳದ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್‌ ಹೆಗ್ಡೆ ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಏಳು ವರ್ಷ ಕಠಿನ ಜೈಲು ಶಿಕ್ಷೆ ಮತ್ತು ತಲಾ 5000ರೂ. ದಂಡ ವಿಧಿಸಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ್‌ ಶೆಟ್ಟಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next