Advertisement

Hit and Run- 10 ವರ್ಷ ಜೈಲು: ಕೇಂದ್ರ ಸರ್ಕಾರದ ವಿಧೇಯಕದಲ್ಲಿ ಉಲ್ಲೇಖ

10:00 PM Aug 12, 2023 | Team Udayavani |

ನವದೆಹಲಿ: ದೇಶದಲ್ಲಿ ನೂತನ ಅಪರಾಧ ಕಾನೂನುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಲೋಕಸಭೆಯಲ್ಲಿ ಮಂಡಿಸಿರುವ ಕೇಂದ್ರ ಸರ್ಕಾರವು ವಿಧೇಯಕಗಳ ಹೆಚ್ಚಿನ ವಿವರಗಳು ಹೀಗಿವೆ.

Advertisement

ನಂಬಿಸಿ ಲೈಂಗಿಕವಾಗಿ ವಂಚಿಸಿದರೆ 10 ವರ್ಷ ಜೈಲು:
ಗುರುತಿನ ಬಗ್ಗೆ ಸುಳ್ಳು ಹೇಳಿಕೊಂಡು, ಮದುವೆ ಆಗುತ್ತೇನೆ ಎಂದು ನಂಬಿಸಿ ಮತ್ತೂಬ್ಬ ವ್ಯಕ್ತಿಯನ್ನು ವಂಚಿಸುವುದು ಇನ್ನೂ ಶಿಕ್ಷಾರ್ಹ ಅಪರಾಧವಾಗಿದೆ. ಇತ್ತೀಚಿನ ದಿನಗಳಲ್ಲಿ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚುತ್ತಿವೆ. ಹೆಸರು ಮತ್ತು ಧರ್ಮದ ಬಗ್ಗೆ ಸುಳ್ಳು ಹೇಳಿಕೊಂಡು ವಂಚಿಸಿ, ಮದುವೆಯಾಗುವುದು, ಲೈಂಗಿಕವಾಗಿ ತೊಡಗುವುದು ಹಾಗೂ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಈ ರೀತಿಯ ಪ್ರಕರಣಗಳಲ್ಲಿ ಆರೋಪಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಸಿಗಲಿದೆ.

ದ್ವೇಷ ಭಾಷಣಕ್ಕೆ 3 ವರ್ಷ ಜೈಲು
ಪ್ರಸ್ತಾವಿತ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ದ್ವೇಷ ಭಾಷಣದ ಪ್ರಕರಣದಲ್ಲಿ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಮಾತು, ಭಾಷಣ ಅಥವಾ ಲಿಖೀತ ಪದಗಳು ಅಥವಾ ಸಂಕೇತಗಳನ್ನು ಬಳಸಿದರೆ, ದ್ವೇಷ ಭಾಷಣದ ಪ್ರಕರಣದಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ದ್ವೇಷ ಭಾಷಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಭಾರತೀಯ ದಂಡ ಸಂಹಿತೆ(ಐಪಿಸಿ)ಯಲ್ಲಿ ನಿರ್ದಿಷ್ಟ ಶಿಕ್ಷೆ ನಮೂದಿಸಿರಲಿಲ್ಲ.

ಹಿಟ್‌ ಆ್ಯಂಡ್‌ ರನ್‌ಗೆ 10 ವರ್ಷ ಜೈಲು
ಅಪಘಾತದ ಸಂದರ್ಭದಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಗರಿಷ್ಠ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಪ್ರಸ್ತುತ ಇರುವ ಐಪಿಸಿಯಡಿ, ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ ಗರಿಷ್ಠ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತಿದೆ.

420 ಇನ್ನು 316 ಸೆಕ್ಷನ್‌
ಐಪಿಸಿ ಅಡಿಯಲ್ಲಿ ವಂಚನೆ ಪ್ರಕರಣವು 420 ಸೆಕ್ಷನ್‌ ಅಡಿಯಲ್ಲಿ ಬರುತ್ತದೆ. ಇದು ಜನಮಾನಸದಲ್ಲಿ 420 ಕೇಸ್‌ ಎಂದೇ ಅಚ್ಚಾಗಿದೆ. ಆದರೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ವಂಚನೆ ಅಪರಾಧವನ್ನು 316 ಸೆಕ್ಷನ್‌ ಎಂದು ಪಟ್ಟಿ ಮಾಡಲಾಗಿದೆ.

Advertisement

ಅನೈಸರ್ಗಿಕ ಲೈಂಗಿಕತೆಗೆ ಇಲ್ಲ ಶಿಕ್ಷೆ?
ಕೇಂದ್ರದ ಹೊಸ ಪ್ರಸ್ತಾವನೆಯಲ್ಲಿ ಬಾಲಕರಿಗೆ, ಪುರುಷರ ಮೇಲೆ ನಡೆಯುವ ಅನೈಸರ್ಗಿಕ ಹಲ್ಲೆಗಳ ವಿರುದ್ಧ ಕ್ರಮಕ್ಕೆ ಯಾವುದೇ ಅಂಶ ಸೂಚಿಸಲಾಗಿಲ್ಲ. ಸದ್ಯದ ಕಾಯ್ದೆ ವ್ಯಾಪ್ತಿಯಲ್ಲಿ ಸೆಕ್ಷನ್‌ 377ರ ಅನ್ವಯ ಜೀವಿತಾವಧಿ ವರೆಗೆ ಜೈಲು, ಅಥವಾ ನಿಗದಿತ ಅವಧಿಯ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಬಗ್ಗೆ ಕಾನೂನು ಕ್ಷೇತ್ರದ ತಜ್ಞರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next