Advertisement

ಸಮನಾಂತರ ಜಲಾಶಯಕ್ಕೆ 10 ಸಾವಿರ ಕೋಟಿ

12:46 PM Aug 13, 2019 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ನದಿಪಾತ್ರಗಳಿಗೆ ಸೇರುತ್ತಿದೆ. ಜಲಾಶಯದ ಹೂಳು ತೆಗೆಯುವ ಬದಲಾಗಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಿದರೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಬಹುದು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ವಿರುಪಾಪೂರಗಡ್ಡೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯವು 133 ಟಿಎಂಸಿ ಅಡಿ ನೀರು ಸಂಗ್ರಹ ಸಮಾರ್ಥ್ಯ ಹೊಂದಿದೆ. ಆದರೆ 33 ಟಿಎಂಸಿ ಹೂಳು ತುಂಬಿದ್ದರಿಂದ ಜಲಾಶಯದ ಸಂಗ್ರಹಣಾ ಸಾಮರ್ಥ್ಯ 100 ಟಿಎಂಸಿಗೆ ಬಂದು ತಲುಪಿದೆ. ಈ ಹಿಂದಿನ ಸರ್ಕಾರವು ಡ್ಯಾಂ ಹೂಳು ತೆಗೆಯುವ ಬದಲು ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣದ ಕುರಿತು ಪ್ರಸ್ತಾಪ ಮಾಡಿತ್ತು. ಆಗ 5 ಸಾವಿರ ಕೋಟಿ ಅನುದಾನ ನೀಡುವ ಮಾತನ್ನಾಡಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಕೇಂದ್ರದಲ್ಲೂ ಮೋದಿ ಸರ್ಕಾರವಿದೆ. ಹಾಗಾಗಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣದ ಕುರಿತು 10 ಸಾವಿರ ಕೋಟಿ ಅನುದಾನ ಮೀಸಲಿಡುವ ಕುರಿತು ಚರ್ಚೆ ನಡೆದಿದೆ ಎಂದರು.

ಈಗ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆಯಬಹುದು. ಅಲ್ಲದೇ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕೃಷ್ಣಾ ಯೋಜನೆಗೆ 1 ಲಕ್ಷ ಕೋಟಿ ಅನುದಾನ ತರುವ ಕುರಿತು ಭರವಸೆ ನೀಡಿದ್ದರು. ಮೋದಿ ಅವರು ಸಹಿತ ತುಂಗಭದ್ರಾ ಜಲಾಶಯದ ನೀರಾವರಿ ಕುರಿತು ಸಾವಿರ ಕೋಟಿಯ ಪ್ರಸ್ತಾಪ ಮಾಡಿದ್ದರು. ಅದೆಲ್ಲವನ್ನು ನಮ್ಮ ನಾಯಕರ ಗಮನಕ್ಕೆ ತಂದಿದ್ದೇವೆ ಎಂದರು.

ಕರಡಿ, ಪರಣ್ಣ ನಡುಗಡ್ಡೆಯಲ್ಲಿ ಸಿಲುಕಿದ್ರು!:

ವಿರುಪಾಪೂರ ಗಡ್ಡೆಯಲ್ಲಿ ಜನರ ರಕ್ಷಣಾ ಕಾರ್ಯವನ್ನು ವೀಕ್ಷಣೆ ಮಾಡಿ ಸಲಹೆ ಸೂಚನೆ ನೀಡಲು ಆಗಮಿಸಿದ್ದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ರಕ್ಷಣಾ ತಂಡದೊಂದಿಗೆ ನಡುಗಡ್ಡೆಗೆ ಬೋಟ್‌ನಲ್ಲಿ ತೆರಳಿ ಅಲ್ಲೇ ಸಿಲುಕಿದ ಪ್ರಸಂಗ ತೆರಳಿತು. 2ನೇ ತಂಡವು ನೀರುಪಾಲಾಗಿದ್ದರಿಂದ ಬೋಟ್ ಸಂಚಾರವನ್ನೇ ಸ್ಥಗಿತ ಮಾಡಲಾಯಿತು. ಹೀಗಾಗಿ ವಿರುಪಾಪೂರಗಡ್ಡಿಯಲ್ಲಿ ತಂಗಿದ್ದ 300ಕ್ಕೂ ಹೆಚ್ಚು ಜನರಿಗೆ ಧೈರ್ಯ ಹೇಳುತ್ತಲೇ, ರಕ್ಷಣೆ ಮಾಡುವ ಕುರಿತು ಭರವಸೆ ಮಾತನ್ನಾಡಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿದರು. ಜೊತೆಗೆ ಬೋಟ್ ಸಂಚಾರ ಸ್ಥಗಿತವಾಗಿದ್ದರಿಂದ ಎರಡು ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್‌ಗಳು ಜನರ ರಕ್ಷಣೆಗೆ ಇಳಿದಿದ್ದರಿಂದ ಗಡ್ಡೆಯ ಗುಡ್ಡದಲ್ಲೇ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಿ ಜನರ ರಕ್ಷಣೆಗೆ ನೆರವಾದರು.
Advertisement

Udayavani is now on Telegram. Click here to join our channel and stay updated with the latest news.

Next