ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತರಿಗಾರಿಗಾಗಿ ಆಹಾರ ಧಾನ್ಯ ಅವಶ್ಯಕತೆ ಇದ್ದರೆ ನಾನು ಸಹಾಯ ಮಾಡುತ್ತೇನೆ. ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ಹತ್ತು ಸಾವಿರ ಬೆಡ್ ಶಿಟ್ ಮಧುರೈ ದಿಂದ ತರಿಸಿ ಸಹಾಯ ಮಾಡುತ್ತೇನೆ ಎಂದರು.
ಈಗ ನಾನು ರಾಜಕೀಯ ಬೆರೆಸುವುದಿಲ್ಲ. ಇವತ್ತು ಇರುವ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಜ್ವರ ಬಂದು ಚಿಕಿತ್ಸೆ ಪಡೆಯುತ್ತಿದ್ದೆ. ಮಾಧ್ಯಮಗಳಲ್ಲಿ ನೋಡಿ ರಾತ್ರಿ ತೀರ್ಮಾನ ಮಾಡಿ ಬಂದಿದ್ದೇನೆ. ಬೆಳಗಾವಿ ಚಿಕ್ಕೋಡಿ, ಗದಗ ಧಾರವಾಡಕ್ಕೆ ಇಂದು ಹೋಗುತ್ತೇನೆ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡದೆ ಇಂತಹ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ಸಿಎಂ ಯಡಿಯೂರಪ್ಪ ಅವರ ಮೇಲೆ ಹೊಣೆ ಇದೆ. ಅಧಿಕಾರಿಗಳ ಮೂಲಕ ಕೆಲಸ ಮಾಡಿಸಿಕೊಳ್ಳಬೇಕು ಎಂದರು.
ಎಂದೂ ಕಂಡು ಕೇಳರಿಯದ ಹಾನಿ ಈ ಬಾರಿ ಆಗುತ್ತಿದೆ. ಬೆಳೆ ಹಾನಿ ಸೇರಿದಂತೆ ಜೀವ ಹಾನಿ ದೊಡ್ಡ ಮಟ್ಟದ ಆಗುತ್ತಿದೆ. ಇದಕ್ಕೆ ಸರ್ಕಾರ ಹೆಚ್ಚು ಪರಿಹಾರ ಕೊಡುವಲ್ಲಿ ಹೆಚ್ಚಿನ ಕಾಳಜಿ ವಹಿಸಿ ತ್ವರಿತಗತಿಯಲ್ಲಿ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.