ಮಾಸ್ತಿ: ನಾಯಿ ದಾಳಿಯಿಂದ 10 ಕುರಿಗಳು ಮೃತಪಟ್ಟಿದ್ದು, 2 ಕುರಿಗಳು ಗಾಯಗೊಂಡಿರುವ ಘಟನೆ ಮಾಸ್ತಿ ಹೋಬಳಿಯ ಶ್ಯಾಮಶೆಟ್ಟಹಳ್ಳಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಆದರೆ, ಕುರಿಗಳನ್ನು ಚಿರತೆ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಮಾಸ್ತಿ ಹೋಬಳಿಯ ಸುಗ್ಗೊಂಡಹಳ್ಳಿ ಗ್ರಾಮದ ರೈತ ಚಂದ್ರಪ್ಪ ಎಂಬುವರು ಶ್ಯಾಮಶೆಟ್ಟಹಳ್ಳಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಮನೆಯ ಪಕ್ಕದಲ್ಲಿಯೇ ಕೊಟ್ಟಿಗೆಯನ್ನು ನಿರ್ಮಿಸಿಕೊಂಡು ಸುಮಾರು 100ಕ್ಕೂ ಹೆಚ್ಚು ಕುರಿಗಳನ್ನು ಪೋಷಣೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.
ರೈತ ಚಂದ್ರ ಮಂಗಳವಾರ ಕುರಿಗಳನ್ನು ಮೇಯಿಸಿಕೊಂಡು ಸಂಜೆ ಬಂದು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದಾರೆ. ಮಂಗಳವಾರ ರಾತ್ರಿ ಚಿರತೆ ಅಥವಾ ನಾಯಿ ಕೊಟ್ಟಿಗೆಗೆ ನುಗ್ಗಿ 10 ಕುರಿಗಳನ್ನು ಕೊಂದಿದೆ. 2 ತೀವ್ರ ಗಾಯಗೊಳಿಸಿದೆ. ರೈತ ಚಂದ್ರಪ್ಪಗೆ ಸುಮಾರು ಒಂದೂವರೆ ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿದ್ದು ಚಿರತೆ ದಾಳಿ ಆತಂಕ ವ್ಯಕ್ತವಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಕೆ.ರಮೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿ, ಕಂದಾಯ ಅಧಿಕಾರಿ ರವಿಕುಮಾರ್, ಮಾಸ್ತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಸಂತ್ ಸಹ ಬೇಟಿ ನೀಡಿ ಪರಿಶೀಲಿಸಿದರು.
ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ಬೇಟಿ ನೀಡಿ, ವೀಕ್ಷಿಸಿ ನಂತರ ಮಾತನಾಡಿ, ಗಡಿ ಭಾಗದ ಗ್ರಾಮಗಳಿಗೆ ಪದೇ ಪದೇ ಕಾಡು ಪ್ರಾಣಿಗಳು ದಾಳಿ ನಡೆಯುತ್ತಿದ್ದು ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು. ಜಿಪಂ ಮಾಜಿ ಸದಸ್ಯ ಎಚ್ .ವಿ.ಶ್ರೀನಿವಾಸ್, ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ್ ಗೌಡ, ತಾ.ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ, ಜಯಣ್ಣ, ಶ್ಯಾಮಣ್ಣ, ದ್ಯಾಪಸಂದ್ರ ವಿಜಿ, ಜೊನ್ನಪ್ಪ, ಗ್ರಾಪಂ ಸದಸ್ಯ ರಘುನಾಥ್, ಬಾಲಾಜಿ,
ಸುಗ್ಗೊಂಡಹಳ್ಳಿ ವೆಂಕಟೇಶ್ ಇನ್ನಿತರರು ಇದ್ದರು.
ಚಿರತೆಯ ಲಕ್ಷಣ ಪತ್ತೆಯಾಗಿಲ್ಲ
ಮಾಸ್ತಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮೇಘಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವ ಪರಿಕ್ಷೆ ನಡೆಸಿ, ನಾಯಿಗಳ ದಾಳಿಯಿಂದ ಕುರಿಗಳು ಸಾವನ್ನಪ್ಪಿವೆ. ಚಿರತೆ ದಾಳಿ ಮಾಡಿ ಸಾಯಿಸಿರುವ ಬಗ್ಗೆ ಯಾವುದೇ ರೀತಿಯ ಗುರುತು ಅಥವಾ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಸುಗ್ಗೊಂಡಹಳ್ಳಿ ಚಂದ್ರಪ್ಪನವರಿಗೆ ಸೇರಿದ ಕುರಿಗಳನ್ನು ಒಂದು ವೇಳೆ ಚಿರತೆಯು ದಾಳಿ ನಡೆಸಿದ್ದರೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು. ಜತೆಗೆ ಚಿರತೆ ಹಿಡಿದು ಅರಣ್ಯಕ್ಕೆ ಬಿಡಲಾಗುವುದು.
●ಧನಲಕ್ಷಿ ಆರ್‌ಎಫ್ಒ