Advertisement
ಕನಕಗಿರಿ ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿರುವ ಈ ಹೋಟೆಲ್ ಇಡ್ಲಿಗೆ ಫೇಮಸ್ಸು. ರೈತರು, ಕೂಲಿ ಕಾರ್ಮಿಕರು, ಬಡಜನರ ಹಸಿವು ನೀಗಿಸಲು ಲಕ್ಷ್ಮಣ ಮಡಿವಾಳ್ ಸುಮಾರು 26 ವರ್ಷಗಳ ಹಿಂದೆ ಕನಕಗಿರಿಯಲ್ಲಿ ಪುಟ್ಟ ಹೋಟೆಲ್ ಅನ್ನು ಪ್ರಾರಂಭಿಸಿದ್ದರು. ಇವರು ವೃತ್ತಿಯಲ್ಲಿ ಹೋಟೆಲ್ ಉದ್ಯಮಿಯಲ್ಲ. ಬಡ ಕುಟುಂಬದಲ್ಲೇ ಹುಟ್ಟಿದ್ದ ಇವರು, ಜನರ ಹಸಿವು ನೀಗಿಸುವ ಸಲುವಾಗಿ ಹೋಟೆಲ್ ಆರಂಭಿಸಿದ್ದರು. ಶುಚಿ, ರುಚಿಯಾಗಿ ಮನೆಯಲ್ಲೇ ಮಾಡಿದ ಇಡ್ಲಿ ಹಾಗೂ ಶೆಂಗಾ ಚಟ್ನಿಯನ್ನು ಗ್ರಾಹಕರಿಗೆ ಕೊಡ್ತಾರೆ. ಜೊತೆಗೆ ಚಹವನ್ನೂ…
ಮೊದಲು ಉಪಾಹಾರ ಸೇವಿಸಿ ನಂತರ ದುಡ್ಡು ಕೊಡಿ ಎಂಬುದು ಲಕ್ಷ್ಮಣರ ಮಾತು. ಲಾಭದ ದೃಷ್ಟಿ ಹೊಂದಿರದ ಇವರು, ಬೆಳಗ್ಗಿನ ಉಪಾಹಾರಕ್ಕೆ ಬಿಸಿಬಿಸಿಯಾದ ಮತ್ತು ಶುಚಿಯಾದ ಇಡ್ಲಿ, ಶೇಂಗಾ ಚಟ್ನಿ ಕೊಡ್ತಾರೆ. ಇಲ್ಲಿ 10 ರೂ.ಗೆ ಚಿಕ್ಕಗಾತ್ರದ ಐದು ಇಡ್ಲಿಗಳು ಲಭ್ಯ. ಇಡ್ಲಿ ತಿಂದ್ರೆ ಸಾಕು, ಹೊಟ್ಟೆ ತುಂಬುತ್ತೆ. ಜೊತೆಗೆ 3 ರೂ. ಕೊಟ್ರೆ ಖಡಕ್ ಚಹಾ ಕೂಡ ಸಿಗುತ್ತೆ. ಪತ್ನಿ, ಮಕ್ಕಳೂ ಸಾಥ್:
ಲಕ್ಷ್ಮಣ್ ಅವರ ಪತ್ನಿ ರತ್ನಮ್ಮ, ಮಕ್ಕಳಾದ ಅಮರೇಶ್, ಚೈತ್ರಾ ಕೂಡ ಹೋಟೆಲ್‌ನಲ್ಲೇ ಕೆಲಸ ಮಾಡುತ್ತಾರೆ. ಮತ್ತೂಬ್ಬ ಮಗ ಗಣೇಶ್ ಗೂಡ್ಸ್ ವಾಹನಗಳನ್ನು ಓಡಿಸುತ್ತಾ ಕುಟುಂಬಕ್ಕೆ ನೆರವಾಗುತ್ತಿದ್ದಾರೆ.
Related Articles
ಈ ಹೋಟೆಲ್ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಮನೆಯಲ್ಲಿ ಏನಾದರೂ ಕಾರ್ಯಕ್ರಮ ಇದ್ರೆ ಮಾತ್ರ ಹೋಟೆಲ್ ಬಂದ್ ಮಾಡಲಾಗುತ್ತದೆ. ಇಲ್ಲದಿದ್ರೆ ವರ್ಷ ಪೂರ್ತಿ ಹೋಟೆಲ್ ತೆರೆದಿರುತ್ತದೆ.
Advertisement
ಪೊಲೀಸರು, ಡಾಕ್ಟರ್‌ಗಳು ಬರ್ತಾರೆ:ಕಟ್ಟಿಗೆ ಓಲೆಯಲ್ಲೇ ಇಡ್ಲಿಯನ್ನು ಬೇಯಿಸುವ ಲಕ್ಷ್ಮಣ, ಪ್ರತಿ 15 ನಿಮಿಷಕ್ಕೊಮ್ಮೆ ಒಂದು ಬಾರಿಗೆ 100 ಇಡ್ಲಿ ತಯಾರಿಸಿ ಗ್ರಾಹಕರಿಗೆ ಬಿಸಿಬಿಸಿಯಾಗಿಯೇ ಕೊಡುತ್ತಾರೆ. ಇಲ್ಲಿ ದರ ಕಡಿಮೆ ಮತ್ತು ಟೇಸ್ಟ್ ಕೂಡ ಚೆನ್ನಾಗಿದೆ ಎಂಬ ಕಾರಣಕ್ಕೆ ಪೊಲೀಸರು, ಸರ್ಕಾರಿ ಆಸ್ಪತ್ರೆ ವೈದ್ಯರು, ನರ್ಸ್‌ಗಳು, ಸರ್ಕಾರಿ ನೌಕರರು ಹೀಗೆ ಎಲ್ಲಾ ವರ್ಗದ ಜನರೂ ಬರ್ತಾರೆ.
ಲಾಭ ಮಾಡುವ ಆಸೆ ಇಲ್ಲ:
ಇಷ್ಟು ಕಡಿಮೆ ಬೆಲೆಗೆ ಇಡ್ಲಿ ಕೊಟ್ರೆ ನಿಮಗೆ ಲಾಸ್ ಆಗಲ್ವಾ ಅಂಥಾ ಕೇಳಿದ್ರೆ, ಇಲ್ಲ ಸಾರ್, ಪ್ರತಿದಿನ 2 ರಿಂದ 2500 ರೂ. ವರೆಗೆ ವ್ಯಾಪಾರ ಆಗುತ್ತದೆ. ಎಲ್ಲಾ ಖರ್ಚು ಕಳೆದು 500 ರೂ. ಉಳಿಯುತ್ತದೆ. ಅದರಲ್ಲೇ ಸಂಸಾರ ನಡೆಯುತ್ತೆ. ಅಡುಗೆಗೆ ಕಟ್ಟಿಗೆ ಬಳಸುತ್ತೇವೆ. ಹೋಟೆಲ್ ಕೆಲಸಕ್ಕೆ ನಮ್ಮ ಮನೆಯವರೇ ಇರುವುದರಿಂದ ಖರ್ಚು ಕೂಡ ಕಡಿಮೆ. ನಮಗೆ ಲಾಭ ಮಾಡಬೇಕೆಂಬ ಆಸೆ ಇಲ್ಲ ಸಾರ್, ಜನರು ಹೊಟ್ಟೆ ತುಂಬಾ ಊಟ ಮಾಡಿ ಖುಷಿ ಪಟ್ರೆ ಅದೇ ಸಮಾಧಾನ ಅನ್ನುತ್ತಾರೆ ಲಕ್ಷ್ಮಣ. 1 ರೂ. ದಾನ ಮಾಡಲೂ ಹಿಂದೆ ಮುಂದೆ ನೋಡುವ ಜನರಿರುವ ಈ ದಿನಗಳಲ್ಲಿ ಲಕ್ಷ್ಮಣ ಅವರ ಅನ್ನ ದಾಸೋಹ ಸೇವೆ ಮೆಚ್ಚುವಂಥದ್ದು. – ಭೋಗೇಶ ಎಂ.ಆರ್.