Advertisement

10% ಸರ್ಕಾರ ಆರೋಪ ಸಾಬೀತುಪಡಿಸಿ

06:15 AM Feb 05, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ಥಾಪಿಸಿದ”ಹತ್ತು ಪರ್ಸೆಂಟ್‌ ಸರ್ಕಾರ’ ಆರೋಪಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ  ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು, ಯಾರು ಯಾರಿಗೆ ಮತ್ತು ಯಾವ ಯೋಜನೆಗೆ ಕಮೀಷನ್‌ ಕೊಟ್ಟಿದ್ದಾರೆ ಎಂಬುದನ್ನು ಪ್ರಧಾನಿಯವರು ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.

Advertisement

ಪ್ರತಿಯೊಂದು ಸರ್ಕಾರಿ ಕೆಲಸಕ್ಕೂ ಶೇ. 10ರಷ್ಟು ಕಮೀಷನ್‌ ನೀಡಬೇಕಿದೆ. ಇದು ಹತ್ತು ಪರ್ಸೆಂಟ್‌ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದ್ದಾರೆ. ಆದರೆ, ಈ ಕಮೀಷನ್‌ ತೆಗೆದುಕೊಂಡವರು ಯಾರು? ಹಾಗೂ ಕೊಟ್ಟವರು ಯಾರು ಎಂಬುದನ್ನು ಸ್ವತಃ ಪ್ರಧಾನಿ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ, ಇದೊಂದು ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿಗಳ ಬೇಜವಾಬ್ದಾರಿಯುತ ಹೇಳಿಕೆ ಆಗಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರದ ನಂಗಾನಾಚ್‌ ಎಂದು ಪ್ರಧಾನಿ ಆರೋಪಿಸಿದ್ದಾರೆ. ಇದು ಚುನಾಯಿತ ಸರ್ಕಾರವೊಂದಕ್ಕೆ ಮಾಡಿದ ಅಪಮಾನ. ನಿಜವಾಗಿಯೂ ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ, ಕೇಂದ್ರ ಮಧ್ಯಪ್ರವೇಶಿಸಲಿ ಎಂದು ಸವಾಲು ಹಾಕಿದ ಡಾ. ಪರಮೇಶ್ವರ್‌, ಭ್ರಷ್ಟಾಚಾರವೆಸಗಿ ಜೈಲಿಗೆ ಹೋಗಿಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುವುದಾಗಿ ಘೋಷಿಸಿರುವ ಪ್ರಧಾನಿ ಹೇಳಿಕೆ ಸೋಜಿಗ ಎಂದು ವ್ಯಂಗ್ಯವಾಡಿದರು.

ರಾಜ್ಯಕ್ಕೆ ಅಪರಾಧಿ ಪಟ್ಟ; ಅವಮಾನ
ದೇಶದಲ್ಲೇ ಅತಿ ಹೆಚ್ಚು ಅಪರಾಧ ನಡೆಯುತ್ತಿರುವುದು ಉತ್ತರ ಪ್ರದೇಶದಲ್ಲಿ  (ಪ್ರಮಾಣ ಶೇ. 9.5), ನಂತರದ ಸ್ಥಾನ ಮಧ್ಯಪ್ರದೇಶ (ಶೇ. 8.5) ಇದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಪರಾಧ ಪ್ರಮಾಣದಲ್ಲಿ ಮೊದಲ ಹತ್ತು ರಾಜ್ಯಗಳಲ್ಲಿ ಕರ್ನಾಟಕ ಇಲ್ಲವೇ ಇಲ್ಲ. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ “ಅಪರಾಧ’ದ ಪಟ್ಟ ಕೊಟ್ಟಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಇದೇ ವೇಳೆ ಡಾ.ಪರಮೇಶ್ವರ ತಿರುಗೇಟು ನೀಡಿದರು.

ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಹೊತ್ತಿ ಉರಿಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಜನರಿಗೆ ಕುಡಿಯಲಿಕ್ಕೂ ನೀರಿಲ್ಲ. ಆದರೆ, ಪ್ರಧಾನಿಗಳ ಇಡೀ ಭಾಷಣದಲ್ಲಿ ಮಹದಾಯಿ ವಿವಾದದ ಪ್ರಸ್ತಾಪವೂ ಆಗಿಲ್ಲ. ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಲಾಗಿತ್ತು. ಈ ಬಗ್ಗೆಯೂ ಬಜೆಟ್‌ನಲ್ಲಾಗಲಿ ಅಥವಾ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣದಲ್ಲಾಗಲಿ ಪ್ರಸ್ತಾಪಿಸಲಿಲ್ಲ. ಇದು ರೈತರ ಬಗ್ಗೆ ಬಿಜೆಪಿಗೆ ಮತ್ತು ಪ್ರಧಾನಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದರು.

Advertisement

ಮುಕ್ತ ಅಲ್ಲ; ಮತ್ತೆ ಕಾಂಗ್ರೆಸ್‌
ಕಾಂಗ್ರೆಸ್‌ ಮುಕ್ತ ಕರ್ನಾಟಕ ಅಲ್ಲ; ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಅಷ್ಟೇ ಅಲ್ಲ, 2019ಕ್ಕೆ ಬಿಜೆಪಿ ಕೂಡ “ಎಕ್ಸಿಟ್‌ ಗೇಟ್‌’ (ನಿರ್ಗಮನ ದ್ವಾರ)ನಲ್ಲಿ ನಿಲ್ಲಲಿದೆ. ಈಗಾಗಲೇ ರಾಜಸ್ತಾನ ಮತ್ತಿತರ ರಾಜ್ಯಗಳಲ್ಲಿ ಇದರ ಮುನ್ಸೂಚನೆ ದೊರಕಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next