Advertisement

ಮಂಗಳೂರು ಜೈಲಿನಲ್ಲಿ  ಕೈದಿಗಳ ಹೊಡೆದಾಟ 10ಕ್ಕೂ ಅಧಿಕ ಕೈದಿಗಳಿಗೆ ಗಾಯ

06:00 AM Jan 09, 2018 | Team Udayavani |

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಸಂಜೆ ಕೈದಿಗಳ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಸಂಭವಿಸಿ ನಾಲ್ವರು ಪೊಲೀಸರು ಮತ್ತು ಸುಮಾರು 10ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದಾರೆ. ಗಾಯಾಳು ಕೈದಿಗಳನ್ನು ಮತ್ತು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

ಜೈಲಿನ ಕಿಟಿಕಿಯ ಅಲ್ಯುಮೀನಿಯಂ ಫ್ರೇಮ್‌, ಟ್ಯೂಬ್‌ಲೈಟ್‌ ಮತ್ತು ಕಲ್ಲು, ಕೊಡ ಪಾನ, ಚೊಂಬುಗಳಿಂದ ಕೈದಿಗಳು ಹೊಡೆದಾಡಿ ಕೊಂಡಿದ್ದು, ಪೊಲೀಸರು ಲಾಠಿ ಪ್ರಹಾರ ಮಾಡಿ ಹೊಡೆದಾಟವನ್ನು ಹತೋಟಿಗೆ ತಂದರು. ಬಳಿಕ ಕೈದಿಗಳನ್ನು ಸೆಲ್‌ಗ‌ಳಲ್ಲಿ ಬಂಧಿಸಲಾಯಿತು.

ನಡೆದದ್ದೇನು?
ಸಂಜೆ 4 ಗಂಟೆ ವೇಳೆಗೆ ಜೈಲಿನಲ್ಲಿ ಎ ಮತ್ತು ಬ್ಯಾರಕ್‌ನ ಕೈದಿಗಳನ್ನು ವಿಸಿಟಿಂಗ್‌ ಮತ್ತು ಟೀ ಬ್ರೇಕ್‌ಗೆ ಬಿಡಲಾಗಿತ್ತು. ಈ ವೇಳೆಗೆ ಕಲ್ಲಡ್ಕದ ಮಿಥುನ್‌ ಮತ್ತು ಶರತ್‌ ಮಡಿವಾಳ ಕೊಲೆ ಪ್ರಕರಣದ ಆರೋಪಿ ಸಾದಿಕ್‌ ನಡುವೆ ಸಣ್ಣ ಪ್ರಮಾಣದ ಜಗಳವಾಗಿತ್ತು. ಈ ಬಗ್ಗೆ ಇಬ್ಬರೂ ಕೈದಿಗಳು ಸಹ ಕೈದಿಗಳಿಗೆ ತಿಳಿಸಿದ್ದರು. ಸ್ವಲ್ಪ ಸಮಯದ ಬಳಿಕ ಎ ಬ್ಯಾರಕ್‌ನ ಕೈದಿಗಳು ಬಿ ಬ್ಯಾರಕ್‌ಗೆ ನುಗ್ಗಿ ದಾಂಧಲೆ ನಡೆಸಿದರು. ಪರಸ್ಪರ ಹಲ್ಲೆ  ನಡೆಯಿತು.

ಇದನ್ನು ಗಮನಿಸಿದ ಜೈಲು ಸಿಬಂದಿ ಜಗಳ ಬಿಡಿಸಲು ಯತ್ನಿಸಿದರು.  ನಿಯಂತ್ರಣ ಸಾಧ್ಯವಾಗದ್ದರಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಯಿತು.  ಬಳಿಕ ಲಾಠಿ ಪ್ರಹಾರ ಮಾಡಿ ಹೊಡೆದಾಟವನ್ನು ಹತೋಟಿಗೆ ತರಲಾಯಿತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಜೈಲಿನ ಆಸ್ತಿಪಾಸ್ತಿ ನಷ್ಟವಾಗಿದೆ.

ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಜೈಲರ್‌ಗಳು, ಜೈಲು ಸಿಬಂದಿ ಮತ್ತು ಹೋಂಗಾರ್ಡ್‌ ಮೇಲೂ ವಿಚಾರಣಾಧೀನ ಕೈದಿಗಳು ಹಲ್ಲೆ ನಡೆಸಿದ್ದಲ್ಲದೆ ಸಾಂಬಾರು, ಸಾಂಬಾರು ಹುಡಿ ಎರಚಿದರು.

Advertisement

ಡಿಸಿಪಿ ಹನುಮಂತರಾಯ, ಇನ್ಸ್‌ಪೆಕ್ಟರ್‌ಗಳಾದ ರವೀಶ್‌ ನಾಯಕ್‌, ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತಾರಾಂ ಮತ್ತು ಇತರ ಅಧಿಕಾರಿಗಳು ಜೈಲಿಗೆ ದೌಡಾಯಿಸಿದ್ದರು. 

ಪೊಲೀಸ್‌ ಸಿಬಂದಿ ಯೋಗೀಶ್‌, ಜೈಲರ್‌ಗಳಾದ ಸಿದ್ಧರಾಮ್‌ ಪಾಟೀಲ್‌, ಚೀಫ್‌ ವಾರ್ಡನ್‌ ಕೆಂಪಾರು, ಸಿಬಂದಿ ಕೆ.ಬಿ. ರಹಿಮಾನಿ ಮತ್ತು ಶಿವಣ್ಣ, ಕೈದಿಗಳಾದ ಶರೀಫ್‌, ಸಯ್ಯದ್‌ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಸಯ್ಯದ್‌ಗೆ ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಹೆಚ್ಚಿನ ಕೈದಿಗಳ ವಿವರ ಲಭ್ಯವಾಗಿಲ್ಲ.
ಘಟನೆಯ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಿಂದಾಗ ಸದ್ದು  ಮಾಡುತ್ತಿರುವ ಜೈಲು 
ಗಾಂಜಾ, ಹಲ್ಲೆಗಳ ಮೂಲಕ ಮಂಗಳೂರು ಕೇಂದ್ರ ಕಾರಾಗೃಹ ಆಗಿಂದಾಗ ಸುದ್ದಿ ಮಾಡುತ್ತಿದೆ. ಇಲ್ಲಿ ಕೈದಿಗಳ ಸೆಲ್‌ಗ‌ಳಿಂದ ಗಾಂಜಾ, ಮೊಬೈಲ್‌ ಫೋನ್‌, ಚಾರ್ಜರ್‌, ಚೂರಿ, ಚಾಕು ಇತ್ಯಾದಿಗಳು ಪತ್ತೆಯಾಗುವುದು ಸಾಮಾನ್ಯವಾಗಿದೆ. ಜೈಲಿನಲ್ಲಿ ಕಳೆದ ಸೆಪ್ಟಂಬರ್‌ ತಿಂಗಳೊಂದರಲ್ಲೇ 3 ಹಲ್ಲೆ ಪ್ರಕರಣಗಳು ನಡೆದಿದ್ದವು. ಆ ಬಳಿಕವೂ ಸಣ್ಣಪುಟ್ಟ ಘಟನೆಗಳು ನಡೆದಿವೆ. 

ಸೆಪ್ಟಂಬರ್‌ನಲ್ಲಿ ಪೊಲೀಸ್‌ ಕಾರ್ಯಾಚರಣೆಯಲ್ಲಿ ಗಾಂಜಾ ಪ್ಯಾಕೆಟ್‌ಗಳು, ಮೊಬೈಲ್‌, ಪಂಚ್‌, ರಾಡ್‌ಗಳನ್ನು, ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಿಸಿದ ಹುಕ್ಕಾ ರೀತಿಯ ವಸ್ತುಗಳು ಪತ್ತೆಯಾಗಿದ್ದವು. ಜೈಲಿನೊಳಗೆ ಮಾರಕ ಅಸ್ತ್ರಗಳು ರವಾನೆಯಾಗುತ್ತಿವೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. 

ಉಡುಪಿಯ ಭಾಸ್ಕರ ಶೆಟ್ಟಿಯ ಕೊಲೆ ಆರೋಪಿಗಳಾದ ನಿರಂಜನ್‌ ಭಟ್‌ ಮತ್ತು ನವನೀತ್‌ ಶೆಟ್ಟಿ ಅವರ ಮೇಲೆ ಸಹ ಕೈದಿಗಳಿಂದ ಸೆ. 11ರಂದು ಹಲ್ಲೆ ನಡೆದಿತ್ತು. ಇದಕ್ಕೂ ಮೊದಲು ವಿಚಾರಣಾಧೀನ ಕೈದಿ ತಾರಾನಾಥ್‌ ಹಾಗೂ ದನ ಕಳ್ಳತನದ ಆರೋಪದಲ್ಲಿ ಜೈಲಿನಲ್ಲಿದ್ದ ಕೈದಿಯೋರ್ವನ ಮೇಲೂ ಹಲ್ಲೆ ನಡೆದಿತ್ತು.

ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂಗತ ಲೋಕದ ಗ್ಯಾಂಗ್‌ವಾರ್‌, ಕೋಮು ಹೊಡೆದಾಟ ಜೈಲಿನೊಳಗೂ ನುಸುಳಿದೆ. ಪರಿಣಾಮ ಜೈಲಿನ ಅಂಗಳ ಕೆಲವು ಬಾರಿ ರಣರಂಗವಾಗಿ ಪರಿ ಣಮಿಸುತ್ತದೆ. ಕಾರಾಗೃಹ ಇಲಾಖೆ, ಪೊಲೀಸ್‌ ಇಲಾಖೆಯ ನೆಮ್ಮದಿ ಕೆಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next