ವಿಜಯಪುರ: ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಸಭೆ ನಡೆಸಿದ ಪಶ್ಚಿಮ ಬಂಗಾಳದ ಐವರು, ಅವರೊಂದಿದ್ದ ಇನ್ನೂ ಐವರು ಮಹಿಳೆಯರು ಸೇರಿ 10 ಜನರು ವಿಜಯಪುರ ನಗರದಲ್ಲಿ ವಾಸ ಇರುವ ಮಾಹಿತಿ ಬಹಿರಂಗ ಆಗಿದೆ. ಇವರೊಂದಿಗೆ ಸಂಪರ್ಕದಲ್ಲಿ ಇದ್ದ ಮೂವರು ಸೇರಿದಂತೆ ಒಟ್ಟು 13 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇಡೀ ಪ್ರಕರಣದಲ್ಲಿ 39 ಜನರನ್ನು ಹೋಂ ಕ್ವಾರಂಟೈನ್ ನಿಗಾದಲ್ಲಿ ಇರಿಸಲಾಗಿದೆ.
ಈ ಕುರಿತು ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಪಶ್ಚಿಮ ಬಂಗಾಲ ಮೂಲದ 10 ಜನರು ಮಾರ್ಚ್ 3 ಕ್ಕೆ ಪಶ್ಚಿಮ ಬಂಗಾಲದಿಂದ ದೆಹಲಿಗೆ ಪ್ರಯಾಣ ಬೆಳೆಸಿ, ಮಾರ್ಚ್ 4 ಕ್ಕೆ ದೆಹಲಿ ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದ್ದಾರೆ.
ದೆಹಲಿ ನಿಜಾಮುದ್ದೀನ್ ಮಜೀದ್ ಸಭೆ ಬಳಿಕ ಮಾರ್ಚ 10 ರಂದು ವಿಜಯಪುರ ಜಿಲ್ಲೆಗೆ ಆಗಮಿಸಿದ್ದ 10 ಜನರ ತಂಡ, ನಗರದ ವಿವಿಧ ಕಡೆಗಳಲ್ಲಿ ಸಭೆ ನಡೆಸಿದ್ದರು. ಹೀಗಾಗಿ ಇವರೊಂದಿಗೆ ಸಂಪರ್ಕದಲ್ಲಿದ್ದ ಸ್ಥಳೀಯ ಇನ್ನೂ 3 ಜನರ ಮಾಹಿತಿ ಸಂಗ್ರಹಿಸಿ, 13 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಈ 13 ಜನರು ಮಾತ್ರವಲ್ಲದೇ ಇವರೊಂದಿಗೆ ಸಂಪರಗಕದಲ್ಲಿದ್ದ ಇತರೆ 23 ಜನರು ಹಾಗೂ ವಿವಿಧ ದೇಶಗಳ ಪ್ರವಾಸಿಗರಿಗೆ ಮಾರ್ದಗರ್ಶನ ಮಾಡಿದ್ದ 3 ಗೈಡ್ ಗಳೂ ಸೇರಿದಂತೆ 39 ಜನರನ್ನು ಹೋಂ ಕ್ವಾರಂಟೈನ್ ನಿಗಾದಲ್ಲಿ ಇರಿಸಲಾಗಿದೆ ಎಂದು ವಿವರಿಸಿದರು.
ಗಂಟಲು ದ್ರವ ಪರೀಕ್ಷೆ ವರದಿ ಬಂದ ನಂತರ ಆರೋಗ್ಯ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.
ಅಗತ್ಯ ಎನಿಸಿದರೆ ನಿಜಾಮುದ್ದೀನ್ ಮಜೀದ್ ಸಭೆಯಲ್ಲಿ ಭಾಗವಹಿಸಿದವರ ಸಂಪರ್ಕ ಹೊಂದಿದ್ದ ಜಿಲ್ಲೆಯ 23 ಜನರ ಗಂಟಲು ದ್ರವ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿವುದಾಗಿ ಹೇಳಿದರು.
ಇದಲ್ಲದೇ ಇಂಡೋನೇಷ್ಯಾ, ಮಲೇಷಿಯಾ ದೇಶ ಪ್ರವಾಸಿಗರಿಗೆ ಮಾರ್ಗದರ್ಶನ (ಗೈಡ್) ಮಾಡಿದ್ದ ನಗರದ ಮೂವರು ಪ್ರವಾಸಿ ಮಾರ್ಗದರ್ಶಿಗಳನ್ನೂ ಹೋಂ ಕ್ವಾರಂಟೈನ್ ನಿಗಾ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ವಿವರಿಸಿದರು