Advertisement

“10 ಪೈಸೆ’ಕಟ್ಟಿದ ಶಾಲೆ

10:11 AM Feb 02, 2020 | Lakshmi GovindaRaj |

ಕಿತ್ತಲೆ ಹಣ್ಣು ಮಾರಿ ಶಾಲೆ ಕಟ್ಟಿದ ಮಂಗಳೂರಿನ ಹರೆಕಳ ಹಾಜಬ್ಬ ಅವರು ಈಗ ದೇಶ ನೋಡುತ್ತಿರುವ ಹೀರೋ. ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ, ಹಾಜಬ್ಬರನ್ನು ಗುರುತಿಸಿದರ ಫ‌ಲವಿದು. ಹಾಗೆಯೇ, ಬಾಗಲಕೋಟೆ ಜಿಲ್ಲೆಯ ಕಲಾದಗಿ ಎಂಬಲ್ಲಿ ಒಂದು ಶಾಲೆಯಿದೆ. ಅಂಥ ನೂರಾರು ಹರೆಕಳ ಹಾಜಬ್ಬರು ಕಟ್ಟಿದ ಸ್ವಾಭಿಮಾನದ ಅಕ್ಷರ ದೇಗುಲ ಇದು. ಪ್ರತಿಯೊಬ್ಬರೂ 10 ಪೈಸೆ ಹಣ ಕೂಡಿಟ್ಟು, ಶಾಲೆ ಕಟ್ಟಿದ ಕತೆ ಇಲ್ಲಿದೆ…

Advertisement

ಹತ್ತೇ ಹತ್ತು ಪೈಸೆ! ಈಗ ಈ ಪುಟ್ಟ ನಾಣ್ಯ, ಮನೆಯ ಅಟ್ಟದ ಮೇಲೆ, ಮ್ಯೂಸಿಯಮ್ಮಿನ ಗಾಜಿನ ಗೂಡೊಳಗೆ ಕಾಣಬಹುದು. ಇನ್ನೆಲ್ಲೋ ಮಣ್ಣಿನ ಆಳದಲ್ಲಿ ಹೂತು ಹೋಗಿದ್ದಿರಲೂಬಹುದು. ಅದರ ಬೆಳ್ಳಿ ಬಣ್ಣದ ರೂಪರಾಶಿಯೆಲ್ಲ ಮಸುಕಾಗಿ, ತನ್ನ ಹೊಳಪಿನೊಂದಿಗೆ, ಕಾಲ ಕಟ್ಟಿದ ಬೆಲೆಯನ್ನೂ ಕಳಕೊಂಡ ತಬ್ಬಲಿ ಬಿಲ್ಲೆಯಾಗಿ ಅದು ಮೌನಿ ಆಗಿದೆ. ಆದರೆ, ಕಾಲದ ಮುಳ್ಳನ್ನು ಕೊಂಚ ಹಿಂದಕ್ಕೆ ಇಟ್ಟು ನೋಡಿ… ಅಂದರೆ, ಮೂವತ್ತೇ ಮೂವತ್ತು ವರುಷಗಳ ಹಿಂದಕ್ಕೆ… ಅದೇ ಹತ್ತು ಪೈಸೆ… ಆ ಮೊತ್ತಕ್ಕೆ ಒಂದೆರಡು ಪೆಪ್ಪರ್‌ಮಿಂಟು, ಚಾಕ್ಲೆಟಿಗೆ ಬಾಯಿ ಸಿಹಿಯಾಗುತ್ತಿದ್ದ ಕಾಲ.

ಹತ್ತು ಪೈಸೆ, ಬಾಗಲಕೋಟೆ ತಾಲೂಕಿನ ಕಲಾದಗಿ ಊರಿನವರ ಬದುಕನ್ನೇ ಸಿಹಿಮಾಡಿತು. ಮಂಗಳೂರಿನ ಹಾಜಬ್ಬನಂತೆ ಹಣ್ಣು ಮಾರುವ, ಬೆಳೆಯುವ ರೈತರೆಲ್ಲ ಸೇರಿ, 10 ಪೈಸೆಗಳನ್ನು ಜೋಡಿಸುತ್ತಲೇ, ಒಂದು ಸುಂದರ ಶಾಲೆಯನ್ನು ಕಟ್ಟಿದರು. ಈಗ ಆ ಶಾಲೆಯಲ್ಲಿ ಎಲ್ಲಿ ನೋಡಿದರೂ, ರೈತರ ಮಕ್ಕಳು. ನಗರಕ್ಕೆ ಮಕ್ಕಳ ವಲಸೆ ತಪ್ಪಿಸಿದ ಶಾಲೆ ಈಗ ನಂದನವನವೇ ಆಗಿದೆ. ಕಲಾದಗಿ! ಈ ಊರಿಗೆ ಕಾಲಿಟ್ಟರೆ, ದಾಳಿಂಬೆ, ಚಿಕ್ಕು ಹಣ್ಣುಗಳೇ ಘಮಗುಡುತ್ತವೆ. ತಾವು ಬೆಳೆದ ಹಣ್ಣಿಗೆ ಭಾರಿ ಬೇಡಿಕೆ ಹುಟ್ಟಿದಾಗ, ಆ ರೈತರೆಲ್ಲ ಕೂಡಿ, ಹಣ್ಣು ಬೆಳೆಗಾರರ ಸಂಘ ಕಟ್ಟಿಕೊಂಡರು.

ಅವರೆಲ್ಲ ಮುಂಬೈ, ಹೈದರಾಬಾದ್‌, ಬೆಂಗಳೂರು- ಹೀಗೆ ಎಲ್ಲೆಡೆ, ದಾಳಿಂಬೆ, ಚಿಕ್ಕುಗಳನ್ನು ಕಳಿಸುತ್ತಿದ್ದರು. ಆಗ ಒಂದು ಬುಟ್ಟಿ ಹಣ್ಣು ತುಂಬಿದರೆ, (ಸುಮಾರು 50ರಿಂದ 70 ಹಣ್ಣುಗಳು) ತಲಾ 10 ಪೈಸೆಯಂತೆ ಸಂಘಕ್ಕೆ ಠೇವಣಿಯಾಗಿ ನೀಡುತ್ತಿದ್ದರು. ನೂರಾರು ರೈತರು ಹಗಲು- ರಾತ್ರಿ ನಿದ್ದೆಗೆಟ್ಟು, ಹೊಲದಲ್ಲಿ ಹಣ್ಣುಗಳನ್ನು ಪೋಷಿಸಿದರು. ಸಂಘಕ್ಕೆ ಕೊಟ್ಟ 10 ಪೈಸೆಗಳು ದೊಡ್ಡ ಮೊತ್ತವಾಗಿ ಬೆಳೆಯುತ್ತಾ ಹೋಯಿತು. ಸುರಿಸಿದ ಬೆವರು ಬಂಗಾರವಾಯಿತು. ಬೃಹತ್‌ ಮೊತ್ತವನ್ನು ನಮ್ಮ ಮಕ್ಕಳ ಕಲ್ಯಾಣಕ್ಕೆ ಮೀಸಲಿಡೋಣ ಎಂಬ ಚಿಂತನೆ ಮೊಳೆತಾಗ, ಕಣ್ಣೆದುರಿಗೆ ಎದ್ದುನಿಂತಿದ್ದು ಈ ಚೆಂದದ ಶಾಲೆ.

ಸರನಾಯಕರ ತಂಡ: ಈ ಶಾಲೆ ಕಟ್ಟಲು ಸಾರಥ್ಯ ವಹಿಸಿದವರು ಹಣ್ಣು ಬೆಳೆಗಾರರೂ ಆಗಿರುವ ಮಾಜಿ ಸಚಿವ ಅಜಯಕುಮಾರ ಸರನಾಯಕ. ಇವರ ನೇತೃತ್ವದಲ್ಲಿ 1989ರಲ್ಲಿ ಸಂಘ ಹುಟ್ಟಿಕೊಂಡಿತು. ಬ್ರಿಟಿಷರ ಕಾಲದ ಪಾಳುಬಿದ್ದ ನಾಡ ಕಚೇರಿಯ ಕೊಠಡಿಯಲ್ಲಿ ಕೇವಲ 8 ರೈತ ಮಕ್ಕಳು, ಒಬ್ಬ ಶಿಕ್ಷಕರೊಂದಿಗೆ ಮೊಟ್ಟ ಮೊದಲ ಬಾರಿಗೆ ಶಾಲೆಯ ಗಂಟೆ ಬಾರಿಸಿತು. ಆ ಗಂಟೆ ಹತ್ತೂರಿಗೆ ಕೇಳಿಸಿತು. ಪರಿಣಾಮ, ಸುತ್ತಲಿನ 16 ಹಳ್ಳಿಯ ರೈತರೂ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದರು. ದಿನೇದಿನೆ ಬೆಳೆದ ಈ ಶಾಲೆ ಈಗ, ನರ್ಸರಿ, ಪ್ರಾಥಮಿಕ, ಪ್ರೌಢಶಾಲೆ ವಿಭಾಗ ಹೊಂದಿದೆ. ಪ್ರಾಥಮಿಕ ಶಾಲೆ ವಿಭಾಗದಲ್ಲಿ 21, ಪ್ರೌಢ ಶಾಲಾ ವಿಭಾಗದಲ್ಲಿ 6 ಜನ ಹಾಗೂ ಎಲ್‌ಕೆಜಿ ವಿಭಾಗದಲ್ಲಿ 6 ಶಿಕ್ಷಕರು ಸೇರಿ ಒಟ್ಟು 32 ಶಿಕ್ಷಕರು, ಇಲ್ಲಿ ಗುರುಸೇವೆ ನಿರತರು.

Advertisement

ಶಿಕ್ಷಕರಿಗೂ ರೈತರಿಂದಲೇ ಸಂಬಳ…: ಈ ಶಾಲೆ ಸರ್ಕಾರದ ಅನುದಾನಕ್ಕೂ ಒಳಪಟ್ಟಿದೆ. ಪ್ರಾಥಮಿಕ ವಿಭಾಗಕ್ಕೆ 7 ಹಾಗೂ ಪ್ರೌಢಶಾಲೆ ವಿಭಾಗಕ್ಕೆ ಮೂವರು ಶಿಕ್ಷಕರ ವೇತನವನ್ನು ಸರ್ಕಾರ ಕೊಡುತ್ತದೆ. ಇನ್ನುಳಿದ ಶಿಕ್ಷಕರ ವೇತನ ರೈತರೇ, ತಾವು ಬೆಳೆದ ಹಣ್ಣು ಬೆಳೆಯಿಂದ ಕೊಡುತ್ತಾರೆ. ಒಂದು ಬಾಕ್ಸ್‌ ಹಣ್ಣು ಕಳುಹಿಸಿದರೆ, ಸಂಘಕ್ಕೆ 1 ರೂ.ನಂತೆ ದೇಣಿಗೆ ಕೊಡುವ ನೀತಿ ಈಗಲೂ ಇದೆ. ಆ ಹಣವೇ ಶಾಲೆಗೆ ಶಕ್ತಿ. ಗ್ರಾ.ಪಂ.ನ ಹಳೇ ಕಟ್ಟಡದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳು ಪಾಠಕ್ಕೆ ಕಿವಿಯಾಗಿರುತ್ತಾರೆ.

ಹಣ್ಣಿನಿಂದಲೇ ಬದುಕು…: ಕಲಾದಗಿಯ ಈ ಹಣ್ಣು ಬೆಳೆಗಾರರ ಸಂಘಕ್ಕೆ 6 ಎಕರೆ ಸ್ವಂತ ಜಾಗವಿದೆ. ಅದರಲ್ಲಿ 2 ಎಕರೆ ಶಾಲೆಗೆ ಬಳಕೆಯಾದರೆ, ಇನ್ನುಳಿದ 4 ಎಕರೆ ಭೂಮಿಯಲ್ಲಿ ವಿವಿಧ ರೀತಿಯ ಹಣ್ಣು, ಕಬ್ಬು ಕೃಷಿಯ ಖುಷಿ. ಅದರಿಂದ ಬರುವ ಹಣವೂ ಸಂಘದ ಖಾತೆಯನ್ನು ಸೇರಿಕೊಳ್ಳುತ್ತದೆ. ಅಲ್ಲೀಗ ಪಪ್ಪಾಯಿ ಬೆಳೆ, ಚಪ್ಪಾಳೆ ಬಾರಿಸುವಷ್ಟು ಬಂಪರ್‌ ಆಗಿದೆ. ಶಾಲಾ ಆವರಣದಲ್ಲಿ 100 ವರ್ಷಗಳ ಹಳೆಯ 35 ಚಿಕ್ಕು ಗಿಡಗಳು ತಂಪು ಚೆಲ್ಲುತ್ತವೆ. ಅವೂ ಹಣ್ಣು ಬಿಟ್ಟು, ಮಕ್ಕಳಿಗಾಗಿ ತ್ಯಾಗಿಗಳಾಗಿವೆ.

ಪೊಂ ಪೊಂ.. ವ್ಯಾನ್‌ ಬಂತು…
– ರೈತರ ಮಕ್ಕಳು ಶಾಲೆಗೆ ಹೋಗಲು ಬೇರೆಡೆ, ಹರಸಾಹಸ ಪಡಬಹುದು. ಆದರೆ, ಇಲ್ಲಿ ಹಾಗಿಲ್ಲ. ಶಾಲೆಗೆ ಮಕ್ಕಳನ್ನು ಹೊತ್ತು ತರಲು 2 ಬಸ್ಸುಗಳಿವೆ. 16 ಹಳ್ಳಿಗಳ ರಸ್ತೆಗಳಲ್ಲಿ ತಿರುಗಿ, ರೈತರ ಮನೆ ಮನೆಗೆ ಹೋಗಿ ಮಕ್ಕಳನ್ನು ಕರೆ ತರುವ ಪುಷ್ಪಕ ವಿಮಾನಗಳಿವು.

– ಇಲ್ಲಿ ಕಲಿಯುತ್ತಿರುವ ಎಷ್ಟೋ ಮಕ್ಕಳು, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶಾಲೆಯ ಕೀರ್ತಿಯನ್ನು ಎತ್ತರಕ್ಕೇರಿಸಿದ್ದಾರೆ.

– ಇಲ್ಲಿನ 6 ಮಲ್ಲಕಂಬ ಪ್ರವೀಣರು, ಹುಬ್ಬೇರಿಸುವಂಥ ಸಾಹಸ ಪ್ರದರ್ಶನ ನೀಡಿ, ಕೇಂದ್ರ ಸರ್ಕಾರದಿಂದ ಮೆಚ್ಚುಗೆ ಪಡೆದಿರುವುದೂ ಒಂದು ಹೆಗ್ಗಳಿಕೆ.

– ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ 6 ವರ್ಷಗಳಿಂದ ಶೇ.100ರಷ್ಟು ಫಲಿತಾಂಶ ನೀಡುವ ಶಾಲೆ ಎಂಬ ಹಿರಿಮೆಗೂ ಪಾತ್ರವಾಗಿ, ರೈತರ ಮೊಗದಲ್ಲಿ ಹೆಮ್ಮೆ ಮೂಡಿಸಿದೆ.

ಶಾಲೆಗೆ ನೆರಳಾದ ತಂಡ…: ಹಣ್ಣು ಬೆಳೆಗಾರರ ಸಂಘಕ್ಕೆ ಮಾಜಿ ಸಚಿವ ಅಜಯಕುಮಾರ ಸರನಾಯಕ ನೇತೃತ್ವದಲ್ಲಿ ರೈತರೇ ಒಳಗೊಂಡ ಅತ್ಯುತ್ತಮ ತಂಡವಿದೆ. ಎಸ್‌.ಬಿ. ಅಂಗಡಿ (ಉಪಾಧ್ಯಕ್ಷ), ಎಸ್‌.ಆರ್‌. ವಾಘ (ಕಾರ್ಯದರ್ಶಿ), ಕೆ.ಎಲ್‌. ಬಿಲ್‌ಕೇರಿ (ಕೋಶಾಧ್ಯಕ್ಷ), ಎಚ್‌.ಎಚ್‌. ತೇಲಿ, ಎಚ್‌.ಎಲ್‌. ಚವ್ಹಾಣ, ಎಂ.ಎಸ್‌. ಶೆಟ್ಟರ ಮುಂತಾದವರು ಸಂಘವನ್ನು ಮುನ್ನಡೆಸುತ್ತಿದ್ದಾರೆ.

* ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next