Advertisement

ಯುನಿಟ್-2ರ ಕಾಮಗಾರಿಗೆ 10 ತಿಂಗಳ ಗಡುವು

10:53 AM Sep 14, 2019 | Suhan S |

ಬಾಗಲಕೋಟೆ: ನವನಗರದ ಯುನಿಟ್-2ರಲ್ಲಿಯ ವಿದ್ಯುತ್‌ ಕಾಮಗಾರಿಗಳು ಒಂದು ವರ್ಷ ಅವಧಿಯ ಕಾರ್ಯಗಳಾಗಿದ್ದು, ಅವುಗಳನ್ನು 10 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದರು.

Advertisement

ನವನಗರದ ಯುನಿಟ್-2ರಲ್ಲಿ ವಿದ್ಯುತ್‌ ಉಪಕೇಂದ್ರ 1 ಹಾಗೂ 2 ಮತ್ತು ಇತರೆ ಹೊಸ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನವನಗರದ ಅಭಿವೃದ್ಧಿಗಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹೆಸ್ಕಾಂಗಳ ಸಿವಿಲ್ ಕಾಮಗಾರಿಗಳ ಬಗ್ಗೆ ಮುಂದಿನ ವಾರ ಸಭೆ ಕರೆದು ಎಲ್ಲ ಕಾರ್ಯಗಳ ಬಗ್ಗೆ ಗಮನ ಹರಿಸುವುದಲ್ಲದೇ ಕಾಮಗಾರಿಗಳು ಸಂಪೂರ್ಣಗೊಂಡ ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಜಿನಿಯರಿಂಗ್‌ ವಿಭಾಗದ ಸಿಬ್ಬಂದಿಗಳಿಂದ ಮೂರನೇ ವ್ಯಕ್ತಿ ತಪಾಸಣೆ ಮಾಡಿಸಿ ನಂತರ ಬಿಲ್ ಪಾವತಿಸುವಂತೆ ಸೂಚಿಸಿದರು.

ನವನಗರದ ಅಭಿವೃದ್ಧಿಗಾಗಿ ಹಿಂದೆ ಕಾರ್ಯನಿರ್ವಹಿಸಿದಂತೆ ಇನ್ನು ಮುಂದೆ ಹಾಗಾಗದೇ ಪ್ರತಿಯೊಂದು ದಿನವೂ ಮಹತ್ವದ ದಿನವನ್ನಾಗಿ ಸ್ವೀಕರಿಸಿ ಯುದ್ಧೋಪಾದಿಯಲ್ಲಿ ಕಾರ್ಯ ಕೈಗೊಳ್ಳಬೇಕು. ಜನರಿಗೆ ಮೂಲ ಸೌಕರ್ಯಗಳಾದ ಮಳೆ ನೀರು ಕೊಯ್ಲು, ಚರಂಡಿ, ನೀರು ಸರಬರಾಜು, ಒಳಚರಂಡಿ, ವಿದ್ಯುತ್ತೀಕರಣ ಹಾಗೂ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಬರುವ ದೀಪಾವಳಿ ನಂತರ ನವನಗರದಲ್ಲಿ ಅಳವಡಿಸಲಾಗಿರುವ ಗೂಡಂಗಡಿ ಡಬ್ಬಿಗಳನ್ನು ತೆರವುಗೊಳಿಸಿ, ಸುಂದರ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು. ಯುನಿಟ್-3ರ ಕಾರ್ಯ ಕೂಡಾ ಶೀಘ್ರದಲ್ಲಿಯೇ ಪ್ರಾರಂಭಗೊಳಿಸಬೇಕು ಎಂದರು.

ಅಕ್ಷಕ ಅಭಿಯಂತರ ಜಿ.ಕೆ. ಗೋಟ್ಯಾಳ ಮಾತನಾಡಿ, 2008-09ರಲ್ಲಿಯೇ ಬಾಗಲಕೋಟೆ ನಗರವನ್ನು ಸ್ಮಾರ್ಟಸಿಟಿ ಎಂದು ಶಾಸಕ ಡಾ|ಚರಂತಿಮಠ ಅವರ ಅವಧಿಯಲ್ಲಿ ಘೋಷಿಸಲಾಗಿತ್ತು. ಇಂದು ಅವರೇ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಸ್ಮಾರ್ಟಸಿಟಿ ಆಗಲಿದ್ದು, ಪಟ್ಟಣದ ಸೀಮಾರೇಖೆ ಆರ್‌.ಎಲ್ 521ರಿಂದ 523 ಮೀಟರ್‌ ವರೆಗೆ ನೀರು ನಿಂತ ಮಟ್ಟದಿಂದ 100 ಮೀಟರ್‌ ಒಳಗಡೆ 3149 ಸಂತ್ರಸ್ತ ಕುಟುಂಬಗಳು ಬರುತ್ತಿದ್ದು, ಅದರ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳನ್ನು ಈಗಾಗಲೇ ಸ್ವಾಧೀನ ಪಡಿಸಿಕೊಂಡು ನವನಗರದ ಯುನಿಟ್-2 ರಲ್ಲಿ ಪುನರ್ವಸತಿ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

Advertisement

ಬಿಟಿಡಿಎ ಮುಖ್ಯ ಅಭಿಯಂತರ ಎ.ಎಲ್. ವಾಸನದ, ಎಸ್‌.ಪಿ. ಸಕ್ರಿ, ಬಿ.ಎಸ್‌. ಹೆಬ್ಟಾಳ, ಕೆ.ಎ. ಆನಂದ, ಬಿಟಿಡಿಎ ಇಂಜಿನಿಯರಗಳಾದ ವಿಜಯಶಂಕರ ಹೆಬ್ಬಳ್ಳಿ, ಶಿವು ಶಿರೂರ, ಸುರೇಶ ತೆಗ್ಗಿ, ಎಸ್‌.ಎಲ್. ಚಿನ್ನಣ್ಣವರ, ಎಂ.ಎನ್‌. ಗದಗ, ಬೆಂಗಳೂರಿನ ರಾಜೇಂದ್ರಪ್ರಸಾದ, ಮಹಾವೀರ ಎಲ್, ಯಲ್ಲಪ್ಪ ಕ್ಯಾದಿಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next