ಹುಬ್ಬಳ್ಳಿ: ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆಯೊಬ್ಬರು ಸಂಘದ ಸದಸ್ಯರ ಸುಮಾರು 10 ಲಕ್ಷ ರೂ.ಗೂ ಅಧಿಕ ಹಣ ಲಪಟಾಯಿಸಿ ಪಲಾಯನಗೈದಿರುವುದು ನಗರದಲ್ಲಿ ಬೆಳಕಿಗೆ ಬಂದಿದೆ.
ಗೋಕುಲ ರಸ್ತೆ ಆರ್.ಎಂ. ಲೋಹಿಯಾ ನಗರದಲ್ಲಿರುವ ಮಹಿಳಾ ಮಂಡಳ ಹಾಗೂ ಸ್ವ-ಸಹಾಯ ಸಂಘದ ಅಧ್ಯಕ್ಷೆ ಸದಸ್ಯೆಯರಿಗೆ ವಂಚಿಸಿದ್ದಾಳೆ ಎನ್ನಲಾಗಿದೆ.
ಸದಸ್ಯೆಯರು ಬ್ಯಾಂಕ್‌ನಿಂದ ಸಾಲ ಪಡೆಯಲು ಅಧ್ಯಕ್ಷೆಗೆ ಜವಾಬ್ದಾರಿ ವಹಿಸಿದ್ದರು. ಅಲ್ಲದೆ ಸಾಲ ಪಡೆದ ಕಂತಿನ ಹಣ ಪಾವತಿಸಲೆಂದು ಕೊಟ್ಟಿದ್ದರು ಎನ್ನಲಾಗಿದೆ. ಆದರೆ ಆಕೆ ಬ್ಯಾಂಕ್‌ಗೆ ಸಾಲದ ಹಣ ಪಾವತಿಸಿದ್ದಾಗಿ ತಾನೇ ಸಹಿ ಮಾಡಿದ್ದಲ್ಲದೆ ಸದಸ್ಯೆಯರ ಹೆಸರಿನಲ್ಲಿ ಬ್ಯಾಂಕ್‌ನಿಂದ ಪಡೆದ ಸಾಲದ ಹಣವನ್ನು ಕೊಡದೆ, ತನ್ನ ಸ್ವಂತಕ್ಕೆ ಬಳಸಿಕೊಂಡು, ಸದಸ್ಯೆಯರಿಗೆ ತಿಳಿಸದೆ ಈಗ ಪಲಾಯನಗೈದಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆ ಮೋಸ ಮಾಡಿದ ಕುರಿತು ಸಂಘದ 30ಕ್ಕೂ ಅಧಿಕ ಸದಸ್ಯೆಯರು ಹಳೇಹುಬ್ಬಳ್ಳಿ ಠಾಣೆಗೆ ತೆರಳಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಾಗ ಮಹಿಳೆಯ ಮೊಬೈಲ್ ಸಂಖ್ಯೆ ಲೊಕೇಷನ್ ಬೆಂಗಳೂರು ತೋರಿಸುತ್ತಿದೆ ಎನ್ನಲಾಗಿದೆ. ಮಹಿಳೆಯ ಪತಿ ಹಾವೇರಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರು ಠಾಣೆಯಲ್ಲಿ ದೂರು ಕೊಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
•2.28ಲಕ್ಷ ರೂ. ದಂಡ ಸಂಚಾರ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ಸೋಮವಾರ 1,271 ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು 2,28,050 ರೂ. ದಂಡ ವಸೂಲಿ ಮಾಡಿದ್ದಾರೆ.