ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಪಾಂಚಿಂಚೊಲಿ ಗ್ರಾಮ ಪಂಚಾಯ್ತಿಯಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಪೂರ್ಣವಾಗಿ ತೆರಿಗೆ ಪಾವತಿಸುವ ವ್ಯಕ್ತಿಗಳಿಗೆ ಪಂಚಾಯ್ತಿಯಿಂದಲೇ 10 ಲಕ್ಷ ರೂ. ಅಪಘಾತ ವಿಮೆ ನೀಡುವುದಾಗಿ ಘೋಷಣೆ ಮಾಡಿದೆ. ಇದನ್ನು ಪಂಚಾಯ್ತಿಯ ಎಲ್ಲ ಸದಸ್ಯರೂ ಅವಿರೋಧವಾಗಿ ಸಮ್ಮತಿಸಿದ್ದಾರೆ.
ಪಾಂಚಿಂಚೊಲಿಯಲ್ಲಿ ಒಟ್ಟು 5,947 ಜನಸಂಖ್ಯೆಯಿದೆ. ಈ ಪೈಕಿ 930 ತೆರಿಗೆ ಪಾವತಿದಾರರಿದ್ದಾರೆ. ಗ್ರಾಮಸ್ಥರು ತೆರಿಗೆ ಪಾವತಿ ಮಾಡುವಂತೆ ಪ್ರೇರೇಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀಕಾಂತ್ ಸಾಳುಂಕೆ ಹೇಳಿದ್ದಾರೆ.
ಪಂಚಾಯ್ತಿಯ ಅಧ್ಯಕ್ಷತೆಯನ್ನು ಗೀತಾಂಜಲಿ ಹನುಮಂತೆ ಹೊತ್ತಿದ್ದಾರೆ. ಅವರ ನೇತೃತ್ವದಲ್ಲಿ ತೆರಿಗೆ ಬಾಕಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಲಾಗಿತ್ತು. ಆಗ ಶ್ರೀಕಾಂತ್ ವಿಮೆ ಸೂತ್ರವನ್ನು ಮುಂದಿಟ್ಟಿದ್ದರು.