ಬೆಂಗಳೂರು: ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆ ಎಲ್ಲರ ಮನೆಗೆ ತಲುಪುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಸರಕಾರ ತಾಂತ್ರಿಕ ಕಾರಣದ ನೆಪ ನೀಡಿ ಯೋಜನೆಗೆ ಪರಿಗಣಿಸದಿರುವ ಅರ್ಜಿದಾರರ ಸಂಖ್ಯೆಯೇ ಸುಮಾರು 10 ಲಕ್ಷಕ್ಕೆ ತಲುಪಿದೆ. ಜತೆಗೆ, ಯೋಜನೆಗೆ ಅರ್ಜಿ ಸಲ್ಲಿಸಿದವರ ಪೈಕಿ 3,082 ಮಂದಿ ಮೃತಪಟ್ಟಿರುವುದರಿಂದ ಅವರನ್ನು ಸರಕಾರ ಅನರ್ಹ ಎಂದು ಪರಿಗಣಿಸಿದೆ.
ರಾಜ್ಯ ಸರಕಾರ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಸಹಿತ ನಾಲ್ಕನ್ನು ಅನುಷ್ಠಾನಗೊಳಿಸಿದೆ. ಈ ಪೈಕಿ ಗೃಹಲಕ್ಷ್ಮಿ ಅನುಷ್ಠಾನ ಹಾಗೂ ಜಾರಿಯಲ್ಲಿ ಮಾತ್ರ ಅಡಚಣೆಗಳು ಆಗುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ಯೋಜನೆಯ ಅರ್ಹ ಫಲಾನುಭವಿಗಳು ಇಂತಿಷ್ಟೇ ಮಂದಿ ಎಂದು ಲೆಕ್ಕ ಹಾಕುವುದಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಯೋಜನೆಯಲ್ಲಿ ಸಾಕಷ್ಟು ಗೊಂದಲ ಕಾಣಿಸಿಕೊಳ್ಳುತ್ತಿದೆ.
ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ 8ರಂದು ರಾಜ್ಯ ಸರಕಾರ ಮೈಸೂರಿನಲ್ಲಿ ಅಧಿಕೃತವಾಗಿ ಜಾರಿಗೊಳಿಸಿದೆ. ಆಗಸ್ಟ್‌ನಲ್ಲಿ 1.8 ಕೋಟಿ ಅರ್ಹ ಫಲಾನುಭವಿಗಳಿಗೆ ತಲಾ 2000 ರೂ. ನಂತೆ 2,169 ಕೋಟಿ ರೂ.ನ್ನು ಫಲಾನುಭವಿಗಳಿಗೆ ಸರಕಾರ ವರ್ಗಾವಣೆ ಮಾಡಿದೆ. ಆದರೆ ಅ.4ರ ದಾಖಲೆ ಪ್ರಕಾರ 93 ಲಕ್ಷ ಫಲಾನುಭವಿಗಳು ಮಾತ್ರ ಇದರ ಲಾಭ ಪಡೆದಿದ್ದಾರೆ. ಹೀಗಾಗಿ ಪ್ರತಿ ತಿಂಗಳೂ ಫಲಾನುಭವಿಗಳ ಹೊಂದಾಣಿಕೆಯ ಸಮಸ್ಯೆ ಕಾಣಿಸಿಕೊಂಡಿದೆ.
ಇಲಾಖೆಯೇ ಬಿಡುಗಡೆಗೊಳಿಸಿದ ಮಾಹಿತಿ ಪ್ರಕಾರ 3,082 ಅರ್ಜಿದಾರರು ಮರಣ ಹೊಂದಿದ್ದು, ಹೀಗಾಗಿ ಅವರನ್ನು ಯೋಜನಾ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದ್ದು, ಅವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. 5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. 2,17,536 ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೂಚನೆ ನೀಡಲಾಗಿದೆ.
1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ. ಬ್ಯಾಂಕ್‌ಗಳ ಮೂಲಕ ಫಲಾನುಭವಿಗಳ ಇ-ಕೆವೈಸಿ ಮಾಡಿಸಲು ಇಲಾಖೆ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟಂಬರ್ ತಿಂಗಳಲ್ಲಿ 1.14 ಕೋಟಿ ಫಲಾನುಭವಿಗಳಿಗೆ 2,280 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಗೊಂದಲಗಳನ್ನು ಪರಿಹರಿಸಲು ಆಗ್ರಹ
ಅಕ್ಟೋಬರ್ 4ರ ವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ವರ್ಗಾಯಿಸಲಾಗಿದೆ. ಹಿಂದಿನ ಎರಡು ತಿಂಗಳ ಸಂಖ್ಯೆಗೆ ಹೋಲಿಸಿದರೆ ಸುಮಾರು 15 ಲಕ್ಷ ಫಲಾನುಭವಿಗಳ ವ್ಯತ್ಯಾಸ ಕಂಡು ಬರುತ್ತಿದೆ. ಈ ಮಧ್ಯೆ ಸುಮಾರು 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಸಲು ಇಲಾಖೆ ತಾಂತ್ರಿಕ ಪರಿಹಾರವನ್ನು ಹುಡುಕುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಟಾಳ್ಕರ್ ಅವರು ಎರಡು ದಿನಗಳ ಹಿಂದೆ ಪ್ರಕಟಿಸಿದ ಅಂಕಿ-ಸಂಖ್ಯೆಗಳ ಪ್ರಕಾರ 9,44,155 ಅರ್ಜಿದಾರರಿಗೆ ಇದುವರೆಗೆ ಹಣ ತಲುಪಿಲ್ಲ. ಹೀಗಾಗಿ ಯೋಜನೆಯ ಜಾರಿಯಲ್ಲಿರುವ ಎಲ್ಲ ಗೊಂದಲಗಳನ್ನು ಆದಷ್ಟು ಬೇಗ ಪರಿಹರಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.