Advertisement

10 ಲಕ್ಷ ಉದ್ಯೋಗ ಭರ್ತಿ; ಸಕಾಲಿಕ ಕ್ರಮ

12:39 AM Jun 15, 2022 | Team Udayavani |

ದೇಶವಾಸಿಗಳಿಗೆ ಮಂಗಳವಾರ ಎರಡು ಶುಭ ಸುದ್ದಿಗಳು ಸಿಕ್ಕಿವೆ. ಮೊದಲನೆಯದು ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ. ಎರಡನೆಯದು, ರಕ್ಷಣ ಇಲಾಖೆಯ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥಕ್ಕೆ ಮುನ್ನುಡಿ ಸಿಕ್ಕಿರುವುದು. ವಿಶೇಷವೆಂದರೆ ಈ ಎರಡೂ ಸಂಗತಿಗಳು ಕೊರೊನಾ ಬಳಿಕ ಉದ್ಭವಿಸಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನಗಳಾಗಿವೆ.

Advertisement

ಸದ್ಯ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ 40 ಲಕ್ಷವಿದೆ. ಇದರಲ್ಲಿ 32 ಲಕ್ಷ ಮಂದಿ ಉದ್ಯೋಗದಲ್ಲಿದ್ದಾರೆ. ಉಳಿದ 8 ಲಕ್ಷ ಹುದ್ದೆಗಳು ಖಾಲಿಯಾಗಿವೆ. ಇದು 2020ರ ಅಂಕಿ ಅಂಶವಾಗಿದೆ. ಆ ಬಳಿಕ ನಿವೃತ್ತಿ ಸೇರಿದಂತೆ ಇತರ ಕಾರಣಗಳಿಂದಾಗಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಿರುತ್ತದೆ. ಕೇಂದ್ರ ಸರಕಾರವೂ ಈಗಾಗಲೇ ಹಲವಾರು ಬಾರಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನ ಮಾಡಿದೆ. ಆದರೂ ಸಂಪೂರ್ಣವಾಗಿ ತುಂಬಿಲ್ಲ ಎಂಬುದು ಗಮನಾರ್ಹ. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರ ಸರಕಾರದ ಎಲ್ಲ ಇಲಾಖೆಗಳಲ್ಲಿ ಪರಿಶೀಲನೆ ನಡೆಸಿದ್ದು, ಬಳಿಕ ಇನ್ನು 18 ತಿಂಗಳಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಇದು ಅತ್ಯಂತ ಸಕಾಲಿಕ ನಿರ್ಧಾರ. ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತೇ ಕೊರೊನಾದ ಸುಳಿಗೆ ಸಿಲುಕಿ ಜರ್ಝರಿತವಾಗಿದೆ. ಕಂಪೆನಿಗಳು ಮುಚ್ಚಿವೆ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇದರ ಇನ್ನೊಂದು ಮುಖವನ್ನು ನೋಡುವುದಾದರೆ ಪ್ರತೀ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಿದ್ದಾರೆ. ಇವರಿಗೆ ಸೂಕ್ತ ಹುದ್ದೆ ನೀಡುವ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ ಎಂದೇ ಹೇಳಬಹುದು. ಇದಕ್ಕೆ ಕೊರೊನಾ ಬಳಿಕ ಉಂಟಾಗಿರುವ‌ ಆರ್ಥಿಕ ಸಂಕಷ್ಟವೂ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು.

ಕೇಂದ್ರ ಸರಕಾರವೇ ನೀಡಿರುವ ಮಾಹಿತಿ ಪ್ರಕಾರ ಅಂಚೆ ಇಲಾಖೆ, ರಕ್ಷಣ ಇಲಾಖೆ, ರೈಲ್ವೆ ಮತ್ತು ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಪ್ರಮಾಣದ ಹುದ್ದೆಗಳು ಭರ್ತಿಯಾಗಿಲ್ಲ. ರೈಲ್ವೇಯಲ್ಲಿ 15 ಲಕ್ಷ ಮಂಜೂರಾದ ಹುದ್ದೆಗಳಿದ್ದರೆ, 2.3 ಲಕ್ಷ ಹುದ್ದೆಗಳು ಖಾಲಿಯಾಗಿವೆ. ಇನ್ನು ರಕ್ಷಣ(ಸಿವಿಲ್‌) ಇಲಾಖೆಯಲ್ಲಿ 6.33 ಲಕ್ಷ ಮಂಜೂರಾದ ಹುದ್ದೆಗಳಿದ್ದರೆ, 2.5 ಲಕ್ಷ ಹುದ್ದೆಗಳು ಭರ್ತಿಯಾಗಿಲ್ಲ. ಅಂಚೆ ಇಲಾಖೆಯಲ್ಲಿ 2.67 ಲಕ್ಷ ಮಂಜೂರಾದ ಹುದ್ದೆಗಳಿದ್ದು, 90 ಸಾವಿರ ಹುದ್ದೆಗಳು ಖಾಲಿಯಾಗಿವೆ. ಕಂದಾಯ ಇಲಾಖೆಯಲ್ಲಿ 1.78 ಮಂಜೂರಾದ ಹುದ್ದೆಗಳಿದ್ದು, 74 ಸಾವಿರ ಹುದ್ದೆಗಳು ಖಾಲಿ ಇವೆ. ಗೃಹ ಇಲಾಖೆಯಲ್ಲಿ 10.8 ಲಕ್ಷ ಮಂಜೂರಾದ ಹುದ್ದೆಗಳಿದ್ದು, 1.3 ಲಕ್ಷ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ.

ವಿಪಕ್ಷಗಳು ಆರೋಪಿಸಿದ ಹಾಗೆ ಇದು ಕೇವಲ ಕಣ್ಣೊರೆಸುವ ತಂತ್ರವಾಗಬಾರದು. ಪ್ರಧಾನಿ ಮೋದಿ ಅವರ ಸೂಚನೆಯಂತೆ, ಈ ಕೂಡಲೇ ಎಲ್ಲ ಸಂಬಂಧ ಪಟ್ಟ ಇಲಾಖೆಗಳು, ಬೇಗನೇ ಪ್ರಕ್ರಿಯೆ ನಡೆಸಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವತ್ತ ಗಮನ ಹರಿಸಬೇಕು. ಆಗ ಮಾತ್ರ ಇದು ಸಮಸ್ಯೆ ನಿವಾರಿಸುವ ಸಕಾಲಿಕ ಕ್ರಮವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next