ಬೆಂಗಳೂರು: ಏಳು ತಿಂಗಳಿಂದ ವೇತನ ಪಾವತಿಸದೆ ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಅಧಿಕಾರಿಗಳ ಧೋರಣೆಗೆ ನೊಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಪೌರಕಾರ್ಮಿಕ ಸುಬ್ರಹ್ಮಣ್ಯ ಅವರ ಕುಟುಂಬಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ನಗರದ ದತ್ತಾತ್ರೇಯ ವಾರ್ಡ್‌ನ ನಾಗಪ್ಪ ಸ್ಟ್ರೀಟ್‌ನಲ್ಲಿರುವ ಸುಬ್ರಹ್ಮಣ್ಯ ಅವರ ನಿವಾಸಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿದ ಡಾ.ಪರಮೇಶ್ವರ್, ಕುಟುಂಬ ಸದಸ್ಯರಿಗೆ ಸಾಂತ್ವನ
ಹೇಳಿದರು. ಬಳಿಕ ಮಾತನಾಡಿ, ಸುಬ್ರಹ್ಮಣ್ಯ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಕುಟುಂಬದ ಭವಿಷ್ಯದ ದೃಷ್ಟಿಯಿಂದ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ್ದೇವೆ. ಕುಟುಂಬಕ್ಕೆ ವಸತಿ ವ್ಯವಸ್ಥೆ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಸುಬ್ರಹ್ಮಣ್ಯ ಸಾವು ಬೇಸರ ಉಂಟುಮಾಡಿದೆ. ಪೌರಕಾರ್ಮಿಕರ ಆರು ತಿಂಗಳ ವೇತನ ಬಾಕಿ ಉಳಿಸಿಕೊಂಡಿರುವುದು ಗಮನಕ್ಕೆ ಬಂದಿದ್ದು, ಪೌರ ಕಾರ್ಮಿಕರಿಗೆ ಬಿಬಿಎಂಪಿಯಿಂದ ನೇರವಾಗಿ ಹಣ ಪಾವತಿಸುವ ವ್ಯವಸ್ಥೆ ಆಗಬೇಕು ಎಂದ ಡಿಸಿಎಂ, ವಾರದೊಳಗೆ ಎಲ್ಲ ಕಾರ್ಮಿಕರಿಗೂ ಬಾಕಿ ವೇತನ ಪಾವತಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸುವುದಾಗಿ ಭರವಸೆ ನೀಡಿದರು.
ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ ಸಂಖ್ಯೆಯ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ, ಗುತ್ತಿಗೆದಾರರು ಅಗತ್ಯಕ್ಕಿಂತ ಹೆಚ್ಚು ಮಂದಿಯನ್ನು ನೇಮಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ವೇತನ ವಿಳಂಬವಾಗಿದೆ.
ಇನ್ನುಮುಂದೆ ಯಾವುದೇ ಕಾರಣಕ್ಕೂ ವೇತನ ವಿಳಂಬ ಆಗದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೇಯರ್ ಆರ್.ಸಂಪತ್‌ರಾಜ್, ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ದತ್ತಾತ್ರೇಯ ವಾರ್ಡ್ ಪಾಲಿಕೆ ಸದಸ್ಯ ಸತ್ಯನಾರಾಯಣ ಹಾಗೂ ಇತರರು ಮೊದಲಾದವರು ಉಪಸ್ಥಿತರಿದ್ದರು.