Advertisement

ಕೋವಿಡ್ ಮಧ್ಯೆ 10 ದಿನಗಳ ಗಣೇಶ ಚತುರ್ಥಿ ಪ್ರಾರಂಭ

06:07 PM Aug 24, 2020 | Suhan S |

ಮುಂಬಯಿ, ಆ. 23: ಕೋವಿಡ್ ಮಹಾಮಾರಿ ಮತ್ತು ಲಾಕ್‌ಡೌನ್‌ ನಿರ್ಬಂಧಗಳ ಮಧ್ಯೆ ಮುಂಬಯಿ ಮತ್ತು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಶನಿವಾರ 10 ದಿನಗಳ ಗಣೇಶ ಚತುರ್ಥಿ ಉತ್ಸವ ಪ್ರಾರಂಭವಾಗಿದೆ. ಸರಕಾರದ ಕೆಲವು ಕೋವಿಡ್ ಮುನ್ನೆರಚ್ಚರಿಕಾ ಮಾರ್ಗಸೂಚಿಗಳಿಂದ ಪ್ರಸಕ್ತ ವರ್ಷ ಹಬ್ಬ ಕಳೆಗುಂದಿದೆ. ಗಣೇಶ ವಿಗ್ರಹದ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಯಾವುದೇ ಮೆರವಣಿಗೆಯನ್ನು ನಡೆಸದಂತೆ ಸರಕಾರ ನಿರ್ದೇಶಿಸಿದೆ.

Advertisement

ರಾಜ್ಯ ಗೃಹ ಇಲಾಖೆ ಸಾರ್ವಜನಿಕ ಗಣೇಶ ಮಂಡಲಗಳು ಪ್ರತಿಷ್ಠಾಪಿಸುವ ವಿಗ್ರಹಗಳ ಎತ್ತರ (ಗರಿಷ್ಠ) 4 ಅಡಿ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹಗಳಎತ್ತರ 2 ಅಡಿಗಳನ್ನು ಮೀರಬಾರದು ಎಂದು  ಮಾರ್ಗಸೂಚಿ ಹೊರಡಿಸಿದ ಪರಿಣಾಮ ಗಣಪತಿ ವಿಗ್ರಹ ಖರೀದಿಸುವವರ ಸಂಖ್ಯೆ ಸೀಮಿತವಾಗಿತ್ತು. ಒಟ್ಟಾರೆಯಾಗಿ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಗಣೇಶ ಹಬ್ಬದ ಉತ್ಸಾಹ ಕಡಿಮೆ ಇದೆ. ಸಣ್ಣ ಉದ್ಯಮದ ಮೇಲೆ ಪರಿಣಾಮ ಗಣೇಶ ಹಬ್ಬವನ್ನು ಸೀಮಿತಗೊಳಿಸಿರುವ ಹಿನ್ನೆಲೆ ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಹೂವಿನ ಮಾರಾಟಗಾರರು, ಸಿಹಿತಿಂಡಿ ಅಂಗಡಿಗಳು, ಅಲಂಕಾರದ ಅಂಗಡಿಗಳು, ಆಭರಣ ಅಂಗಡಿಗಳು ಮತ್ತು ಸಾಗಣೆದಾರರು ಸೇರಿದಂತೆ ಅನೇಕರ ಮೇಲೆ ಸಾಂಕ್ರಾಮಿಕವು ಪರಿಣಾಮ ಬೀರಿದೆ. ಆದಾಗ್ಯೂ, ದಾದರ್‌ನಂತಹ ಕೆಲವು ಜನಪ್ರಿಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲಂಕಾರ ಮತ್ತು ಪೂಜೆಯ ವಸ್ತುಗಳನ್ನು ಖರೀದಿಸಿದರು.

ಲಾಲ್‌ಬಾಗ್‌ ಚಾ ರಾಜಾ, ಜಿಎಸ್‌ಬಿ ಗಣೇಶ ಇಲ್ಲ  : ಮುಂಬಯಿಯ ಪ್ರಸಿದ್ದ ಸಾರ್ವಜನಿಕ ಗಣೇಶೋತ್ಸವ ಮಂಡಲವಾದ ಲಾಲ್‌ಬಾಗ್‌ ಚಾ ರಾಜಾ ಈ ವರ್ಷ ಆಚರಣೆಯನ್ನು ರದ್ದುಗೊಳಿಸಿದರೆ, ವಡಾಲಾದ ಜಿಎಸ್‌ಬಿ ಸೇವಾ ಸಮಿತಿ ಪೂಜೆಯನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ಬರುವ ಮಾ  ಗಣೇಶ ಚತುರ್ಥಿ ಸಂದರ್ಭ ನಡೆಸಲು ಯೋಜಿಸಿದೆ.

ಕೋವಿಡ್ ಮಹಾಮಾರಿ ಹಿನ್ನೆಲೆ ಗಣೇಶ ಪೆಂಡಾಲ್‌ಗ‌ಳ ಅಲಂಕಾರ ಸೀಮಿತವಾಗಿತ್ತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಥಳದಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮುಂಬಯಿ ಮತ್ತು ನೆರೆಯ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಶನಿವಾರ ಬೆಳಗ್ಗೆಯೂ ಭಾರೀ ಮಳೆಯ ನಡುವೆ ಜನರು ‘ಗಣಪತಿ ಬಪ್ಪ ಮೊರಿಯಾ’ ಘೋಷಗಳೊಂದಿಗೆ ಗಣೇಶನ ವಿಗ್ರಹವನ್ನು ತಮ್ಮ ಮನೆಗೆ ಬರಮಾಡಿಕೊಂಡರು. ಕೆಲವು ಪ್ರದೇಶಗಳಲ್ಲಿ ವಿನಾಯಕನನ್ನು ಸ್ವಾಗತಿಸಲು ಪಟಾಕಿ ಸಿಡಿಸಲಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ತಮ್ಮ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಗಣೇಶನನ್ನು ಸ್ವಾಗತಿಸಿದರು. ಕೆಲವು ಗಣ್ಯರು ಮತ್ತು ರಾಜಕಾರಣಿಗಳು ಕೂಡ ತಮ್ಮ ಮನೆಗಳಲ್ಲಿ ಗಣೇಶ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next