ಬೆಂಗಳೂರು: ಅಡಕೆ ಬೆಳೆ ಸಂಶೋಧನೆಗೆ ತಕ್ಷಣ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಅಡಕೆ ಸಹಕಾರ ಸಂಘ ಹಾಗೂ ಸಹಕಾರ ಮಹಾಮಂಡಳವು ಗುರುವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಅಡಕೆ ಬೆಳೆಯುವ ಪ್ರದೇಶಗಳ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಅಡಕೆ ಸೇರಿ ಹಲವು ರೀತಿಯ ಬೆಳೆಗಾರರು ರಾಜ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಸಿಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ, ಭೇದಭಾವ ಮರೆತು ಹೋರಾಟ ಮಾಡಬೇಕಿದೆ ಎಂದರು. ಅಡಕೆ ದಾಸ್ತಾನು ಮಾಡಲು ಗೋದಾಮುಗಳಿಗೆ ಬಾಡಿಗೆ ರಿಯಾಯಿತಿ ನೀಡಲು ಸರ್ಕಾರ ಸಿದ್ಧವಿದೆ. ಅದೇ ರೀತಿ ಅಡಕೆ ಬೆಳೆ ಸಂಶೋಧನೆಗೆ ತಕ್ಷಣ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಅಡಕೆ ಕಾರ್ಯಪಡೆ ರಚನೆಗೆ ಒತ್ತಾಯ: ಮಲೆನಾಡು, ಕರಾವಳಿ ಹಾಗೂ ಬಯಲುಸೀಮೆಯ ಹಲವು ಭಾಗಗಳಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, ರೈತರ ಆರ್ಥಿಕ ಶಕ್ತಿಯಾಗಿರುವ ಅಡಕೆ ಬೆಳೆ ಇಂದು ಹತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ರಾಜ್ಯ ಅಡಕೆ ಬೆಳೆಗಾರರ ಹಾಗೂ ಅಡಕೆ ಬೆಳೆಯ ಹಿತರಕ್ಷಣೆ ಕಾಯುವ ಸಲುವಾಗಿ ಹಿಂದೆ ನಮ್ಮ ಸರ್ಕಾರ ಅಡಕೆ ಕಾರ್ಯಪಡೆ ರಚಿಸಿತ್ತು. ಅದನ್ನು ಪುನಃ ರಚನೆ ಮಾಡಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದರು.
ಸಭೆಯಲ್ಲಿದ್ದ ಜನಪ್ರತಿನಿಧಿಗಳು ಇದನ್ನು ಬೆಂಬಲಿಸಿದರಲ್ಲದೆ, ಈ ಹಿಂದೆ ಅಡಕೆಯು ಆರೋಗ್ಯಕ್ಕೆ ಹಾನಿಕರ ಎಂಬುದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇದ್ದಾಗ ಹಲವಾರು ಸಂಶೋಧನೆಗಳು ನಡೆದಿವೆ. ಕ್ಯಾಂಪ್ಕೋ ಸಂಸ್ಥೆಯು ಸಿಪಿಸಿಆರ್‌ಎಂ ಮೂಲಕ ಸಂಶೋಧನೆ ನಡೆಸಿದ ವರದಿಯನ್ನು ಅಂದಿನ ಆರೋಗ್ಯ ಮಂತ್ರಿ ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆಯೇ ಕಾರ್ಯಪಡೆ ಕೂಡ ರಚನೆಯಾಗಿತ್ತು. ಸುಪ್ರೀಂಕೋರ್ಟ್‌ನಲ್ಲಿದ್ದ ಪ್ರಕರಣವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕೂ ನೆರವಾಗುತ್ತಿತ್ತು ಎಂದು ಜನಪ್ರತಿನಿಧಿಗಳು ಸಭೆಗೆ ಮನವರಿಕೆ ಮಾಡಿದರು.
ಇದೇ ವೇಳೆ ಎಲೆಚುಕ್ಕೆ ರೋಗ, ಅಡಕೆ ಆಮದಿನಿಂದ ಸ್ಥಳೀಯ ಅಡಕೆ ಬೆಳೆಗಾರರ ಮೇಲಾಗುತ್ತಿರುವ ಆರ್ಥಿಕ ದುಷ್ಪರಿಣಾಮ, ಅಡಕೆ ಬೆಲೆ ಏರಿಳಿತ ಸಮಸ್ಯೆ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಮೇಲ್ಮನೆ ಸದಸ್ಯರಾದ ಪ್ರಾಣೇಶ್, ಪರಶುರಾಮ್ ಸಿದ್ದಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಬೇಡಿಕೆಗಳು
* ರಾಜ್ಯದ ಅಡಕೆ ಬೆಳೆ ಮತ್ತು ಬೆಳಗಾರರ ಹಿತರಕ್ಷಣೆಗಾಗಿ ಕಾರ್ಯಪಡೆಯನ್ನು ಪುನಃ ರಚಿಸಬೇಕು
* ಎಪಿಎಂಸಿ ಗೋದಾಮುಗಳಲ್ಲಿ ಅಡಕೆ ಸಂರಕ್ಷಿಸಿಡಲು ವಿಧಿಸಲಾಗುವ ದರವನ್ನು ಕಡಿತ ಮಾಡಬೇಕು
* ಬೆಳೆ ಸಂಶೋಧನೆಗಾಗಿ ತಕ್ಷಣ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು, ಸೆಸ್ ರಿಯಾಯಿತಿ ನೀಡಬೇಕು.