ಬೆಂಗಳೂರು: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ 10 ಕೋಟಿ ರೂ. ನೆರವು ನೀಡಿದೆ.
ಅದರಂತೆ ಎಂಟು ಕೋಟಿ ರೂ. ನೆರವನ್ನು ನೇರವಾಗಿ ಫಲಾನುಭವಿಗಳಿಗೆ ನೀಡಲಿದ್ದು,ಉಳಿದ 2 ಕೋಟಿ ರೂ. ಮೊತ್ತದ ಚೆಕ್‌ಅನ್ನು ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶುಕ್ರವಾರ ನೀಡುವ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ದೇಣಿಗೆ ಸ್ವೀಕರಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಯೋಜನೆ ಸದಸ್ಯರು ಕೊಡಗಿನ ಸಂತ್ರಸ್ತರಿಗೆ 10 ಕೋಟಿ ರೂ. ನೆರವು ನೀಡುತ್ತಿದ್ದಾರೆ. ಇದರಲ್ಲಿ ಎಂಟು ಕೋಟಿ ರೂ.ಗಳನ್ನು ಅವರೇ ನೇರವಾಗಿ ಫಲಾನುಭವಿಗಳಿಗೆ ತಲಾ 65,000 ರೂ.ನಂತೆ ನೆರವು ನೀಡುತ್ತಿದ್ದಾರೆ. ಉಳಿದ 2 ಕೋಟಿ ರೂ.ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ ಎಂದರು.
ಬಳಿಕ ಪ್ರತಿಕ್ರಿಯಿಸಿದ ಡಿ. ಸುರೇಂದ್ರ ಕುಮಾರ್ ಅವರು, ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಯೋಜನೆ
ಸದಸ್ಯರ ಕುಟುಂಬದವರಿಗೆ ತಲಾ 65,000 ರೂ. ನೆರವನ್ನು ನೇರವಾಗಿ ನೀಡಲಾಗುವುದು ಎಂದು ತಿಳಿಸಿದರು. ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಉಪಸ್ಥಿತರಿದ್ದರು.