Advertisement

ಕಾಫಿನಾಡಿನಲ್ಲಿ 10 ಮಂದಿಗೆ ಕೋವಿಡ್ ದೃಢ

03:41 PM Jul 14, 2020 | Suhan S |

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕೋವಿಡ್ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಷ್ಟು ದಿನ ಸೋಂಕಿತರ ಸಂಪರ್ಕಕ್ಕೆ ಬಂದವರು, ಹೊರ ಜಿಲ್ಲೆ ಅಥವಾ ಹೊರ ಜಿಲ್ಲೆಗೆ ಭೇಟಿ ನೀಡಿ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ, ಕಳೆದೆರೆದು ದಿನಗಳಿಂದ ಸ್ಥಳೀಯರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

ಜಿಲ್ಲೆಯಲ್ಲಿ ಸೋಮವಾರ 10 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಚಿಕ್ಕಮಗಳೂರಿನಲ್ಲಿ 9 ಹಾಗೂ ಕಡೂರಿನಲ್ಲಿ 1 ಪ್ರಕರಣ ದೃಢಪಟ್ಟಿದೆ. 10 ಪ್ರಕರಣದಲ್ಲಿ ಇಬ್ಬರಿಗೆ ಮಾತ್ರ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಉಳಿದ 8 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕಿರುವುದು ಪತ್ತೆಯಾಗಿದೆ. ಸೋಂಕಿತರನ್ನು ನಗರದ ಕೋವಿಡ್‌-19 ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರು ನಗರದ ಗೌರಿ ಕಾಲುವೆ, ಉಪ್ಪಳ್ಳಿ, ರಾಮನಹಳ್ಳಿ, ವಿಜಯಪುರ, ಹರಿಯಪ್ಪ ಬೀದಿ ನಿವಾಸಿಯಲ್ಲಿ ಕಂಡು ಬಂದರೆ, ಒಂದು ಪ್ರಕರಣ ಹಾಸನ ಟ್ರಾವೆಲ್‌ ಹಿಸ್ಟರಿ ಹೊಂದಿದೆ. ಕಡೂರು ತಾಲೂಕಿನ ಕಾಳಮ್ಮ ಬೀದಿ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಮನೆಯನ್ನು ಜಿಲ್ಲಾಡಳಿತ ಸೀಲ್‌ಡೌನ್‌ ಮಾಡಿದ್ದು, ಸುತ್ತಮುತ್ತಲ ಪ್ರದೇಶವನ್ನು ನಿರ್ಬಂಧಿತ ವಲಯವೆಂದು ಘೋಷಿಸಿದೆ.

ಸೋಮವಾರ ದೃಢಪಟ್ಟಿರುವ 10 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ 152 ಕೊರೊನಾ ಸೋಂಕು ಪ್ರಕರಣಗಳು ಕಂಡು ಬಂದಿದ್ದು, ಸದ್ಯ 54 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸೋಂಕಿನಿಂದ ಗುಣಮುಖರಾಗಿ 9 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೂ 84 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡಿತೇ? :   ಈ ಹಿಂದೇ ಜಿಲ್ಲೆಯಲ್ಲಿ ದಿನಕ್ಕೆ ಒಂದೋ… ಎರಡೋ…. ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದರು… ಸೋಂಕಿತರ ಸಂಪರ್ಕದಿಂದ ಅಥವಾ ಹೊರ ಜಿಲ್ಲೆಗೆ ಹೋಗಿ ಬಂದವರಲ್ಲಿ ಕಂಡು ಬರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ದಿನಕ್ಕೆ ಎರಡಂಕಿ ದಾಡುತ್ತಿದೆ. ಅದರಲ್ಲೂ ಸೋಂಕಿತರ ಸಂಪರ್ಕಕ್ಕೆ ಬಾರದೆ…ಯಾವುದೇ ಜಿಲ್ಲೆಗೂ ಹೋಗದಿರುವರಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಸೋಂಕು ಸಮುದಾಯಕ್ಕೆ ಹರಡಿತೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಅದರಲ್ಲೂ ಸೋಮವಾರ ಪತ್ತೆಯಾಗಿರುವ 10 ಜನರಲ್ಲಿ 8 ಜನರಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿಯೇ ಇಲ್ಲ. ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇವರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡಿಬಿಟ್ಟಿತೇ? ಎಂಬ ಪ್ರಶ್ನೆ ಎದುರಾಗಿದೆ.

ಕೋವಿಡ್ ಗೆ ಎರಡು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ :  ಕೋವಿಡ್ ಸೋಂಕಿನಿಂದ ಸೋಮವಾರ 52 ವರ್ಷದ ವ್ಯಕ್ತಿ ಹಾಗೂ 72ವರ್ಷದ ವೃದ್ಧೆ ಸಾವನಪ್ಪಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ನಗರದ ಉಪ್ಪಳ್ಳಿ ಬಡಾವಣೆಯ 52 ವರ್ಷದ ವ್ಯಕ್ತಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅವರಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೇ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನಪ್ಪಿದ್ದಾರೆ. ನಗರದ ರಾಮನಹಳ್ಳಿ ಬಡಾವಣೆಯ

Advertisement

72ವರ್ಷದ ವೃದ್ಧೆ ಎರಡು ದಿನಗಳ ಹಿಂದೆ ತಮ್ಮ ನಿವಾಸದಲ್ಲಿ ಸಾವನಪ್ಪಿದ್ದರು. ವೃದ್ಧೆ ಸಾವನಪ್ಪಿದ ಹಿನ್ನೆಲೆಯಲ್ಲಿ ಆಕೆಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರಯೋಗಾಲಯದ ವರದಿ ಸೋಮವಾರ ಜಿಲ್ಲಾಡಳಿತ ಕೈ ಸೇರಿದ್ದು ಮೃತ ವೃದ್ಧೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ವೃದ್ಧೆಯ ಮನೆಯವರು ಹಾಗೂ ವೃದ್ಧೆಯ ಸಂಪರ್ಕಕ್ಕೆ ಬಂದವರಲ್ಲಿ ಆತಂಕ ಎದುರಾಗಿದ್ದು ವೃದ್ಧೆಯ ಮನೆಯವರು ಹಾಗೂ ಸಂಪರ್ಕಕ್ಕೆ ಬಂದವರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next