ಹತ್ತು ವರ್ಷದಲ್ಲಿ ಸುಮಾರು 50 ಪೌರಾಣಿಕ ಪ್ರಸಂಗಗಳನ್ನು 900 ಸಲ ಪ್ರದರ್ಶಿಸಿದ ದಾಖಲೆ ಈ ಸಂಘದ್ದು .ಕ್ಲಿಷ್ಟ ಪ್ರಸಂಗಗಳಾದ ಶ್ರೀ ದೇವಿ ಮಹಾತ್ಮೆ , ಶಬರಿಮಲೆ ಅಯ್ಯಪ್ಪ , ಶ್ರೀಕೃಷ್ಣ ಲೀಲೆ , ಬಪ್ಪನಾಡು ಕ್ಷೇತ್ರ ಮಹಾತ್ಮೆ , ಕಟೀಲು ಕ್ಷೇತ್ರ ಮಹಾತ್ಮೆ , ಶ್ರೀದೇವಿ ಬನಶಂಕರಿ ,ಶ್ರೀದೇವಿ ಲಲಿತೋಪಖ್ಯಾನ ಮುಂತಾದ ಪ್ರಸಂಗಗಳನ್ನು ಪ್ರದರ್ಶಿಸಿದೆ. 2015,ನ.28ರಂದು ತಂಡದ 100ನೇ ಪ್ರಯೋಗವಾಗಿ ಶ್ರೀದೇವಿ ಮಹಾತ್ಮೆ ಪ್ರದರ್ಶನವನ್ನು ಕಂಬಳಬೆಟ್ಟುವಿನಲ್ಲಿ ಪ್ರಸ್ತುತ ಪಡಿಸಿದ್ದರು . ಅಂದಿನ ಪ್ರದರ್ಶನದಲ್ಲಿ 12 ಮಂದಿ ಭಾಗವತರು ಹಾಗೂ 13 ಮಂದಿ ಹಿಮ್ಮೇಳ ಕಲಾವಿದರು ಭಾಗವಹಿಸಿ ದಾಖಲೆ ನಿರ್ಮಿಸಿದ್ದರು .ಇದೀಗ ಕು| ಕಾವ್ಯಾಶ್ರೀ ನಾಯಕ್ ಅಜೇರು ಭಾಗವತಿಕೆಯಲ್ಲೂ , ಶ್ರೀಪತಿ ನಾಯಕ್ ಅಜೇರು ಮದ್ದಳೆಯಲ್ಲೂ ,ರಾಮ್ ಪ್ರಕಾಶ್ ಕಲ್ಲೂರಾಯ ಮಧೂರು ಚೆಂಡೆವಾದನದಲ್ಲೂ ಸಹಕರಿಸುತ್ತಿದ್ದಾರೆ .
ಈ ತಂಡ ಕೇವಲ ಯಕ್ಷಗಾನ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಂಡಿಲ್ಲ .ಕಲಾವಿದರೆಲ್ಲ ತಮ್ಮ ಮುಖವರ್ಣಿಕೆಯನ್ನು ಸ್ವತಃ ಮಾಡುವ ಕೌಶಲ್ಯ ಹೊಂದಿದ್ದಾರೆ . ವೇಷಭೂಷಣಗಳ ಹೊಲಿಗೆ ಹಾಗೂ ಕುಸುರಿ ಕೆಲಸ ಹಾಗೂ ಪ್ರಸಾಧನ ಪರಿಕರಗಳನ್ನು ಕಲಾವಿದಯರೇ ಸ್ವತಃ ತಯಾರಿಸುವ ಪರಿಣತಿ ಹೊಂದಿದ್ದಾರೆ. ಬೌದ್ಧಿಕ ಮಟ್ಟ ವರ್ಧನೆಗಾಗಿ ಪ್ರತಿ ತಿಂಗಳು ತಾಳಮದ್ದಳೆ ಕೂಟವನ್ನು ನಡೆಸಿ ವಿದ್ಯಾರ್ಥಿಗಳು ಅರ್ಥಧಾರಿಗಳಾಗಿ ಬೆಳೆಯುವ ವಾತಾವರಣ ನಿರ್ಮಿಸಲಾಗಿದೆ . ಹತ್ತು ವರ್ಷದಲ್ಲಿ 225 ಮಂದಿ ವಿದ್ಯಾರ್ಥಿಗಳು ಸಂಘದ ಮೂಲಕ ಯಕ್ಷಗಾನ ಕಲಾವಿದರಾಗಿ ತಯಾರಾಗಿದ್ದಾರೆ . 1 ನೇ ತರಗತಿಯ ವಿದ್ಯಾರ್ಥಿಯಿಂದ ಹಿಡಿದು ಪದವಿ ತನಕದ ವಿದ್ಯಾರ್ಥಿಗಳು ಸಂಘದಲ್ಲಿದ್ದಾರೆ.ಪ್ರಸ್ತುತ ಸಂಘದಲ್ಲಿ 45 ವಿದ್ಯಾರ್ಥಿಗಳಿದ್ದು , ಅದರಲ್ಲಿ 25 ಮಂದಿ ಬಾಲಕಿಯರು. ಕರ್ನಾಟಕ ಸಂಘ ರತ್ನ ಪ್ರಶಸ್ತಿ ,ಡಾ|ಶಿವರಾಮ ಕಾರಂತ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗೆ ಪಾತ್ರವಾಗಿದೆ. ದಶಮಾನೋತ್ಸವದಂಗವಾಗಿ ಎ.28ರಂದು ನಿರಂತರ 16 ತಾಸು 60 ಕಲಾವಿದರ ಕೂಡುವಿಕೆಯಲ್ಲಿ ಮೂಲ್ಕಿ ಸಮೀಪದ ಎಸ್ ಕೋಡಿಯ ಷಣ್ಮುಖ ನಗರದಲ್ಲಿ “ಯಕ್ಷಕೌಮುದಿ – 2018′ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .ಈ ಸಂದರ್ಭದಲ್ಲಿ ಗುರುವಂದನೆ ಹಾಗೂ ಸಾಧಕರಿಗೆ ಯಕ್ಷ ಕೌಮುದಿ ಪ್ರಶಸ್ತಿ , ವಿನಾಯಕ ಯಕ್ಷಕಲಾ ಪ್ರಶಸ್ತಿ ಪ್ರದಾನಿಸಲಾಗುವುದು.
Advertisement
ಎಂ. ಶಾಂತರಾಮ ಕುಡ್ವ