ಕೋಲಾರ: ಗ್ರಾಮೀಣ ಪ್ರದೇಶದಲ್ಲಿ ಸುಸ್ಥಿರ ಕಸ ನಿರ್ವಹಣೆ ದೃಷ್ಟಿಯಿಂದ ಸ್ವಚ್ಛ ಮೇವ ಜಯತೆ ಯೋಜನೆಯಡಿ ಈ ವರ್ಷದಲ್ಲಿ ರಾಜ್ಯಾದ್ಯಂತ ಒಂದು ಸಾವಿರ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವ ಸಿ.ಬಿ.ಕೃಷ್ಣಬೈರೇಗೌಡ ತಿಳಿಸಿದರು.
ರಿಸೈಕಲ್ಗೆ ಕ್ರಮ: ಹಳ್ಳಿಗಳಲ್ಲಿ ಕೊಳಕು ಪರಿಸರ ದೂರ ಮಾಡಿ ನೈರ್ಮಲ್ಯ ಮೂಡಿಸಲು ಈ ಘಟಕ ಸಹಕಾರಿ ಎಂದ ಅವರು, ಇದರಲ್ಲಿ ಪ್ಲಾಸ್ಟಿಕ್, ಡಬ್ಬಿಗಳು, ಮತ್ತಿತರ ಒಣಕಸವನ್ನು ಸಂಗ್ರಹಿಸಿ ಅದನ್ನು ಖರೀದಿಸುವವರೊಂದಿಗೆ ಲಿಂಕ್ ಮಾಡಿ ರಿಸೈಕಲ್ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಗೊಬ್ಬರ ತಯಾರಿ: ಉಳಿದಂತೆ ಹಸಿ ಕಸವನ್ನು ಕಸ ಹಾಕಲು ಜಾಗವಿರುವ ರೈತರು ಸ್ವತಃ ನಿರ್ವಹಿಸಿ ಗೊಬ್ಬರ ಮಾಡಿಕೊಳ್ಳಬಹುದು, ಜಾಗ ಇಲ್ಲದವರಿಂದ ಗ್ರಾಮ ಪಂಚಾಯಿತಿಗಳು ಕಸ ಸ್ವೀಕರಿಸಿ ಅದನ್ನು ಗೊಬ್ಬರವಾಗಿ ಮಾರ್ಪಡಿಸಲಿವೆ. ಸಾರ್ವಜನಿಕರು, ಗ್ರಾಪಂ ಸಹಕಾರದಿಂದಾಗಿ ಉತ್ತನೂರಿನಲ್ಲಿ ಘಟಕ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಇದನ್ನು ಇತರೆ ಜಿಲ್ಲೆಯ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಸದಸ್ಯರನ್ನು ಕರೆಸಿ ತೋರಿಸಲಾಗುವುದು ಎಂದರು.
ಸ್ವಚ್ಛ ಮೇವ ಜಯತೆ ಹಾಗೂ ಸ್ವಚ್ಛ ಭಾರತ ಅಭಿಯಾನದಡಿ ಘನತ್ಯಾಜ್ಯ ಘಟಕಗಳ ಸ್ಥಾಪನೆಗೆ 20 ರಿಂದ 40 ಲಕ್ಷ ರೂ. ಅನುದಾನ ನೀಡಲಾಗುವುದು, ಜತೆಗೆ ಕಸ ನೀಡುವ ಮನೆಗಳವರಿಂದ ತಿಂಗಳಿಗೆ 10 ಅಥವಾ 20 ರೂ. ಪಡೆದು ನಿರ್ವಹಣೆ ಮಾಡಲಾಗುವುದು ಎಂದರು.
Advertisement
ಜಿಲ್ಲೆಯ ಉತ್ತನೂರಿನಲ್ಲಿ ಆರಂಭಿಸಲಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂತಹ 50 ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದ ಅವರು, 2 ತಿಂಗಳ ಹಿಂದೆ ಉತ್ತನೂರಿನಲ್ಲಿ ಆರಂಭಗೊಂಡಿರುವ ಘಟಕವನ್ನು ಮಾದರಿಯಾಗಿ ಪರಿಗಣಿಸಲಾಗಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಈಗಾಗಲೇ 7 ಘಟಕಗಳಿಗೆ ಮಂಜೂರಾತಿ ನೀಡಲಾಗಿದ್ದು, ಉಳಿದ 43 ಘಟಕಗಳಿಗೂ ಶೀಘ್ರ ಅನುಮತಿ ಸಿಕ್ಕಿ ಕಾರ್ಯ ಆರಂಭಿಸಲಿವೆ ಎಂದು ಹೇಳಿದರು.
Related Articles
Advertisement
ಘನತ್ಯಾಜ್ಯ ಘಟಕಗಳ ಸ್ಥಾಪನೆಗೆ ಜಾಗವಿಲ್ಲದಿದ್ದರೆ ಸರ್ಕಾರದಿಂದ ಮಂಜೂರು ಮಾಡಿಕೊಡಲಾಗುವುದು ಎಂದ ಸಚಿವರು, ಸಾರ್ವಜನಿಕರ ಸಹಕಾರ ಸಿಕ್ಕರೆ ಮಾತ್ರವೇ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಕೆಟ್ಟು ಕೊಳೆತು ಹೋಗುತ್ತಿದ್ದು, ಇದನ್ನು ತಪ್ಪಿಸಿ ಉತ್ತಮ ಪರಿಸರದ ಜತೆ ಆರೋಗ್ಯ ರಕ್ಷಣೆಗೂ ಇದು ಸಹಕಾರಿಯಾಗಲಿದೆ ಎಂದರು. ಉತ್ತನೂರು ಗ್ರಾಪಂ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಶೋಭಾರ ಅಸಭ್ಯ ಟ್ವೀಟ್‌ಗೆ ಸಚಿವ ತಿರುಗೇಟು:
ಮೈತ್ರಿ ಸರ್ಕಾರದ ಕುರಿತು ಅಸಭ್ಯವಾಗಿ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣಬೈರೇಗೌಡ ಗೆಲುವು ಮತ್ತು ಅಧಿಕಾರದ ಮದ ಈ ರೀತಿ ಮಾತನಾಡಿಸುತ್ತದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು. ತಾಲೂಕಿನ ಉತ್ತನೂರು, ಹನುಮನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ವೀಕ್ಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಪಕ್ಷ ಬಿಜೆಪಿಗೆ ಅಧಿಕಾರದ ಮದ ನೆತ್ತಿಗೇರಿದೆ, ಇದು ಸಾರ್ವಜನಿಕ ಜೀವನಕ್ಕೆ ಲಾಯಕ್ಕಾದ ಹೇಳಿಕೆಯಲ್ಲ ಎಂದು ತಿಳಿಸಿ, ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ಕೈ ಮುರಿತೀವಿ, ಕಾಲು ಮುರಿತೀವಿ, ನಾಲಿಗೆ ಸೀಳ್ತೀವಿ ಅಂತ ಹಿಂದೆಯೂ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು. ಈ ರೀತಿಯ ಹೇಳಿಕೆಗಳು ಇದು ಮೊದಲೇನಲ್ಲ ಎಂದು ಪ್ರತಿಕ್ರಿಯಿಸಿದರು. ಪಕ್ಷೇತರರಿಗೆ ಮಣೆ
ವರಿಷ್ಠರ ನಿರ್ಧಾರ: ಪಕ್ಷೇತರರಿಗೆ ಸಚಿವ ಸ್ಥಾನ ನೀಡಿರುವುದು ವರಿಷ್ಠರ ತೀರ್ಮಾನದಂತೆಯೇ, ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಇತರೆ ಸಚಿವಾಕಾಂಕ್ಷಿಗಳಿಗೂ ಅವಕಾಶ ಸಿಗಲಿದೆ ಎಂದು ತಿಳಿಸಿದರು. ಇದೀಗ ಪಕ್ಷ ಖಾಲಿ ಇರುವ ಸಚಿವ ಸ್ಥಾನ ಮಾತ್ರ ಭರ್ತಿ ಮಾಡಿದೆ, ಪುನಾರಚನೆ ಮಾಡಿಲ್ಲ ಎಂದ ಅವರು, ಪುನಾರಚನೆಗೆ ವರಿಷ್ಠರು ತೀರ್ಮಾನ ಮಾಡಿದರೆ ಸರಕಾರದ ಹಿತ ದೃಷ್ಟಿಯಿಂದ ಸಚಿವ ಸ್ಥಾನ ಬಿಟ್ಟುಕೊಡಲು ನಾವೂ ಸಿದ್ಧ ಎಂದು ಹೇಳಿದರು. ಅಧಿಕಾರ ಹಿಡಿಯಲು ಬಿಜೆಪಿ ವಾಮಮಾರ್ಗ: ಬಿಜೆಪಿಯವರು ನಾವು ಮೈತ್ರಿ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿಲ್ಲ ಎನ್ನುತ್ತಲೇ ಈ ಕೆಲಸವನ್ನು ವಾಮಮಾರ್ಗದಲ್ಲಿ ಮಾಡುತ್ತಿದ್ದಾರೆ, ಇವರಿಗೆ ಕೇಂದ್ರದ ಪಕ್ಷದ ವರಿಷ್ಠರೇ ರಾಜ್ಯ ಸರ್ಕಾರ ಉರುಳಿಸಲು ಸೂಚನೆ ನೀಡಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ಸರ್ಕಾರ ಬೀಳಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದರೂ, ಮೈತ್ರಿ ಸರ್ಕಾರದಲ್ಲಿ ನಾವು ಒಗ್ಗಟ್ಟಿನಿಂದ ಇದ್ದೇವೆ, ಸರ್ಕಾರ ಉರುಳಲು ನಾವು ಬಿಡೋದಿಲ್ಲ ಎಂದು ತಿಳಿಸಿದರು.