ಮುಂಬಯಿ: ಭಾರತೀಯ ನೋಟುಗಳಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ಒಂದು ರೂಪಾಯಿ ನೋಟು ಚಾಲ್ತಿಗೆ ಬಂದು ನ. 30ಕ್ಕೆ ಒಂದು ಶತಮಾನ ಪೂರ್ಣಗೊಳಿಸಿದೆ. 1917ರಲ್ಲಿ ಪ್ರಪಂಚ ಮೊದಲ ಮಹಾ ಸಮರದಲ್ಲಿ ಮುಳುಗಿದ್ದಾಗ ಭಾರತದಲ್ಲಿದ್ದ ಬ್ರಿಟಿಷರ ಆಳ್ವಿಕೆಗೆ ಆವರಿಗೆ ತಾನು ಮುದ್ರಿಸುತ್ತಿದ್ದ 1 ರೂ. ಮುಖಬೆಲೆಯ ಬೆಳ್ಳಿ ನಾಣ್ಯಗಳನ್ನು ಮುದ್ರಿಸಲು ಕೊಂಚ ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ, ಒಂದು ರೂಪಾಯಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರಲು ತೀರ್ಮಾನಿಸಲಾಗಿತ್ತು. ಹಾಗೆ, ಚಾಲ್ತಿಗೆ ಬಂದ ಮೊದಲ ಆವೃತ್ತಿಯ ಒಂದು ರೂಪಾಯಿ ನೋಟಿನಲ್ಲಿ ಬ್ರಿಟನ್‌ನ 5ನೇ ಮಹಾರಾಜಾ ಜಾರ್ಜ್ ಅವರ ಭಾವಚಿತ್ರವಿತ್ತು. 1926ರಲ್ಲಿ ಇದರ ಮುದ್ರಣವನ್ನು ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು. 1940ರಲ್ಲಿ ಇದು ಪುನಃ ಚಲಾವಣೆಗೆ ಬಂದು ಆನಂತರ, 1994ರಲ್ಲಿ ಮತ್ತೆ ಮುದ್ರಣ ಸ್ಥಗಿತವಾಗಿತ್ತು. ಆದರೆ, ಸಾರ್ವಜನಿಕರ ಆಗ್ರಹದ ಮೇರೆಗೆ 2015ರಲ್ಲಿ ಪುನಃ ಈ ನೋಟು ಚಾಲ್ತಿಗೆ ಬಂತು ಎಂದು ಆರ್‌ಬಿಐ ತಿಳಿಸಿದೆ.