Advertisement

1ಎಕ್ರೆಯಲ್ಲಿ ತಲೆ ಎತ್ತಲಿದೆ ಉದ್ಯಾನ; ಸಾಮೆತ್ತಡ್ಕವಿನ್ನು ಸ್ಮಾರ್ಟ್‌

01:58 PM Sep 19, 2017 | |

ನಗರ : ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಮೂರು ಪಾರ್ಕ್‌ಗಳಿದ್ದು, ಹೊಸದೊಂದು ಸೇರ್ಪಡೆ ಆಗಲಿದೆ. ಸಾಮೆತ್ತಡ್ಕ ಜಂಕ್ಷನ್‌ನಲ್ಲಿ ಸುಮಾರು 1 ಎಕ್ರೆ ವಿಸ್ತಾರದಲ್ಲಿ ಈ ಪಾರ್ಕ್‌ ತಲೆ ಎತ್ತಲಿದೆ.

Advertisement

ನಗರ ಬಸ್‌ ನಿಲ್ದಾಣದಿಂದ ಕೇವಲ ಎರಡು ಕಿ.ಮೀ. ದೂರದಲ್ಲಿದೆ ಸಾಮೆತ್ತಡ್ಕ. ಪುತ್ತೂರು ಪೇಟೆಗೆ ತಾಗಿಕೊಂಡೇ ಇದ್ದರೂ, ಅಷ್ಟೇನೂ ದೊಡ್ಡ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಹಾಗೆಂದು ಅತಿ ಹೆಚ್ಚು ಮನೆಗಳಿರುವ ಸ್ಥಳವಿದು. ಈ ನಿಟ್ಟಿನಲ್ಲಿ ಪಾರ್ಕ್‌ ನಿರ್ಮಿಸುವುದು ಹೆಚ್ಚು ಸೂಕ್ತ ಎನ್ನುವ ಧೋರಣೆಯಲ್ಲಿದೆ ನಗರಸಭೆ.

ಮೂಲತಃ ಇದು ಕರ್ನಾಟಕ ಹೌಸಿಂಗ್‌ ಬೋರ್ಡ್‌ಗೆ (ಕೆಎಚ್‌ಬಿ) ಸೇರಿದ ಜಾಗ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿವೇಶನ ನೀಡಿ, ಇನ್ನೊಂದಷ್ಟು ಜಾಗವನ್ನು  ಇತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಉಳಿದ ಸುಮಾರು 1 ಎಕ್ರೆ ಜಾಗವನ್ನು ಪಾರ್ಕ್‌ ನಿರ್ಮಾಣಕ್ಕೆಂದು ಮೀಸಲಿರಿಸಿತ್ತು. ಬಳಿಕ ಇದನ್ನು ನಗರಸಭೆಗೆ ಹಸ್ತಾಂತರಿಸಿದ್ದು, ಇದೀಗ ನಗರಸಭೆ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದೆ. ನಗರೋತ್ಥಾನದ 3ನೇ ಹಂತದಡಿ 1 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಇದರಲ್ಲಿ ಕಿಲ್ಲೆ ಮೈದಾನ ಅಭಿವೃದ್ಧಿ ಪಡಿಸಿ, ಉಳಿಕೆ ಹಣವನ್ನು ಸಾಮೆತ್ತಡ್ಕ ಪಾರ್ಕ್‌ಗೆ ವಿನಿಯೋಗಿಸಲಾಗುವುದು.

ಇತ್ತೀಚೆಗಷ್ಟೇ ಮಳೆನೀರಿನ ಜತೆ ಕೊಚ್ಚಿಕೊಂಡು ಹೋದ ಮಣ್ಣು ಪಕ್ಕದ ಮನೆಗಳಿಗೆ ನುಗ್ಗಿ ರಾದ್ಧಾಂತ ಸೃಷ್ಟಿಯಾಗಿತ್ತು. ಇದರಿಂದಾಗಿ ಮೊದಲಿಗೆ ಚರಂಡಿ ವ್ಯವಸ್ಥೆ ಸರಿಪಡಿಸಲು ತೀರ್ಮಾನಿಸಲಾಗಿದೆ. ತಡೆ ಬೇಲಿ ನಿರ್ಮಿಸಿದ ಅನಂತರ ಉಳಿದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ನಗರಸಭೆ ಎಇಇ ಪುರಂದರ ಅವರು ತಿಳಿಸಿದ್ದಾರೆ.

ಪಾರ್ಕ್‌ ಒಳಗಡೆ ಸಣ್ಣದೊಂದು ಓಪನ್‌ ಸ್ಟೇಜ್‌ ಇರಲಿದೆ. ಸಣ್ಣ ಕಾರ್ಯಕ್ರಮಗಳಿಗೆ ಇದನ್ನು ಬಳಕೆ ಮಾಡಬಹುದು. ಇದಲ್ಲದೆ ಹೂ-ಗಿಡಗಳನ್ನು ನೆಟ್ಟು ಸುಂದರ ಪಾರ್ಕ್‌ ತಲೆ ಎತ್ತಲಿದೆ. ಪಾರ್ಕ್‌ ನ ಸುತ್ತ ಸುಮಾರು 6 ಅಡಿ ವಿಸ್ತಾರದಲ್ಲಿ ಪಾಥ್‌ ವೇ ನಿರ್ಮಿಸಲಾಗುವುದು. ಬೆಳಗ್ಗೆ ಹಾಗೂ ಸಂಜೆ ಹೊತ್ತು ಸ್ಥಳೀಯ ನಿವಾಸಿಗಳು ಇಲ್ಲಿ ವಾಕಿಂಗ್‌ ಹೋಗಲು ಅನುಕೂಲವಾಗುವಂತೆ ರಚಿಸಲು ಚಿಂತನೆ ನಡೆಸಲಾಗಿದೆ.

Advertisement

ಮಕ್ಕಳ ಆಟಿಕೆ
ಪಾರ್ಕ್‌ ಎಂದಾಕ್ಷಣ ಹಿರಿಯರೇ ಓಡಾಡಿಕೊಂಡಿರುತ್ತಾರೆ ಎಂಬ ಆಲೋಚನೆ ಸುಳಿ ಯುತ್ತದೆ. ಆದರೆ ಇಲ್ಲಿ ಮಕ್ಕಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಮಕ್ಕಳಿಗಾಗಿ ಆಟಿಕೆ ವಸ್ತು ಗಳನ್ನು, ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕ ಪರಿ ಕರಗಳನ್ನು ಇಡಲಾಗುವುದು. ಸುತ್ತಮುತ್ತಲಿನ ಮನೆ ಗಳ ಮಕ್ಕಳು ಇಲ್ಲಿ ಬಂದು ಹೊಸ ವಾತಾವರಣಕ್ಕೆ ತೆರೆದುಕೊಳ್ಳಲು ಇದು ಸೂಕ್ತ ಸ್ಥಳವಾಗಲಿದೆ.

ಇದು ನಗರದ ನಾಲ್ಕನೇ ಪಾರ್ಕ್‌
ಮೊಟ್ಟೆತ್ತಡ್ಕ, ನೆಲ್ಲಿಕಟ್ಟೆ, ನಗರಸಭೆ ಸಮೀಪ ಒಟ್ಟು ಮೂರು ಪಾರ್ಕ್‌ಗಳಿವೆ. ಮೊಟ್ಟೆತ್ತಡ್ಕ ಪಾರ್ಕ್‌ ಬಿಟ್ಟರೆ ಉಳಿದ ಎರಡೂ ಪಾರ್ಕ್‌ಗಳ ಸ್ಥಿತಿ ಉತ್ತಮವಾಗಿಲ್ಲ. ನಗರಸಭೆ ಸಮೀಪವಿರುವ ಚಿಣ್ಣರ ಪಾರ್ಕ್‌ಗೆ ಮಕ್ಕಳೇ ಬರುತ್ತಿಲ್ಲ. ಇದನ್ನು ಅಭಿವೃದ್ಧಿಪಡಿಸಬೇಕು ಎಂಬ ನೆಲೆಯಲ್ಲಿ ಹಮ್ಮಿಕೊಂಡ ಹಲವು ಯೋಜನೆ ವಿಫಲವಾದವು. ಇದೀಗ ನಾಲ್ಕನೇ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದ್ದು, ಸವಾಲು ಹಲವಿವೆ. ಸ್ವತ್ಛತೆ, ನಿರ್ವಹಣೆ ನಗರಸಭೆ ಜವಾಬ್ದಾರಿಯಾದರೂ, ಪಾರ್ಕನ್ನು ಬಳಸಿಕೊಳ್ಳುವಲ್ಲಿ ನಾಗರಿಕರೇ ಮುಂದೆ ಬರಬೇಕು. ಮಾತ್ರವಲ್ಲ ಪಾರ್ಕ್‌ನ ನೈಜ ಉದ್ದೇಶವನ್ನು ಅರ್ಥ ಮಾಡಿಕೊಂಡು, ಜನಸಾಮಾನ್ಯರಿಗೆ ತಲುಪಿಸಬೇಕಾಗಿದೆ.

ಉಳಿಕೆ ಹಣದ ಬಳಕೆ
ನಗರೋತ್ಥಾನದಡಿ ಸಾಮೆತ್ತಡ್ಕದಲ್ಲಿ ಪಾರ್ಕ್‌ ನಿರ್ಮಿಸಲಾಗುವುದು. ಪುತ್ತೂರು ಕಿಲ್ಲೆ ಮೈದಾನವನ್ನು ಅಭಿವೃದ್ಧಿ ಮಾಡಿ, ಉಳಿಕೆ ಹಣವನ್ನು ಇದಕ್ಕೆ ಬಳಸಿಕೊಳ್ಳಲಾಗುವುದು. ಒಂದು ವೇಳೆ ಅನುದಾನ ಕಡಿಮೆಯಾದರೆ, ಇತರ ಅನುದಾನವನ್ನು ವಿನಿಯೋಗಿಸಿಕೊಳ್ಳಲಾಗುವುದು. ಪುತ್ತೂರು ನಗರದ ಸಂಪೂರ್ಣ ಅಭಿವೃದ್ಧಿ ದೃಷ್ಟಿಯಿಂದ ಹಮ್ಮಿಕೊಂಡ ಹಲವು ಯೋಜನೆಗಳಲ್ಲಿ ಇದೂ ಒಂದು.
ಜಯಂತಿ ಬಲ್ನಾಡು 
ಅಧ್ಯಕ್ಷೆ , ಪುತ್ತೂರು ನಗರಸಭೆ

ಹೊಸ ವಾತಾವರಣ
ಜನರಿಗೆ ಹೊಸ ವಾತಾವರಣ ತೆರೆದುಕೊಡುವ ಪಾರ್ಕ್‌, ಸಾಮೆತ್ತಡ್ಕದಲ್ಲಿ ತಲೆ ಎತ್ತಲಿದೆ. ಆರೋಗ್ಯದ ದೃಷ್ಟಿಯಿಂದಲೂ ಪಾರ್ಕ್‌ ಉತ್ತಮ. ಸಾಮೆತ್ತಡ್ಕ ಪರಿಸರದಲ್ಲಿ ಹೆಚ್ಚಿನ ಮನೆಗಳಿದ್ದು, ಪಾರ್ಕ್‌ ನಿರ್ಮಿಸಿದರೆ
ಉತ್ತಮ ಎಂಬ ಅಭಿಪ್ರಾಯವನ್ನು ಸಾಮಾನ್ಯ ಸಭೆಯಲ್ಲಿ ಇಡಲಾಗಿತ್ತು. ಇದೀಗ ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ರೂಪಾ ಶೆಟ್ಟಿ,
ಪೌರಾಯುಕ್ತೆ, ನಗರಸಭೆ

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next