ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ ಎಚ್ಚರ. ಮುಂದಿನ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆಯುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಿಗದಿತ ಸಮಯಕ್ಕಿಂತ ಒಂದು ನಿಮಿಷ ತಡವಾಗಿ ಹೋದರೂ ಪರೀಕ್ಷೆ ಬರೆಯಲು ಅವಕಾಶ ಸಿಗುವುದಿಲ್ಲ!
ಹೌದು. ಪರೀಕ್ಷಾ ಕೊಠಡಿಗೆ ನಿಗದಿತ ಸಮಯಕ್ಕಿಂತ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪ್ರವೇಶ ನಿಷೇಧಿಸಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಆದೇಶದ ಮೇರೆಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ ಬೋಪಣ್ಣ ಅವರು ಇಂತಹದ್ದೊಂದು ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ. ನಿಗದಿತ ದಿನಗಳಲ್ಲಿ ಬೆಳಗ್ಗೆ 9.30ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, 9.30ರ ನಂತರ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಕಡ್ಡಾಯ ಪ್ರವೇಶ ನಿಷೇಧ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಹಿಂದೆ ಬೆಳಗ್ಗೆ 9.30ಕ್ಕೆ ಪರೀಕ್ಷೆ ಆರಂಭದ ಸಮಯ ಇದ್ದರೂ ಪರೀಕ್ಷೆ ಆರಂಭವಾಗಿ ಅರ್ಧ ಗಂಟೆ ಒಳಗೆ ಅಂದರೆ 10 ಗಂಟೆಯವರೆಗೂ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿ ಬರೆಯಲು ಅವಕಾಶ ನೀಡಲಾಗುತ್ತಿತ್ತು. ಆದರೆ, 2017ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆಯುವ ಪರೀಕ್ಷೆಯನ್ನು ಇನ್ನಷ್ಟು ಪಾರದರ್ಶಕವಾಗಿ ನಡೆಸಲು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಅವಧಿ ಆರಂಭವಾದ ನಂತರ ಬರುವವರಿಗೆ ಪರೀಕ್ಷಾ ಕೊಠಡಿ ಪ್ರವೇಶ ನಿರ್ಬಂಧದಂತಹ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯಶೋದಾ ಬೋಪಣ್ಣ ಹೇಳಿದ್ದಾರೆ.
ಮಾ. 30ರಿಂದ ಏ. 12ರವರೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಪ್ರತಿ ದಿನ ಬೆಳಗ್ಗೆ 9.30ರಿಂದ ಪರೀಕ್ಷೆ ಆರಂಭವಾಗುತ್ತದೆ. ಬೆಳಗ್ಗೆ 9.15ಕ್ಕೆ ಪರೀಕ್ಷಾ ಕೊಠಡಿಗಳಿಗೆ ವಿದ್ಯಾರ್ಥಿಗಳು ಹಾಜರಾಗಿ ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಆಸೀನರಾಗಲು ಮೊದಲ ಲಾಂಗ್ ಬೆಲ್ ಮಾಡಲಾಗುತ್ತದೆ. ಲಾಂಗ್ ಬೆಲ್ ಆದ ನಂತರ ಪರೀಕ್ಷಾ ಅಭ್ಯರ್ಥಿಗಳು ಹಾಗೂ ಕೊಠಡಿ ಮೇಲ್ವಿಚಾರಕರು ನಿಗದಿಪಡಿಸಿದ ಪರೀಕ್ಷಾ ಕೊಠಡಿಗೆ ಹಾಜರಾಗಬೇಕು. ಬಳಿಕ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಯ ಬುಕ್‌ಲೆಟ್ ವಿತರಿಸುತ್ತಾರೆ. 9.25ಕ್ಕೆ ಎರಡನೇ ಲಾಂಗ್ ಬೆಲ್ ಮಾಡಲಾಗುತ್ತದೆ. ನಂತರ ಪರೀಕ್ಷಾ ಕೊಠಡಿವಾರು ಮುಖ್ಯ ಅಧೀಕ್ಷಕರು ಮತ್ತು ಕಸ್ಟೋಡಿಯನ್‌ಗಳು ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಮೇಲ್ವಿಚಾರಕರಿಗೆ ವಿತರಿಸುತ್ತಾರೆ.
9.30ಕ್ಕೆ ಸರಿಯಾಗಿ ಮೂರನೇ ಲಾಂಗ್ ಬೆಲ್ ಮಾಡಲಾಗುತ್ತದೆ. ಆಗ ಮೇಲ್ವಿಚಾರಕರು ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು. ಮೂರನೇ ಲಾಂಗ್ ಬೆಲ್ ಆದ ಬಳಿಕ ಅಂದರೆ 9.30ರ ನಂತರ ಪರೀಕ್ಷಾ ಕೊಠಡಿಗಳಿಗೆ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯುವುದಿಲ್ಲ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
9.15ಕ್ಕೆ ಮೊದಲ ಬೆಲ್-ವಿದ್ಯಾರ್ಥಿಗಳು ಕೊಠಡಿಗೆ ಪ್ರವೇಶ
9.25ಕ್ಕೆ 2ನೇ ಬೆಲ್-ಮೇಲ್ವಿಚಾರಕರಿಗೆ ಪ್ರಶ್ನೆಪತ್ರಿಕೆ ವಿತರಣೆ
9.30ಕ್ಕೆ 3ನೇ ಬೆಲ್-ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಣೆ.
9.30ರ ನಂತರ ಯಾವುದೇ ವಿದ್ಯಾರ್ಥಿಗೆ ಕೊಠಡಿಗೆ ಪ್ರವೇಶ ಇಲ್ಲ