Advertisement

Cauvery water: ಕೊಳೆಗೇರಿಗಳಿಗೆ ನಿತ್ಯ 1 ಲಕ್ಷ ಲೀಟರ್‌ ಕಾವೇರಿ ನೀರು

10:01 AM Mar 25, 2024 | Team Udayavani |

ಬೆಂಗಳೂರು: ಬಡ ಜನರು ಹೆಚ್ಚಾಗಿ ವಾಸಿಸುವ ಕೊಳಚೆ ಪ್ರದೇಶ ಹಾಗೂ ಜನಸಾಂದ್ರತೆ ಹೆಚ್ಚಿರುವ ಏರಿಯಾಗಳಿಗೆ ಪ್ರತಿನಿತ್ಯ 1 ಲಕ್ಷ ಲೀಟರ್‌ ಕುಡಿಯಲು ಕಾವೇರಿ ನೀರನ್ನು ಉಚಿತವಾಗಿ ಪೂರೈಸಲು ಜಲಮಂಡಳಿ ನಿರ್ಧರಿಸಿದೆ.

Advertisement

ನಗರದ ನಾಯಂಡಹಳ್ಳಿ – ಪಂತರಪಾಳ್ಯದ ಅಂಬೇ ಡ್ಕರ್‌ ಸ್ಲಂ, ಗಾಂಧಿನಗರ ಮತ್ತು ಬಂಗಾರಪ್ಪ ನಗರ ಸ್ಲಂಗಳಿಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿ, ಕುಡಿಯುವ ನೀರಿನ ಸರಬರಾಜು ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ವಿ.ರಾಮ್‌ ಪ್ರಸಾತ್‌ ಮನೋಹರ್‌ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಬಹುತೇಕ ಪ್ರದೇಶಗಳಿಗೆ ಭೇಟಿ ನೀಡಿ, ನೀರಿನ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ಹೇಳಿದರು.

ಅಂಬೇಡ್ಕರ್‌ ಕೊಳಚೆ ಪ್ರದೇಶದ 34 ಬ್ಲಾಕ್‌ಗಳಲ್ಲಿ 1,088 ಮನೆಗಳಿದ್ದು, 8 ಸಾವಿರ ಜನರು ವಾಸಿಸುತ್ತಿದ್ದಾರೆ. ಸ್ಲಂ ಬೋರ್ಡ್‌ನಿಂದ ಕೊರೆಸಲಾಗಿದ್ದ ಬೋರ್‌ವೆಲ್‌ಗ‌ಳಲ್ಲಿ ನೀರಿನ ಮಟ್ಟ ಕುಸಿದಿದೆ. 22 ಟ್ಯಾಂಕ್‌ಗಳನ್ನು ಈ ಪ್ರದೇಶದ ವಿವಿಧೆಡೆ ಇಡಲಾಗಿದೆ. ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪ್ರತಿ ದಿನ ಎರಡು ಬಾರಿ ಟ್ಯಾಂಕ್‌ಗಳಿಗೆ ನೀರು ತುಂಬಿಸಲಾಗುತ್ತಿದೆ. ಪ್ರತಿ ದಿನ 1 ಲಕ್ಷ ಲೀಟರ್‌ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಕಳೆದ 100 ದಿನಗಳಲ್ಲಿ ನಗರದಲ್ಲಿ ತಲೆದೂರಿರುವ ಜಲಕ್ಷಾಮ ನಿಯಂತ್ರಿಸುವ ನಿಟ್ಟಿನಲ್ಲಿ ಜಲಮಂಡಳಿ ಅಧ್ಯಕ್ಷನಾಗಿ ಬಹುತೇಕ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನರೊಂದಿಗೆ ಚರ್ಚಿಸಿ ನೀರಿನ ಅಭಾವವನ್ನು ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇನೆ. ನಗರದ ಹೊರ ವಲಯದ 110 ಹಳ್ಳಿಗಳಲ್ಲಿ ಕಾವೇರಿ ನೀರಿನ ಸಂಪರ್ಕವಿಲ್ಲ. ಈ ಪ್ರದೇಶಗಳು ಬೋರ್‌ವೆಲ್‌ಗ‌ಳನ್ನೇ ಅವಲಂಬಿಸಿವೆ. ಇಂತಹ ಕಡೆ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಬಿಡಬ್ಲ್ಯುಎಸ್‌ಎಸ್‌ಬಿ-ಬಿಬಿಎಂಪಿ ಜಂಟಿಯಾಗಿ ನೀರು ಪೂರೈಕೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next