Advertisement

ಉತ್ತರ ಕರ್ನಾಟಕಕ್ಕೆ ಚಾಮರಾಜನಗರದಿಂದ 1 ಲಕ್ಷ ಚಪಾತಿ ತಯಾರಿ

10:53 AM Aug 19, 2019 | sudhir |

ಚಾಮರಾಜನಗರ: ನೆರೆ ಹಾವಳಿಯಿಂದ ನೊಂದ ಉತ್ತರ ಕರ್ನಾಟಕದ ಸಂತ್ರಸ್ಥರಿಗೆ ನೆರವಾಗುವಲ್ಲಿ ಗಡಿ ಜಿಲ್ಲೆ ಚಾಮರಾಜನಗರದ ಜನತೆ ಹಿಂದೆ ಬಿದ್ದಿಲ್ಲ. ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಗಾನ ಕವಿ ಫೌಂಡೇಶನ್ ವತಿಯಿಂದ 1 ಲಕ್ಷ ಚಪಾತಿಗಳನ್ನು ತಯಾರಿಸಲಾಗುತ್ತಿದೆ.

Advertisement

ನಗರದ ಶಂಕರಪುರ ಬಡಾವಣೆಯ ರಾಮಂದಿರದಲ್ಲಿ ಚಪಾತಿ ತಯಾರಿಕೆ ಕಾರ್ಯ ನಡೆಯುತ್ತಿದ್ದು, ಪತಂಜಲಿ ಯೋಗ ಶಿಕ್ಷಣ ಸಮಿತಿಯ 50 ಮಹಿಳೆಯರು ಹಾಗೂ ನಗರದ ವಿವಿಧ ಶಾಲಾ ಕಾಲೇಜಿನ, ವಿದ್ಯಾರ್ಥಿಗಳು, ಸಂಘ ಸಂಸ್ಥೆ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

1ಲಕ್ಷ ಚಪಾತಿಗಳನ್ನು ಎಣ್ಣೆ ಹಾಕದೆ ತಯಾರಿಸಿ ಅದನ್ನು ಸುರಕ್ಷಿತವಾಗಿ ಸಂರಕ್ಷಿಸಿ ಸೋಮವಾರ ನಗರದಿಂದ ಹೊರಟು, ಉತ್ತರ ಕರ್ನಾಟಕದ ಸಂತ್ರಸ್ಥರಿಗೆ ವಿತರಿಸಲು ನಿರ್ಧರಿಸಲಾಗಿದೆ. ಇದುವರೆಗೆ 75 ಸಾವಿರ ಚಪಾತಿಗಳನ್ನು ತಯಾರಿಸಲಾಗಿದೆ.

ಶಂಕರಪುರ ರಾಮಮಂದಿರದ ದೊಡ್ಡ ಹಾಲ್‌ನಲ್ಲಿ ಚಪಾತಿ ತಯಾರಿಕೆ ಕಾರ್ಯ ನಡೆಯುತ್ತಿದೆ. ಕೆಲವರು ಚಪಾತಿ ಹಿಟ್ಟು ಕಲೆಸಿ, ನಾದಿದರೆ, ಇನ್ನು ಕೆಲವರು ಅದನ್ನು ಲಟ್ಟಣಿಗೆಯಲ್ಲಿ ಒತ್ತುತ್ತಿದ್ದಾರೆ. ಇನ್ನು ಕೆಲವರು ಗ್ಯಾಸ್ ಒಲೆಗಳಲ್ಲಿ ಚಪಾತಿಯನ್ನು ಕಾಯಿಸಿಕೊಡುತ್ತಿದ್ದಾರೆ.

ಮಂದಿರದ ಎರಡು ಕಡೆ ಬೇಯಿಸಿದ ಚಪಾತಿಯನ್ನು ಇಡಲಾಗುತ್ತಿದೆ. ಕವರ್‌ನಲ್ಲಿ ಪ್ಯಾಕ್ ಮಾಡಿ, ರವಾನಿಸಲು ಚಿಕ್ಕಚಿಕ್ಕ ಬಾಕ್‌ಸ್ಗಳನ್ನು ಸಂಗ್ರಹಿಸಿ ಇಡಲಾಗಿದೆ. ಭಾನುವಾರದವರೆಗೆ 1 ಲಕ್ಷ ಚಪಾತಿಗಳನ್ನು ತಯಾರಿಸಿ ಸೋಮವಾರ ವರ್ತಕರ ಸಹಕಾರದೊಂದಿಗೆ ಉತ್ತರ ಕರ್ನಾಟಕಕ್ಕೆ ರವಾನಿಸಲಾಗುತ್ತದೆ ಎಂದು ಆಯೋಜಕ ವಿಶ್ವಕುಮಾರ್ ತಿಳಿಸಿದ್ದಾರೆ.

Advertisement

ಗಾನಕವಿ ಫೌಂಡೇಷನ್ ಅಧ್ಯಕ್ಷ ವಿಶ್ವಕುಮಾರ್, ವರ್ತಕರ ಸಂಘದ ಕೆ.ಎಸ್.ರವಿಶಂಕರ್, ಕಾರ್ಯದರ್ಶಿ ಕೆ.ಎಸ್.ಚಿದಾನಂದ ಗಣೇಶ್, ಪತಂಜಲಿ ಯೋಗಶಿಕ್ಷಣಸಮಿತಿಯ ಯೋಗನಿಜಗುಣ, ರಾಜೇಶ್, ಯೋಗ ಪ್ರಕಾಶ್ ರೇಣುಕಾ, ಸುವರ್ಣ ರಾಧಾಕೃಷ್ಣ ವೀರಶೈವ ನೌಕರರಸಂಘದ ಅಧ್ಯಕ್ಷ ಪರಮೇಶ್ವರಪ್ಪ ಮತ್ತಿತರರು ಈ ಸತ್ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಭಾರಿ ಪ್ರವಾಹದಿಂದ ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳು ಜಲಾವೃತವಾಗಿವೆ. ಅಲ್ಲಿನ ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಗಡಿ ಜಿಲ್ಲೆ ಚಾಮರಾಜನಗರದ ಜನತೆ ಕೂಡ ನಿಮ್ಮೊಂದಿಗಿದ್ದೇವೆ ಎಂಬ ಅಭಿಯಾನದೊಂದಿಗೆ ಒಂದು ಲಕ್ಷ ಚಪಾತಿಗಳನ್ನು ತಯಾರಿಸಿ, ಫಾಯಿಲ್‌ಕವರ್‌ನಲ್ಲಿ ಪ್ಯಾಕ್ ಮಾಡಿ ಅಲ್ಲಿನ ಸಂತ್ರಸ್ತರಿಗೆ ಖುದ್ದಾಗಿ ತಲುಪಿಸುತ್ತಿದ್ದೇವೆ.
- ಬಿ. ವಿಶ್ವಕುಮಾರ್, ಗಾನಕವಿ ಫೌಂಡೇಶನ್

Advertisement

Udayavani is now on Telegram. Click here to join our channel and stay updated with the latest news.

Next