ಹೊಸದಿಲ್ಲಿ: ದೇಶದಲ್ಲಿ 100ರಷ್ಟಿದ್ದ ಕೋವಿಡ್ ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರಲು ಬರೋಬ್ಬರಿ 64 ದಿನಗಳು ತಗಲಿವೆ. ಅಂದರೆ, ಅಮೆರಿಕ, ಸ್ಪೇನ್, ಇಟಲಿ ಸೇರಿದಂತೆ ಹಲವು ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಲಕ್ಷಕ್ಕೆ ತಲುಪಲು ದೀರ್ಘ ಸಮಯ ತೆಗೆದುಕೊಂಡಿದ್ದು, ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ.
ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಕೇವಲ 25 ದಿನಗಳಲ್ಲಿ 100ರಿಂದ 1 ಲಕ್ಷಕ್ಕೇರಿದರೆ, ಸ್ಪೇನ್ ನಲ್ಲಿ 30 ದಿನಗಳಲ್ಲಿ 1 ಲಕ್ಷ ಸೋಂಕಿತರು ಪತ್ತೆಯಾಗಿದ್ದರು. ಜರ್ಮನಿಯಲ್ಲಿ 35 ದಿನ ಗಳು, ಇಟಲಿಯಲ್ಲಿ 36, ಫ್ರಾನ್ಸ್‌ನಲ್ಲಿ 39 ಹಾಗೂ ಯು.ಕೆ.ಯಲ್ಲಿ 42 ದಿನಗಳಲ್ಲಿ ಸೋಂಕಿ ತರ ಸಂಖ್ಯೆ ಒಂದು ಲಕ್ಷಕ್ಕೇರಿತ್ತು. ಈ ಎಲ್ಲ ದೇಶಗಳ ಅಂಕಿಅಂಶಗಳನ್ನು ಪರಿಗಣಿಸಿದರೆ, ಭಾರತವು ಕೋವಿಡ್ ವಿರುದ್ಧ ಸಮರ್ಥವಾಗಿ ಹೋರಾಡು ತ್ತಿದೆ ಎಂಬುದು ಸರ್ಕಾರ ಪ್ರತಿಪಾದಿಸಿದೆ.
4,970 ಹೊಸ ಪ್ರಕರಣ: ಸೋಮವಾರದಿಂದ ಮಂಗಳವಾರದ ಅವಧಿಯಲ್ಲಿ 134 ಮಂದಿ ಮೃತಪಟ್ಟು, 4,970 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಈವರೆಗೆ 39,173 ಮಂದಿ ಗುಣ ಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.38.73ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದ ಒಟ್ಟಾರೆ ಸಾವಿನಲ್ಲೂ ಮಹಾರಾಷ್ಟ್ರವೇ ಮೊದಲ ಸ್ಥಾನದಲ್ಲಿದೆ.
ಪ್ರತಿ ಲಕ್ಷಕ್ಕೆ 7 ಮಂದಿ ಸೋಂಕಿತರು: ಭಾರತದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ ಕೇವಲ 7.1 ಜನರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ, ಇಡೀ ವಿಶ್ವದಲ್ಲಿ ಪ್ರತಿ ಒಂದು ಲಕ್ಷಕ್ಕೆ 60 ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,715 ರೋಗಿಗಳು ಗುಣಮುಖರಾಗಿದ್ದಾರೆ ಎಂದಿದೆ ಸರ್ಕಾರ. ಹೀಗಾಗಿ ಗುಣಮುಖ ರಾದವರ ಪ್ರಮಾಣ 38.29ರಷ್ಟಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಲಾಕ್ ಡೌನ್ 4.0ರಲ್ಲಿ ಹಲವಾರು ನಿರ್ಬಂಧಗಳನ್ನು ಸಡಿಲಗೊಳಿಸಿದ ಮೊದಲ ದಿನವೇ ಭಾರತದಲ್ಲಿ 5,242 ಸೋಂಕು ಪ್ರಕರಣಗಳು ದಾಖಲಾಗಿವೆ. ಅದೇ ದಿನ 157 ಸಾವುಗಳು ಸಂಭವಿಸಿವೆ.
ಲಕ್ಷ ಜನಸಂಖ್ಯೆಗೆ 0.2 ಸಾವು
ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 0.2 ಕೋವಿಡ್ ಸಾವುಗಳು ಸಂಭವಿಸುತ್ತಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಜಾಗತಿಕವಾಗಿ ಈ ಸಾವಿನ ಪ್ರಮಾಣ 4.1 ರಷ್ಟಿದೆ. ಜಗತ್ತಿನಾದ್ಯಂತ ಮೇ 19ರವರೆಗಿನ ಅಂಕಿಅಂಶಗಳ ಪ್ರಕಾರ, 3,11,847 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಅಂದರೆ ಒಂದು ಲಕ್ಷಕ್ಕೆ 4.1 ರಷ್ಟು ಮಂದಿ ಸಾವಿಗೀಡಾಗಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಒಂದು ಲಕ್ಷ ಜನರಿಗೆ 0.2 ಮಂದಿಯಷ್ಟೇ ಸಾವಿಗೀಡಾಗಿದ್ದಾರೆ ಎಂದಿದ್ದಾರೆ ಅಧಿಕಾರಿಗಳು. ಜತೆಗೆ, ದೇಶದಲ್ಲಿ ಮೇ 18ರಂದು 1,08,233 ಸ್ಯಾಂಪಲ್ ಗಳ ಪರೀಕ್ಷೆ ನಡೆದಿದ್ದು, ಈವರೆಗೆ ಒಟ್ಟು 24,25,742 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.