Advertisement

State Govt; ಉದ್ಯೋಗಮೇಳದಲ್ಲಿ 1 ಲಕ್ಷ ಆಕಾಂಕ್ಷಿಗಳು!

01:02 AM Feb 27, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಬೃಹತ್‌ ಉದ್ಯೋಗ ಮೇಳದಲ್ಲಿ ಸುಮಾರು 1 ಲಕ್ಷ ಮಂದಿ ಆಕಾಂಕ್ಷಿಗಳು ಪಾಲ್ಗೊಂಡು ದಾಖಲೆ ನಿರ್ಮಿಸಿದ್ದಾರೆ. ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಯುವಜನರು ಮೇಳದಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ಇನ್ನಷ್ಟು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ.

Advertisement

ರಾಜ್ಯ ಸರಕಾರ ನೀಡಿರುವ ಮಾಹಿತಿಯಂತೆ 1.06 ಲಕ್ಷ ಹುದ್ದೆಗಳನ್ನು ತುಂಬುವ ಗುರಿಯೊಂದಿಗೆ ಈ ಮೇಳ ಆಯೋಜಿಸಲಾಗಿದೆ. 80 ಸಾವಿರ ಮಂದಿ ಆನ್‌ಲೈನ್‌ ನೋಂದಣಿಯಾಗಿ, ಉಳಿದಂತೆ 15 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ಭಾಗಿಯಾಗಿದ್ದಾರೆ.

ಎಚ್‌ಸಿಎಲ್‌ ಟೆಕ್‌, ಫಾಕ್ಸ್‌ಕಾನ್‌, ಟೊಯೊಟಾ, ವಿಸ್ಟ್ರಾನ್‌, ಇನ್ಫೋಸಿಸ್‌, ಸ್ನೆ„ಡ್ಲರ್‌, ಮೊಲೆಕ್ಸ್‌, ಎಚ್‌ಡಿಎಫ್ಸಿ, ಬಯೋಕಾನ್‌, ಮಹೀಂದ್ರಾ ಏರೋಸ್ಪೇಸ್‌, ಟಾಟಾ ಗ್ರೂಪ್‌ನ ವಿವಿಧ ಸಂಸ್ಥೆಗಳು ಸೇರಿದಂತೆ ಸುಮಾರು 600 ಸಂಸ್ಥೆಗಳು ಈ ಮೇಳದಲ್ಲಿ ಭಾಗಿಯಾಗಿವೆ.

ಬೀದರ್‌, ಕಲಬುರಗಿ, ಯಾದಗಿರಿ, ವಿಜಯಪುರ, ಬಳ್ಳಾರಿ, ಬೆಳಗಾವಿ, ಧಾರವಾಡ ಹೀಗೆ ಬಹುತೇಕ ಎಲ್ಲ ಜಿಲ್ಲೆಗಳಿಂದ ಆಕಾಂಕ್ಷಿಗಳು ಮೇಳದಲ್ಲಿ ತಮ್ಮ ಸ್ವ ವಿವರಗಳನ್ನು ಸಲ್ಲಿಸಿದರು.

ಬೆರಳೆಣಿಕೆಯ ಸಂಸ್ಥೆಗಳು ಕಿರು ಸಂದರ್ಶನವನ್ನು ಮಾಡಿದವು. ಆದರೆ ಬಹುತೇಕ ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ಜನ ಹರಿದು ಬರುತ್ತಿದ್ದುದ್ದರಿಂದ, ಕಿರು ಸಂದರ್ಶನ ಕೈಬಿಟ್ಟು ಸ್ವ ವಿವರ ಸಂಗ್ರಹಕ್ಕಷ್ಟೇ ಸೀಮಿತವಾದವು.

Advertisement

ಉದ್ಯೋಗಮೇಳಕ್ಕೆ ಸಂಬಂಧಿಸಿದಂತೆ https://udyogamela.skillconnect.kaushalkar.com ಎಂಬ ಪ್ರತ್ಯೇಕ ಪೋರ್ಟಲ್‌ ಸ್ಥಾಪಿಸಲಾಗಿದೆ. ಅಧಿಕೃತ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 18005999918 ನ್ನು ಸಂಪರ್ಕಿಸಬಹುದು.

ಏನೇನು ನಡೆಯಿತು?
-ರಾಜ್ಯ ಸರಕಾರದ ಮಾಹಿತಿಯಂತೆ ಉದ್ಯೋಗ ಮೇಳ 1.06 ಲಕ್ಷ ಹುದ್ದೆ ತುಂಬುವ ಗುರಿ.
-80 ಸಾವಿರ ಮಂದಿ ಆನ್‌ಲೈನ್‌ ನೋಂದಣಿ, ಉಳಿದಂತೆ 15 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ಭಾಗಿ.
-ಮಂಗಳವಾರವೂ ಮೇಳ ಮುಂದುವರಿಕೆ, ಆಕಾಂಕ್ಷಿ ಗಳಿಗೆ ಪಾಲ್ಗೊಳ್ಳಲು ಮತ್ತೂ ಇದೆ ಅವಕಾಶ

ಉದ್ಯೋಗ ಸೃಷ್ಟಿಯ ಅಭಯ
ನಿರುದ್ಯೋಗಿ ಯುವಜನರಿಗೆ ಯುವನಿಧಿ ಕೊಡುವ ಜತೆಗೆ, ಉದ್ಯೋಗ ಸೃಷ್ಟಿಸಲಾಗುತ್ತದೆ. ಉದ್ಯೋಗಕ್ಕೆ ಸೂಕ್ತ ತರಬೇತಿಗಳನ್ನೂ ನೀಡಲಾಗುತ್ತದೆ. ಇದು ನಮ್ಮ ಸರಕಾರ ಯುವಜನರಿಗೆ ನೀಡುವ ಅಭಯ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next